ಸಾರಾಂಶ
ಕಟಿಹಾರ್ (ಬಿಹಾರ): ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ವಿಜಯ ಸಾಧಿಸಿದಲ್ಲಿ ದೇಶಾದ್ಯಂತ ದಂಗೆ, ದೌರ್ಜನ್ಯ, ಬಡತನ ಮುಂತಾದ ಪಿಡುಗುಗಳು ಆರಂಭವಾಗುವ ಜೊತೆಗೆ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿ ಜನರು ಭಯದಲ್ಲಿ ಬದುಕಬೇಕಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಭಾನುವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಪ್ರತಿಪಕ್ಷವೊಂದು ತನ್ನ ಪ್ರಣಾಳಿಕೆಯಲ್ಲಿ ನಿಶ್ಶಸ್ತ್ರೀಕರಣಕ್ಕೆ ಆದ್ಯತೆ ನೀಡುವುದಾಗಿ ಪ್ರಕಟಿಸಿದೆ. ಅದರಂತೆ ಅವರು ಅಧಿಕಾರಕ್ಕೆ ಬಂದಲ್ಲಿ ನಕ್ಸಲರೂ ಸೇರಿದಂತೆ ಉಗ್ರರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ದೇಶವನ್ನು ಜಂಗಲ್ ರಾಜ್ ಮಾಡುತ್ತಾರೆ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನದೊಳಗೇ ನುಗ್ಗಿ ಉಗ್ರರ ಅಡಗುದಾಣವನ್ನು ಧ್ವಂಸಗೊಳಿಸಿದ್ದೇವೆ. ನಕ್ಸಲರ ನಿರ್ಮೂಲನೆಯಾಗಿದೆ. ಭಯೋತ್ಪಾದನೆ ನಿಗ್ರಹವಾಗಿದೆ’ ಎಂದು ಎಚ್ಚರಿಸಿದರು.
ಒಬಿಸಿಗಳಿಗೆ ಆದ್ಯತೆ:
ಇದೇ ವೇಳೆ ಒಬಿಸಿಗಳಿಗೆ ಬಿಜೆಪಿ ನೀಡಿರುವ ಆದ್ಯತೆ ಕುರಿತು ಮಾತನಾಡಿ, ‘ಬಿಜೆಪಿಯಿಂದ ದೇಶಕ್ಕೆ ಮೊದಲ ಒಬಿಸಿ ಪ್ರಧಾನಿ ಒಲಿದು ಬಂದಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಸಚಿವ ಸಂಪುಟದಲ್ಲಿ ಶೇ.35 ಒಬಿಸಿ ಸಮುದಾಯಕ್ಕೆ ಸೇರಿದ ಸಚಿವರೇ ಇದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಕಾಲೇಲ್ಕರ್ ಕಮಿಷನ್ ವರದಿಯಲ್ಲೇ ಕಾಲ ಹಾಕುತ್ತಿದೆ. ಆದರೆ ನಮ್ಮ ಸರ್ಕಾರ ಒಬಿಸಿ ಕಮಿಷನ್‌ಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡುವ ಮೂಲಕ ಅವರಿಗೆ ನಿಜವಾದ ಗೌರವವನ್ನು ನೀಡಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಡಬಲ್ ಎಂಜಿನ್ ಸರ್ಕಾರವನ್ನು ಆರಿಸಿ:
ಬಿಹಾರದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಆರಿಸುವಂತೆ ಕರೆ ಕೊಡುತ್ತಾ, ‘ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದರೆ ನಿಮಗೆ ಡಬಲ್ ಎಂಜಿನ್ ಸರ್ಕಾರದ ಲಾಭ ಸಿಗಲಿದೆ. ಯುಪಿಎ ಅವಧಿಯಲ್ಲಿ ಬಿಹಾರಕ್ಕೆ ಕೇವಲ 2.8 ಲಕ್ಷ ಕೋಟಿ ರು. ಅನುದಾನ ನೀಡಿದ್ದರೆ, ಎನ್‌ಡಿಎ ಅವಧಿಯಲ್ಲಿ ಬರೋಬ್ಬರಿ 9.23 ಲಕ್ಷ ಕೋಟಿ ರು. ಅನುದಾನ ನೀಡಿದೆ. ಇಂಡಿಯಾ ಮೈತ್ರಿಕೂಟವನ್ನು ಆರಿಸಿದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಜೊತೆಗೆ ಬೀದಿದೀಪದ ಅಂಧಕಾರದ ಯುಗಕ್ಕೆ ಕೊಂಡೊಯ್ಯಲಿದೆ’ ಎಂದು ಪರೋಕ್ಷವಾಗಿ ಆರ್‌ಜೆಡಿ ಪಕ್ಷದ ಚಿಹ್ನೆಯನ್ನು ಉಲ್ಲೇಖಿಸಿ ಟೀಕೆ ಮಾಡಿದರು.