ಮೈತ್ರಿ ಅಭ್ಯರ್ಥಿ ಗೆದ್ದರೆ ಜಿಲ್ಲೆಗೆ ನೀರಾವರಿ ಸೌಲಭ್ಯ

| Published : Apr 22 2024, 02:06 AM IST / Updated: Apr 22 2024, 04:10 AM IST

ಸಾರಾಂಶ

ಮಾಜಿ ಪ್ರಧಾನಿ ದೇವೇಗೌಡರು92ವರ್ಷದ ವಯಸ್ಸಿನಲ್ಲಿಯೂ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ.

  ಮಾಲೂರು : ಭಾರತ ದೇಶದ ಸಂಪ್ರದಾಯಗಳನ್ನು ಅರಿತುಕೊಳ್ಳದೆ ಎಡಗೈಯಲ್ಲಿ ದೀಪ ಹಚ್ಚಲು ಹೊರಟಿರುವ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷದವರು ಪ್ರಧಾನ ಮಂತ್ರಿ ಮಾಡಲು ಹೊರಟಿದ್ದಾರೆ, ಅಂತಹವರು ನಮ್ಮ ದೇಶದ ಪ್ರಧಾನ ಮಂತ್ರಿಯಾದರೆ ದೇಶದ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ, ಆದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಲ್ಲೇಶ್ ಬಾಬುರಿಗೆ ಆಶೀರ್ವಾದ ಮಾಡಲು ಮಾಜಿ ಶಾಸಕ ಮಂಜುನಾಥಗೌಡ ಮನವಿ ಮಾಡಿದರು.

ಮಾಲೂರು ತಾಲೂಕಿನ ಲಕ್ಕೂರಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ೯೨ ವರ್ಷದ ವಯಸ್ಸಿನಲ್ಲಿಯೂ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ಲೋಕಸಭೆಗೆ ಆಯ್ಕೆಯಾದರೆ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿದರು.ಮೋದಿ ಮತ್ತೊಮ್ಮೆ ಪಿಎಂ ಆಗಬೇಕು

ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಮತ್ತೊಮ್ಮೆ ಭಾರತಕ್ಕೆ ಪ್ರಧಾನ ಮಂತ್ರಿಯಾಗಬೇಕು ಎಂದು ಇಡೀ ವಿಶ್ವವೇ ಎದುರು ನೋಡುತ್ತಿದೆ, ಆದರೆ ಅವರಿಗೆ ಮತದಾನ ಮಾಡಿ ಅವರನ್ನು ಪ್ರಧಾನ ಮಂತ್ರಿ ಮಾಡುವ ಅದೃಷ್ಟ ಭಾರತೀಯರಿಗೆ ಮಾತ್ರ ಇದೆ ಅದಕ್ಕಾಗಿ ಮೋದಿ ಬೆಂಬಲಿಸುವ ಅಭ್ಯರ್ಥಿಗೆ ಮತ ನೀಡಿ ಮತ್ತೊಮ್ಮೆ ನರೇಂದ್ರ ಮೋದಿರನ್ನು ಪ್ರಧಾನ ಮಂತ್ರಿ ಮಾಡೋಣ ಎಂದರು.ಸಂಸದ ಎಸ್.ಮುನಿಸ್ವಾಮಿ, ಕರ್ನಾಟಕ ವಕೀಲ ಸಂಘದ ಮಾಜಿ ಅಧ್ಯಕ್ಷ ರಂಗನಾಥ್, ಜಿಪಂ ಮಾಜಿ ಸದಸ್ಯರಾದ ಜಿ.ಇ.ರಾಮೇಗೌಡ, ಚಿನ್ನಸ್ವಾಮಿ ಗೌಡ, ಗ್ರಾಪಂ ಅಧ್ಯಕ್ಷೆ ಚೈತ್ರ, ಮುಖಂಡರಾದ ಸಂತೋಷ್ ಕುಮಾರ್, ಗೋಪಾಲ್, ಲಕ್ಷ್ಮಣ್, ಜಯಪ್ಪ, ನಾರಾಯಣಸ್ವಾಮಿ, ಧರಣಿ ಬಾಬು, ಸುರೇಶ್ ಇದ್ದರು.