ಸಾರಾಂಶ
ಕುಕನೂರು : ‘ನಿಮಗೆ ಅಕ್ಕಿ ಬ್ಯಾಡ, ಇನ್ನೊಂದು ಬ್ಯಾಡ ಅಂದ್ರ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ರಸ್ತೆ ಬೇಕು ಅಂದ್ರೆ ಅಕ್ಕಿ ಸೇರಿದಂತೆ ಎಲ್ಲವೂ ಬಂದ್ ಆಗತ್ತಾವ’ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಆ ಮೂಲಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇದೆ ಎಂದು ಮತ್ತೊಮ್ಮೆ ಪರೋಕ್ಷವಾಗಿ ಅವರು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರ್‍ಯಾವಣಿಕದಲ್ಲಿ ಶನಿವಾರ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರೊಬ್ಬರು, ‘ನಮ್ಮ ಹೊಲಕ್ಕ ಹೋಗುವ ರಸ್ತೆ ಮಾಡಿಕೊಡ್ರೀ’ ಎಂದು ಮನವಿ ಮಾಡಿದಾಗ ರಾಯರಡ್ಡಿ, ‘ನಿಂಗೆ ರಸ್ತೆ ಬೇಕು ಅಂದ್ರೆ ಅಕ್ಕಿ, ಎಲ್ಲವೂ ಬಂದ್ ಮಾಡೋಕೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲಹೆ ಕೊಟ್ಟುಬಿಡ್ತೀನಿ’ ಎಂದರು.
ಆಗ, ‘ರೈತ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಕೊಡುತ್ತೀರಿ. ಕೊನೆಯ ಪಕ್ಷ ನಮಗೆ ಜಮೀನಿಗೆ ತೆರಳಲು ರಸ್ತೆಯನ್ನಾದರೂ ಮಾಡಿಸಿ ಕೊಡಿ’ ಎಂದು ಆ ರೈತ ಏರುಧ್ವನಿಯಲ್ಲಿ ಕೇಳಿದರು. ಆಗ ರಾಯರಡ್ಡಿ, ‘ಇನ್ನೂ ಮೂರು ವರ್ಷ ನಮ್ಮದೇ ಸರ್ಕಾರವಿರುತ್ತದೆ. ಖಂಡಿತಾ ರಸ್ತೆ ಮಾಡಿ ಕೊಡುತ್ತೇವೆ’ ಎಂದು ಭರವಸೆ ನೀಡಿದರು.
ಇದೇ ವೇಳೆ, ‘ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ನನಗೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮಾತ್ರ ಗೊತ್ತಿದೆ’ ಎಂದೂ ಅವರು ಹೇಳಿದರು.
- ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನಲ್ಲಿ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಯರಡ್ಡಿ
- ಕಾರ್ಯಕ್ರಮದ ವೇಳೆ ರೈತರೊಬ್ಬರು ‘ನಮ್ಮ ಹೊಲಕ್ಕೆ ಹೋಗುವ ರಸ್ತೆ ಮಾಡಿಕೊಡ್ರೀ’ ಎಂದು ಶಾಸಕರಿಗೆ ಕೋರಿದರು
- ನಿಂಗೆ ರಸ್ತೆ ಬೇಕು ಅಂದ್ರೆ ಅಕ್ಕಿ, ಎಲ್ಲವೂ ಬಂದ್ ಮಾಡೋಕೆ ಸಿಎಂ ಸಿದ್ದರಾಮಯ್ಯಗೆ ಸಲಹೆ ಕೊಡ್ತೀನಿ ಎಂದ ರಾಯರಡ್ಡಿ
- ಮಹಿಳೆಯರಿಗೆ ಹಣ ಕೊಡ್ತೀರಿ, ನಮಗೆ ರಸ್ತೆ ಮಾಡಿಕೊಡಿ ಎಂದಾಗ, ಇನ್ನೂ ಮೂರು ವರ್ಷ ಸಮಯವಿದೆ ಎಂದ ಶಾಸಕ
- ಇದೇ ವೇಳೆ, ಆರ್ಥಿಕ ಪರಿಸ್ಥಿತಿ ಬಗ್ಗೆ ನನಗೆ ಹಾಗೂ ಸಚಿವ ಕೃಷ್ಣ ಬೈರೇಗೌಡಗೆ ಮಾತ್ರ ಚೆನ್ನಾಗಿ ಗೊತ್ತಿದೆ ಎಂದು ಘೋಷಣೆ