ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ವಿರುದ್ಧ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವು ಯುವ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ.

ಮಂಡಿ (ಹಿಮಾಚಲ ಪ್ರದೇಶ): ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ವಿರುದ್ಧ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವು ಯುವ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ವತಿಯಿಂದ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಇಬ್ಬರ ನಡುವೆ ಕ್ಷೇತ್ರದಲ್ಲಿ ಭಾರೀ ಜಿದ್ದಾಜಿದ್ದಿ ಏರ್ಪಡುವುದು ನಿಶ್ಚಿತವಾಗಿದೆ.

ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾಗೆ ಟಿಕೆಟ್‌ ನೀಡಿದಾಗಿನಿಂದಲೂ ಕಾಂಗ್ರೆಸ್‌ ನಾಯಕರು ಒಂದಿಲ್ಲೊಂದು ರೀತಿಯಲ್ಲಿ ಆಕೆಯ ಕುರಿತು ಟೀಕೆ ಮಾಡುತ್ತಾ ವಿವಾದಕ್ಕೆ ಗುರಿಯಾಗಿದ್ದರು. ಮಂಡಿಯಲ್ಲಿ ಕಂಗನಾರ ರೇಟ್‌ ಎಷ್ಟು ಎಂದು ಕೇಳುವ ಮೂಲಕ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೇತ್‌ ವಿವಾದ ಸೃಷ್ಟಿಸಿದ್ದರು. ಇದೀಗ ರಾಜ್ಯದಲ್ಲಿ ಪಿಡಬ್ಲುಡಿ ಮಂತ್ರಿಯಾಗಿರುವ ಪ್ರಭಾವಿ ನಾಯಕ ವಿಕ್ರಮಾದಿತ್ಯ ಸಿಂಗ್‌ ಅವರಿಗೆ ಟಿಕೆಟ್‌ ನೀಡುವ ಮೂಲಕ ಕಂಗನಾರಿಗೆ ಪ್ರಬಲ ಸ್ಪರ್ಧೆ ಒಡ್ಡಲು ಕಾಂಗ್ರೆಸ್‌ ತಯಾರಾಗಿದೆ. ಈವರೆಗೂ ಈ ಕ್ಷೇತ್ರಕ್ಕೆ ತಾಯಿ ಪ್ರತಿಭಾ ಸಿಂಗ್‌ ಸಂಸದೆ ಆಗಿದ್ದರು.

ಇದರ ಜೊತೆಗೆ ಕಾಂಗ್ರೆಸ್‌ ಪಕ್ಷವು ಹಿರಿಯ ನಾಯಕ ಮನೀಶ್‌ ತಿವಾರಿಗೆ ಚಂಡೀಗಢದಿಂದ ಟಿಕೆಟ್‌ ನೀಡಿದೆ. ಹಿಮಾಚಲ ಪ್ರದೇಶದಲ್ಲಿ ಎಲ್ಲ ಕ್ಷೇತ್ರಗಳಿಗೆ ಜೂ.1ರಂದು ಏಕಕಾಲದಲ್ಲಿ ಕಡೆಯ ಹಂತದಲ್ಲಿ ಮತದಾನ ನಡೆಯಲಿದೆ.

ಯಾರು ಈ ವಿಕ್ರಮಾದಿತ್ಯ ಸಿಂಗ್‌?: ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್‌ ಪುತ್ರರಾಗಿರುವ ವಿಕ್ರಮಾದಿತ್ಯ ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಂಧಾನ ಮಾಡಿದ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದರು.