ಸಾರಾಂಶ
ಸಚ್ಚಿದಾನಂದ ಆಗಿರಲಿ, ಬೇರೆ ಯಾರೇ ಆಗಿರಲಿ ನನ್ನೊಂದಿಗೆ ವಿಶ್ವಾಸದಿಂದ ಇದ್ದಾರೆ. ಅವರ ಮತ್ತು ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಮನೆಗೆ ಬರುವವರೆಲ್ಲರೂ ಅಂಬರೀಶ್ ಮೇಲಿನ ಪ್ರೀತಿ-ಗೌರವದಿಂದಲೇ ಬರುತ್ತಾರೆ. ಎಲ್ಲರೂ ನನ್ನಲ್ಲಿ ಆತ್ಮವಿಶ್ವಾಸ ತುಂಬಿ ಮಂಡ್ಯದಿಂದ ನೀವೇ ಕಣಕ್ಕಿಳಿಯಬೇಕೆಂದು ಒತ್ತಡ ಹೇರುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೇ ಸಿಗುವುದೆಂಬ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಪಕ್ಷ ಅದನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.ಟಿಕೆಟ್ ಸಿಗುವ ಭರವಸೆಯಿಂದಲೇ ನಾನು ಇಷ್ಟೊಂದು ವಿಶ್ವಾಸದಿಂದ ಇದ್ದೇನೆ. ಅದರ ಬಗ್ಗೆ ಭಯ-ಆತಂಕ ನನಗೇನೂ ಇಲ್ಲ. ಟಿಕೆಟ್ ಘೋಷಣೆಯಾದಾಗ ನಿಮಗೇ ತಿಳಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚ್ಚಿದಾನಂದ ಜೊತೆ ಅಸಮಾಧಾನವಿಲ್ಲ:ಸಚ್ಚಿದಾನಂದ ಆಗಿರಲಿ, ಬೇರೆ ಯಾರೇ ಆಗಿರಲಿ ನನ್ನೊಂದಿಗೆ ವಿಶ್ವಾಸದಿಂದ ಇದ್ದಾರೆ. ಅವರ ಮತ್ತು ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಮನೆಗೆ ಬರುವವರೆಲ್ಲರೂ ಅಂಬರೀಶ್ ಮೇಲಿನ ಪ್ರೀತಿ-ಗೌರವದಿಂದಲೇ ಬರುತ್ತಾರೆ. ಎಲ್ಲರೂ ನನ್ನಲ್ಲಿ ಆತ್ಮವಿಶ್ವಾಸ ತುಂಬಿ ಮಂಡ್ಯದಿಂದ ನೀವೇ ಕಣಕ್ಕಿಳಿಯಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕುದರಗುಂಡಿ ನಾಗೇಶ, ಮುಖಂಡರಾದ ನೀಲಕಂಠನಹಳ್ಳಿ ರಾಜು, ಜಿ.ಬಿ.ಕೃಷ್ಣ, ಕೆ.ಪಿ.ಕೃಷ್ಣಪ್ಪ, ಸತೀಶ್, ಕೋಣಸಾಲೆ ಜಯರಾಂ, ಮುಟ್ಟನಹಳ್ಳಿ ಮಹೇಂದ್ರ ಇದ್ದರು.ಜಾತಿ ಗಣತಿ ವಿಚಾರದಲ್ಲಿ ಗೊಂದಲವಿದೆ:
ಜಾತಿ ಗಣತಿ ವರದಿ ವಿಚಾರದಲ್ಲಿ ಒಂದಷ್ಟು ಗೊಂದಲ ಇದೆ, ಕೆಲವರು ನಾವು ಒಪ್ಪ್ಪೋಲ್ಲ ಎನ್ನುತ್ತಿದ್ದಾರೆ. ವರದಿ ಬಂದ ಮೇಲೆ ಅದರಲ್ಲಿ ಏನಾದರೂ ಲೋಪದೋಷಗಳಿವೆಯಾ ಎನ್ನುವುದು ಗೊತ್ತಾಗುತ್ತೆ ಎಂದ ಸುಮಲತಾ, ಕೆಆರ್‌ಎಸ್ ಸಮೀಪ ಟ್ರಯಲ್ ಬ್ಲಾಸ್ಟ್ ನಡೆಸುವುದು ಅಪಾಯಕಾರಿ ಬೆಳವಣಿಗೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.ಕಳೆದ ಬಾರಿ ಬಂದ ವೇಳೆ ಶ್ರೀನಿಮಿಷಾಂಬ ದೇಗುಲಕ್ಕೆ ಭೇಟಿ ನೀಡಿದ್ದೆ. ಶ್ರೀ ನಿಮಿಷಾಂಬ ಸನ್ನಿಧಿಯಲ್ಲಿ ಬಲಗಡೆ ಹೂ ಬಿದ್ದಿರೋದು ಶುಭ ಸೂಚನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನನಗೂ ತುಂಬಾ ಸಂತೋಷವಾಗಿದೆ. ದೇವಿಯ ಆಶೀರ್ವಾದ ನನಗೆ ಸಿಕ್ಕಿದೆ ಎಂದು ಭಾವಿಸಿರುವುದಾಗಿ ತಿಳಿಸಿದರು.