ಸಾರಾಂಶ
ಶ್ರೀನಿವಾಸಪುರ : ಕೈಗಾರಿಕಾ ವಲಯಗಳು ಕೇವಲ ನಗರ ಪ್ರದೇಶಗಳ ವ್ಯಾಪ್ತಿಗೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಭಾಗಗಳಲ್ಲೂ ಸ್ಥಾಪನೆಯಾದರೆ ಬಡವರ ಮಕ್ಕಳು ದೂರದ ಪ್ರದೇಶಗಳಿಗೆ ಕೆಲಸ ಅರಿಸಿ ಹೋಗಿ ಅನುಭವಿಸುವ ಬದಲಿಗೆ ಅವರವರ ಗ್ರಾಮಗಳ ಬಳಿಯೇ ಉದ್ಯೋಗ ಮಾಡಿ ತಂದೆ ತಾಯಿಯೊಂದಿಗೆ ನೆಮ್ಮದಿಯ ಜೀವನ ಮಾಡುವಂತಾಗಬೇಕೆಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಯಲ್ದೂರು ಸಮೀಪದ ಯದುರೂರು ರೈತರ ಸಭೆಯಲ್ಲಿ ಮಾತನಾಡಿ, ಆಂಧ್ರದ ಗಡಿ ಅಂಚಿನಲ್ಲಿ ಶ್ರೀನಿವಾಸಪುರ ತಾಲೂಕಿನ ಯುವಜನತೆ ಜೀವನ ಕಟ್ಟಿಕೊಳ್ಳಲು ತಂದೆ, ತಾಯಿ ಕುಟುಂಬವನ್ನು ಬಿಟ್ಟು ದೂರದ ನಗರ ಪ್ರದೇಶಗಳಿಗೆ ಉದ್ಯೋಗ ಹರಿಸಿ ಹೋಗಬೇಕಾದ ಪರಿಸ್ಥಿತಿ ಉದ್ಭವಿಸಿದೆ ಎಂದರು.
ಕೈಗಾರಿಕಾ ವಲಯ ಸ್ಥಾಪನೆ
ನಮ್ಮದೇ ತಾಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ ನಮ್ಮ ಯುವಕರಿಗೆ ಯಾಕೆ ಉದ್ಯೋಗ ಕಲ್ಪಿಸಿಕೊಡಬಾರದೆಂಬ ಆಸೆಯೊಂದಿಗೆ ತಾಲ್ಲೂಕಿನ ಯದುರೂರು ಮತ್ತು ರಾಯಲ್ಪಾಡು ಬಳಿ ಕೈಗಾರಿಕಾ ವಲಯ ಸ್ಥಾಪನೆಗೆ ರೂಪುರೇಶೆ ಸಿದ್ದಗೊಳಿಸಲಾಗಿದ್ದು ಅತಿ ಶೀಘ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದರು. ಕೈಗಾರಿಕೆಗಳು ಸ್ಥಾಪನೆಯಾದರೆ ಜನರಿಗೆ ತೊಂದರೆಗಳಾಗುತ್ತವೆ ಎಂದು ವಿರೋಧ ಪಕ್ಷದವರು ಜನರಿಗೆ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ, ಆದರೆ ಯಾವುದೇ ಕಾರಣಕ್ಕೂ ನನ್ನ ತಾಲೂಕಿನ ಜನತೆಗೆ ತೊಂದರೆಯಾಗಲು ಬಿಡುವುದಿಲ್ಲ, ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಬೃಹತ್ ಕೈಗಾರಿಕಾ ಸಚಿವರಾಗಿದ್ದು ನಮಗೆ ಇನ್ನಷ್ಟು ಬಲಕೊಟ್ಟಿದೆ, ಕೈಗಾರಿಕಾ ವಲಯಕ್ಕೆ ಬಹುತೇಕ ಸರ್ಕಾರಿ ಜಮೀನನ್ನು ಬಳಸಿಕೊಳ್ಳಲಾಗುವುದು ಎಂದರು.
ರೈತರಿಗೆ ಪರಿಹಾರ- ಉದ್ಯೋಗ
ಅವಶ್ಯಕತೆಬಿದ್ದರೆ ರೈತರು ಇಚ್ಚೆಯಿಂದ ಜಮೀನು ಬಿಟ್ಟುಕೊಡುವುದಾದರೆ ಸರ್ಕಾರದಿಂದ ಅವರಿಗೆ ಸೂಕ್ತ ಪರಿಹಾರ ಮತ್ತು ಕುಟುಂಬಸ್ಥರಿಗೆ ಉದ್ಯೋಗ ಕೊಡಲಾಗುವುದು, ಇಲ್ಲಿ ಯಾರ ಜಮೀನನ್ನೂ ಬಲವಂತವಾಗಿ ಕಿತ್ತುಕೊಳ್ಳುವ ಪ್ರಮೇಯವಿಲ್ಲ, ಕೈಗಾರಿಕೆಗಳು ಎಂದಾಕ್ಷಣ ಯಾವುದೋ ವಿಷಕಾರಕ ಕಂಪನಿಗಳು ಸ್ಥಾಪನೆಯಾಗಬಹುದು ಎಂದು ತಪ್ಪು ಕಲ್ಪನೆ ಬೇಡ, ರೈತರಿಗೆ ಸಂಬಂಧಿಸಿದಂತೆ ಕೃಷಿ ಸಂಬಂಧಿತ ಕೈಗಾರಿಕೆಗಳು ಸ್ಥಾಪನೆ ಮಾಡಲಾಗುವುದು. ಇದರಿಂದ ಈ ಭಾಗದ ರೈತರ ಕೃಷಿಗೆ ಅನುಕೂಲವಾಗುತ್ತದೆ ಮತ್ತು ರೈತರ ಮಕ್ಕಳಿಗೆ ಉದ್ಯೋಗಾವಕಾಶಗಳು ಲಭ್ಯವಾಗುತ್ತದೆ ಎಂದರು.ಕೈಗಾರಿಕೆಗಳಿಂದ ಆರ್ಥಿಕಾಭಿವೃದ್ಧಿ
ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ನರಸಾಪುರ, ವೇಮಗಲ್ ಮತ್ತು ಮಾಲೂರು ಭಾಗಗಳಲ್ಲಿ ಕೈಗಾರಿಕಾ ವಲಯಗಳು ಸ್ಥಾಪನೆಯಾಗಿದ್ದು ಆ ಭಾಗಗಳ ರೈತರು ಆರ್ಥಿಕವಾಗಿ ಸದೃಢವಾಗಿದ್ದಾರೆ ಮತ್ತು ಆ ಭಾಗಗಳ ಗ್ರಾಮಗಳು ಅಭಿವೃದ್ದಿಯಾಗುತ್ತಿವೆ, ನಮ್ಮ ತಾಲ್ಲೂಕಿನಲ್ಲಿಯೇ ಅದೇ ರೀತಿಯ ಅಭಿವೃದ್ದಿಯಾಗಬೇಕೆಂಬುದು ನನ್ನ ಆಶಯವಾಗಿದೆ ಎಂದರು. ಮುಖಂಡರಾದ ಶೇಷಾಪುರ ಗೋಪಾಲ್, ಯದುರೂರು ರಮೇಶ್, ಪ್ರದೀಪ್, ಪುಟ್ಟು, ಲಕ್ಷ್ಮಿಸಾಗರ ಮಂಜು, ಮಂಚಿಲನಗರ ರಘುನಾಥರೆಡ್ಡಿ ಇದ್ದರು.
)
)
;Resize=(128,128))
;Resize=(128,128))
;Resize=(128,128))