ಸಾರಾಂಶ
ದೋಸ್ತಿ ಜಗಳದ ಬೆನ್ನಲ್ಲೇ ಬಳ್ಳಾರಿ ಗಣಿ ಧಣಿ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕಾನೂನು ಸಂಕಷ್ಟ ಎದುರಾಗಿದ್ದು, ರೆಡ್ಡಿ ಅವರ ವಿರುದ್ಧ ಅಭಿಯೋಜನೆ (ಪ್ರಾಸಿಕ್ಯೂಷನ್)ಗಾಗಿ ರಾಜ್ಯಪಾಲರಿಗೆ ಕನ್ನಡದಲ್ಲಿ ತರ್ಜುಮೆಗೊಂಡ ವರದಿ ಸಲ್ಲಿಸಿ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ದೋಸ್ತಿ ಜಗಳದ ಬೆನ್ನಲ್ಲೇ ಬಳ್ಳಾರಿ ಗಣಿ ಧಣಿ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕಾನೂನು ಸಂಕಷ್ಟ ಎದುರಾಗಿದ್ದು, ರೆಡ್ಡಿ ಅವರ ವಿರುದ್ಧ ಅಭಿಯೋಜನೆ (ಪ್ರಾಸಿಕ್ಯೂಷನ್)ಗಾಗಿ ರಾಜ್ಯಪಾಲರಿಗೆ ಕನ್ನಡದಲ್ಲಿ ತರ್ಜುಮೆಗೊಂಡ ವರದಿ ಸಲ್ಲಿಸಿ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.
ಮೂರು ದಿನಗಳ ಹಿಂದೆ ರಾಜಭವನಕ್ಕೆ ಜನಾರ್ದನ ರೆಡ್ಡಿ ವಿರುದ್ಧ 5500 ಪುಟಗಳ ದೋಷಾರೋಪ ವರದಿ ಜತೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಲೋಕಾಯುಕ್ತ ಡಿವೈಎಸ್ಪಿ ತಿಪ್ಪೇಸ್ವಾಮಿ ಮನವಿ ಪತ್ರ ಸಲ್ಲಿಸಿದ್ದಾರೆ. ತನ್ಮೂಲಕ ಪ್ರಾಸಿಕ್ಯೂಷನ್ ವಿವಾದದ ಚೆಂಡು ಮತ್ತೆ ರಾಜಭವನ ಅಂಗಳಕ್ಕೆ ಬಿದ್ದಿದ್ದು, ರಾಜ್ಯಪಾಲರ ನಿರ್ಧಾರದೆಡೆಗೆ ಕುತೂಹಲ ಮೂಡಿದೆ.
ಇನ್ನೊಂದೆಡೆ ತಮ್ಮ ಮಿತ್ರ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಸಿಡಿದು ರಾಜಕೀಯ ಸಮರಕ್ಕಿಳಿದಿದ್ದ ಜನಾರ್ದನ ರೆಡ್ಡಿ ಅವರಿಗೆ ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕಾನೂನು ಸಂಕಟ ಶುರುವಾಗಿದೆ.
ಆರು ತಿಂಗಳ ಹಿಂದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಭಾಷಾ ಸಮಸ್ಯೆ ಮುಂದಿಟ್ಟು ಲೋಕಾಯುಕ್ತ ಪೊಲೀಸರಿಗೆ ಕಡತಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಮರಳಿಸಿದ್ದರು. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣದ ಆರೋಪಪಟ್ಟಿಯನ್ನು ಕನ್ನಡದಿಂದ ಇಂಗ್ಲೀಷ್‌ಗೆ ಪೊಲೀಸರು ಭಾಷಾಂತರಿಸಿ ಸಲ್ಲಿಸಿದ್ದಾರೆ.
ಇನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಮಂಜೂರಾತಿ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ಕೊಟ್ಟಿದ್ದ ರಾಜ್ಯಪಾಲರು ತೀರ್ಮಾನವು ರಾಜ್ಯದಲ್ಲಿ ಆಡಳಿತ- ವಿರೋಧ ಪಕ್ಷಗಳ ನಡುವೆ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಸಮ್ಮತಿಗೆ ರಾಜ್ಯಪಾಲರು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು.
ರೆಡ್ಡಿ ವಿರುದ್ಧ 5,500 ಪುಟಗಳ ವರದಿ ಸಲ್ಲಿಕೆ
10 ವರ್ಷಗಳ ಹಿಂದೆ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರೇರಿತವಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು, ಆರೋಪಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ 2024ರ ಮೇ 31ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಕೋರಿಕೆ ಸ್ವೀಕರಿಸಿದ್ದ ರಾಜ್ಯಪಾಲರು, ಆನಂತರ ಕಡತಗಳನ್ನು ಕನ್ನಡದಿಂದ ಇಂಗ್ಲೀಷ್‌ಗೆ ತರ್ಜುಮೆ ಮಾಡಿ ಸಲ್ಲಿಸುವಂತೆ ಸೂಚಿಸಿ ಲೋಕಾಯುಕ್ತ ಪೊಲೀಸರಿಗೆ ಮರಳಿಸಿದ್ದರು.
ಕೊನೆಗೆ ಲೋಕಾಯುಕ್ತ ಪೊಲೀಸರು, ರಾಜ್ಯ ಇ-ಆಡಳಿತ ಇಲಾಖೆಯ ಅಧಿಕೃತ ಭಾಷಾಂತರ ತಜ್ಞರ ಮೂಲಕ ರೆಡ್ಡಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಅನುವಾದ ಮಾಡಿಸಿ 5,500 ಪುಟಗಳ ವರದಿಯನ್ನು ಸಿದ್ದಪಡಿಸಿದ್ದರು. ಈ ವರದಿಯನ್ನು ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬೀಕರ್ ಹಾಗೂ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್‌ರವರ ಪರಿಶೀಲನೆ ಬಳಿಕ ರಾಜ್ಯಪಾಲರಿಗೆ ತನಿಖಾಧಿಕಾರಿಯೂ ಡಿವೈಎಸ್ಪಿ ತಿಪ್ಪೇಸ್ವಾಮಿ ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಎಚ್‌ಡಿಕೆ ವಿರುದ್ಧ ಶೀಘ್ರ ಸಲ್ಲಿಕೆ
ಇನ್ನೊಂದೆಡೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೋರಲು ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಅಕ್ರಮ ಗಣಿಗಾರಿಕೆ ಮಂಜೂರಾತಿ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧದ ದೋಷಾರೋಪ ಪಟ್ಟಿಯನ್ನು ಅನುವಾದ ಮಾಡುವ ಕಾರ್ಯ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ರಾಜ್ಯಪಾಲರಿಗೆ ಆ ವರದಿ ರವಾನೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.