ಸೌಮ್ಯಾ ರೆಡ್ಡಿ ಗೆದ್ದರೆ ಕೇಂದ್ರದಲ್ಲಿ ಗಟ್ಟಿ ಧ್ವನಿ; ಡಿ.ಕೆ.ಶಿವಕುಮಾರ್‌

| Published : Apr 16 2024, 02:07 AM IST / Updated: Apr 16 2024, 04:33 AM IST

ಸೌಮ್ಯಾ ರೆಡ್ಡಿ ಗೆದ್ದರೆ ಕೇಂದ್ರದಲ್ಲಿ ಗಟ್ಟಿ ಧ್ವನಿ; ಡಿ.ಕೆ.ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಒಕ್ಕಲಿಗರಿಗೆ ಅನ್ಯಾಯ ಮಾಡಿದವರೊಂದಿಗೆ ಜೆಡಿಎಸ್‌ ಕೈ ಜೋಡಿಸಿದ್ದು, ಚುನಾವಣೆಯಲ್ಲಿ ಒಕ್ಕಲಿಗರಿಗೆ ಮೋಸ ಮಾಡಿದವರಿಗೆ ಬುದ್ಧಿ ಕಲಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕರೆ ನೀಡಿದರು.

  ಬೆಂಗಳೂರು : ಒಕ್ಕಲಿಗರಿಗೆ ಅನ್ಯಾಯ ಮಾಡಿದವರೊಂದಿಗೆ ಜೆಡಿಎಸ್‌ ಕೈ ಜೋಡಿಸಿದ್ದು, ಚುನಾವಣೆಯಲ್ಲಿ ಒಕ್ಕಲಿಗರಿಗೆ ಮೋಸ ಮಾಡಿದವರಿಗೆ ಬುದ್ಧಿ ಕಲಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕರೆ ನೀಡಿದರು.

ನಗರದ ಗಾಯನ ಸಮಾಜದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಒಕ್ಕಲಿಗ ಸಮುದಾಯದ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ನಾವು ಒಕ್ಕಲಿಗರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಒಕ್ಕಲಿಗ ಸೇರಿದಂತೆ ಎಲ್ಲ ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ಆದರೆ, ಜೆಡಿಎಸ್‌ ಮತ್ತು ಬಿಜೆಪಿ ಒಕ್ಕಲಿಗ ಸಮುದಾಯಕ್ಕೆ ಏನೆಲ್ಲ ಅನ್ಯಾಯ ಮಾಡಿದೆ ಎಂಬುದು ಜನರಿಗೆ ಹಾಗೂ ಒಕ್ಕಲಿಗ ನಾಯಕರಿಗೆ ತಿಳಿದಿದೆ. ಅದಕ್ಕೆ ಚುನಾವಣೆಯಲ್ಲಿ ಉತ್ತರ ನೀಡಬೇಕಿದೆ ಎಂದರು.

ರಾಜ್ಯ ಸರ್ಕಾರದಲ್ಲಿ ನಾನೂ ಸೇರಿದಂತೆ ಒಕ್ಕಲಿಗ ಸಮುದಾಯಕ್ಕೆ ಸೇರಿದ 7 ಮಂದಿ ಸಚಿವರಿದ್ದಾರೆ, 11 ಜನರಿಗೆ ಸಂಪುಟ ದರ್ಜೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಒಕ್ಕಲಿಗರಿಗೆ ಎಲ್ಲೆಲ್ಲಿ ಪ್ರಾತಿನಿಧ್ಯ ನೀಡಬೇಕೋ ಅಲ್ಲಿ ಸ್ಥಾನಮಾನ ಕಲ್ಪಿಸಿದ್ದೇವೆ ಎಂದು ತಿಳಿಸಿದರು.

ಭಾವುಕರಾದ ಡಿಕೆಶಿ

ಒಕ್ಕಲಿಗರೆಲ್ಲರೂ ಒಂದಾಗಿ ಅನ್ಯಾಯ ಮಾಡಿದವರ ವಿರುದ್ಧ ಹೋರಾಡಬೇಕಿದೆ. ನಾನು ಏನೇ ಮಾಡಿದರೂ ಸುಮ್ಮನೆ ಆರೋಪ ಮಾಡುತ್ತಾರೆ. ನಾನು ಅನ್ಯಾಯ ಮಾಡಿದ್ದರೆ ಶಿಕ್ಷೆಯಾಗಲಿ. ಆದರೆ, ಒಕ್ಕಲಿಗ ಸಮುದಾಯ ಸೇರಿದಂತೆ ಸಮಾಜದ ಒಳಿತಿಗಾಗಿ ಕೆಲಸ ಮಾಡಿದರೂ ವಿಪಕ್ಷಗಳು ಸುಖಾಸುಮ್ಮನೆ ಅಪರಾಧಿ ಎಂಬಂತೆ ಬಿಂಬಿಸುತ್ತಾರೆ ಎಂದು ಭಾವುಕರಾದರು.

ಸಚಿವರಾದ ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಶಾಸಕ ಪ್ರಿಯಾ ಕೃಷ್ಣ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸೌಮ್ಯಾ ರೆಡ್ಡಿ, ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಿ. ಹನುಮಂತಯ್ಯ, ಸಂಘದ ನಿರ್ದೇಶಕರು ಇದ್ದರು.ಸೌಮ್ಯಾ ಗೆದ್ದರೆ ರಾಜ್ಯ ಅಭಿವೃದ್ಧಿ:

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಬೇಕು. ಅವರು ಗೆದ್ದರೆ ಮೇಕೆದಾಟು, ರಾಜ್ಯಕ್ಕಾಗುತ್ತಿರುವ ಜಿಎಸ್‌ಟಿ ಪಾಲು ವಿತರಣೆಯಲ್ಲಿನ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುತ್ತಾರೆ. ಅಮೆರಿಕದಲ್ಲಿ ವ್ಯಾಸಂಗ ಮಾಡಿ ಜ್ಞಾನ ಹೊಂದಿರುವ, ಸಮಾಜದ ಏಳಿಗೆ ಬಗ್ಗೆ ಕಾಳಜಿ ಇರುವ ನಾಯಕಿ. ಶಾಸಕಿಯಾಗಿದ್ದಾಗ ಹಲವು ಸಮಾಜಮುಖಿ ಕೆಲಸ ಮಾಡಿದ್ದರು. ಈಗ ಲೋಕಸಭಾ ಸದಸ್ಯೆಯಾಗಿ ಕೆಲಸ ಮಾಡುವ ಉತ್ಸಾಹದಲ್ಲಿದ್ದಾರೆ. ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಹೊಣೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.