ಸಾರಾಂಶ
‘ಪ್ರಧಾನಿ ನರೇಂದ್ರ ಮೋದಿ ಹೆಣೆದ ಆಧುನಿಕ ಚಕ್ರವ್ಯೂಹದಲ್ಲಿ ಭಾರತ ಇಂದು ಸಿಲುಕಿದೆ. ಮಹಾಭಾರತದ ಯುದ್ಧದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವಿನ ಜಾಗದಲ್ಲಿ ಇಂದು ಭಾರತದ ಯುವಕರು, ಮಹಿಳೆಯರು, ರೈತರು ಮತ್ತು ಸಣ್ಣ ಉದ್ಯಮಿಗಳು ಇದ್ದಾರೆ’
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಹೆಣೆದ ಆಧುನಿಕ ಚಕ್ರವ್ಯೂಹದಲ್ಲಿ ಭಾರತ ಇಂದು ಸಿಲುಕಿದೆ. ಮಹಾಭಾರತದ ಯುದ್ಧದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವಿನ ಜಾಗದಲ್ಲಿ ಇಂದು ಭಾರತದ ಯುವಕರು, ಮಹಿಳೆಯರು, ರೈತರು ಮತ್ತು ಸಣ್ಣ ಉದ್ಯಮಿಗಳು ಇದ್ದಾರೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅವರ ಮಾತು ಬಿಜೆಪಿಗರ ಆಕ್ರೋಶಕ್ಕೆ ತುತ್ತಾಗಿದ್ದು, ಆಡಳಿತ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರಾಹುಲ್, ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯುತ್ತಾರೆ. ಯುದ್ಧದಲ್ಲಿ ಸೇನಾಪಡೆಯನ್ನು ಕಮಲದ ಆಕಾರದಲ್ಲಿ ನಿಯೋಜಿಸಿ ಚಕ್ರವ್ಯೂಹ ರಚಿಸಲಾಗುತ್ತದೆ. ಈಗ 21ನೇ ಶತಮಾನದ ಚಕ್ರವ್ಯೂಹವನ್ನೂ ಕಮಲದ ಆಕಾರದಲ್ಲೇ ರಚಿಸಲಾಗಿದೆ. ಪ್ರಧಾನಿ ಮೋದಿ ತಮ್ಮ ಎದೆಯ ಮೇಲೆ ಕಮಲವನ್ನು ಧರಿಸುತ್ತಾರೆ ಎಂದು ಕಿಡಿಕಾರಿದರು.
6 ಜನರು ಸೇರಿ ರಚಿಸಿದ ವ್ಯೂಹ:
ಮಹಾಭಾರತದ ಚಕ್ರವ್ಯೂಹವನ್ನು ಆರು ಜನರು ಸೇರಿ ರಚಿಸಿದ್ದರು. ಈಗಿನ ಚಕ್ರವ್ಯೂಹವನ್ನೂ ಮೋದಿ ನೇತೃತ್ವದಲ್ಲಿ ಆರು ಜನರೇ ರಚಿಸಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇಬ್ಬರು ಉದ್ಯಮಿಗಳಾದ ರಿಲಯನ್ಸ್‌ನ ಅಂಬಾನಿ ಮತ್ತು ಅದಾನಿ ಗ್ರೂಪ್‌ನ ಅದಾನಿ ಅವರೇ ಆ ಆರು ಜನರು ಎಂದು ರಾಹುಲ್ ಹೇಳಿದರು.
ಚಕ್ರವ್ಯೂಹದ ಹಿಂದೆ 3 ದುಷ್ಟಶಕ್ತಿ:
ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ ಆಧುನಿಕ ಚಕ್ರವ್ಯೂಹದ ಹಿಂದೆ ಮೂರು ಶಕ್ತಿಗಳಿವೆ. ಒಂದು- ಏಕಸ್ವಾಮ್ಯ. ಇಬ್ಬರು ಉದ್ಯಮಿಗಳ ಕೈಗೆ ಇಡೀ ದೇಶದ ಸಂಪತ್ತನ್ನು ನೀಡುವ ಮೂಲಕ ಹಣಕಾಸು ಬಲವನ್ನು ನಿಯಂತ್ರಿಸುವುದು. ಎರಡು- ಸಿಬಿಐ, ಇ.ಡಿ., ಆದಾಯ ತೆರಿಗೆ ಮುಂತಾದ ಸಂಸ್ಥೆಗಳನ್ನು ನಿಯಂತ್ರಿಸುವ ಮೂಲಕ ತಮಗೆ ಆಗದವರನ್ನು ನಿಗ್ರಹಿಸುವುದು. ಮೂರು- ರಾಜಕೀಯ ಶಕ್ತಿ. ಈ ಮೂರು ಶಕ್ತಿಗಳು ಮೋದಿಯ ಚಕ್ರವ್ಯೂಹದ ಹಿಂದಿವೆ ಮತ್ತು ದೇಶವನ್ನು ನಿರ್ನಾಮ ಮಾಡುತ್ತಿವೆ ಎಂದು ಆರೋಪಿಸಿದರು.
ಭಯದಲ್ಲಿ ಸಿಲುಕಿದ ದೇಶ:
‘ದೇಶದ ಯುವಕರನ್ನು ಅಗ್ನಿವೀರ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದೀರಿ. ನಿಮ್ಮ ಜಾಲವು ಕೋಟ್ಯಂತರ ಜನರಿಗೆ ತೊಂದರೆ ಉಂಟುಮಾಡುತ್ತಿದೆ. ನಾವು ಈ ಚಕ್ರವ್ಯೂಹವನ್ನು ಭೇದಿಸುತ್ತೇವೆ. ಆ ಭೀತಿಯಿಂದಲೇ ನೀವು ಜಾತಿ ಗಣತಿ ನಡೆಸುತ್ತಿಲ್ಲ’ ಮೋದಿ ಉದ್ದೇಶಿಸಿ ರಾಹುಲ್ ಹೇಳಿದರು.
ದೇಶ ಇಂದು ಭಯದಲ್ಲಿ ಬದುಕುತ್ತಿದೆ. ಬಿಜೆಪಿಯವರು ಕೂಡ ಭಯದಲ್ಲೇ ಇದ್ದಾರೆ. ಆದರೂ ನಗುತ್ತಿದ್ದಾರೆ. ಆ ಪಕ್ಷದಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಪ್ರಧಾನಿಯಾಗುವ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವರು ಪ್ರಧಾನಿಯಾಗಲು ಹೊರಟರೆ ದೊಡ್ಡ ಸಮಸ್ಯೆ ಶುರುವಾಗುತ್ತದೆ. ಇದೇ ರೀತಿಯ ಭೀತಿ ಇಡೀ ದೇಶವನ್ನು ಆವರಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.