ಸಾರಾಂಶ
ಬೂತ್ ಮಟ್ಟದಿಂದ ಅಧ್ಯಕ್ಷರ ಬದಲಾವಣೆ ಆಗುತ್ತಿದೆ, ರಾಜ್ಯ ಮಟ್ಟದಲ್ಲಿ ಸಹ ಬದಲಾವಣೆ ಆಗುತ್ತೆ. ನಾನು ರಾಜ್ಯಾಧ್ಯಕ್ಷರ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳೋದಿಲ್ಲ. ಅವಕಾಶ ಸಿಕ್ಕಲ್ಲಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಶಿವಮೊಗ್ಗ : ಬೂತ್ ಮಟ್ಟದಿಂದ ಅಧ್ಯಕ್ಷರ ಬದಲಾವಣೆ ಆಗುತ್ತಿದೆ, ರಾಜ್ಯ ಮಟ್ಟದಲ್ಲಿ ಸಹ ಬದಲಾವಣೆ ಆಗುತ್ತೆ. ನಾನು ರಾಜ್ಯಾಧ್ಯಕ್ಷರ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳೋದಿಲ್ಲ. ಅವಕಾಶ ಸಿಕ್ಕಲ್ಲಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 30 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ಒಬಿಸಿ ಸಮುದಾಯಕ್ಕೆ ಪರಿಗಣಿಸಿದರೆ ನನ್ನನ್ನು ಪರಿಗಣಿಸಿ ಎಂದಿದ್ದೇನೆ. ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗಬಹುದು ಎಂಬ ನಿರೀಕ್ಷೆ ಇದೆ. ನನಗೂ ಬೇಕಿದ್ದರೆ ಕೊಡಲಿ ಸ್ಥಾನ ನಿರ್ವಹಿಸುತ್ತೇನೆ. ಒಬಿಸಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲಾ ಸಮಾಜಗಳನ್ನು ಒಟ್ಟಿಗೆ ತಗೆದುಕೊಂಡು ಹೋಗಲು ಸಹಕಾರಿ ಆಗಲಿದೆ. ಅವಕಾಶ ಕೊಟ್ಟರೆ ನೂರಕ್ಕೆ ನೂರು ಅಧ್ಯಕ್ಷ ಸ್ಥಾನ ನಿಭಾಹಿಸುತ್ತೇನೆ ಎಂದರು.
ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತ ವಿಚಾರದ ಬಗ್ಗೆ ಮಾತನಾಡಿದ ಅವರು, ಬಣ ರಾಜಕೀಯ ಅಂತ ಅಲ್ಲ. ನಮ್ಮ ಅನಿಸಿಕೆಗಳನ್ನು ಹೈ ಕಮಾಂಡ್ ಗೆ ತಿಳಿಸಿದ್ದೇವೆ. ಸೂಕ್ತವಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನ ಹೈಕಮಾಂಡ್ ತಗೆದುಕೊಳ್ಳುತ್ತಾರೆ. ಎಲ್ಲರನ್ನು ಜೊತೆಗೆ ಕರೆದುಕೊಂಡು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ತಯಾರಿ ನಡಿಬೇಕು ಅಂದಿದ್ದೇವೆ. ರೇಣುಕಾಚಾರ್ಯ ಅವರು ಸಭೆ ನಡೆಸುತ್ತಿರೊದು ಏನು ತಪ್ಪಿಲ್ಲ. ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಹೈ ಕಮಾಂಡ್ ಹೇಳಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.