ಡಿ.ಕೆ.ಶಿವಕುಮಾರ್‌ ಅವರನ್ನು ಯುವನಾಯಕ ಎಂದು ಮಲ್ಲಿಕಾರ್ಜುನ ಖರ್ಗೆ ಸಂಬೋಧಿಸಿದರು. ನಂತರ ಸಾವರಿಸಿಕೊಂಡು ಅಯ್ಯೋ ಅವನು ನೋಡೋಕೆ ಅಷ್ಟೆ ಯುವನಾಯಕನಂತೆ ಕಾಣುತ್ತಾನೆ. ಯುವಕನೇನಲ್ಲ. ಮುತ್ಯಾ ಆಗಿದ್ದಾನೆ. ಅವನಿಗೂ ಮೊಮ್ಮಗಳು ಹುಟ್ಟಿದ್ದಾಳೆ ಎಂದು ಹೇಳಿದರು. ಈ ಮಾತು ಕೇಳುತ್ತಿದ್ದಂತೆ ಸಭೆಯಲ್ಲಿದ್ದ ನಾಯಕರು, ಕೆಳಗಿದ್ದ ಸಾವಿರಾರು ಕಾರ್ಯಕರ್ತರ ಮೊಗದಲ್ಲಿ ನಗುವಿನ ಅಲೆ ತೇಲಿ ಬಂತು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಯುವ ನಾಯಕನೋ ಇಲ್ಲಾ ಮುತ್ಯಾ(ಅಜ್ಜ) ಆಗಿದ್ದಾರೋ? ಈ ಬಗ್ಗೆ ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರೇ ಹಾಸ್ಯಭರತ ವ್ಯಾಖ್ಯಾನ ನೀಡಿದ್ದು ಸಭೆಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಾ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದರು, ಸಿದ್ದರಾಮಯ್ಯ ಅವರ ಜೊತೆಗೂಡಿ ಕೆಲಸ ಮಾಡಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿ ಪಕ್ಷವನ್ನು ಅಧಿಕಾರಕ್ಕೆ ತಂದರು. 100 ಕಡೆ ಕಾಂಗ್ರೆಸ್‌ ಪಕ್ಷದ ಕಚೇರಿ ಕಟ್ಟಲು ಸ್ಥಳ ಗುರುತಿಸಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಮಾತಿನ ಮಧ್ಯೆ, ಡಿ.ಕೆ.ಶಿವಕುಮಾರ್‌ ಅವರನ್ನು ಯುವನಾಯಕ ಎಂದು ಸಂಬೋಧಿಸಿದರು. ನಂತರ ಸಾವರಿಸಿಕೊಂಡು ಅಯ್ಯೋ ಅವನು ನೋಡೋಕೆ ಅಷ್ಟೆ ಯುವನಾಯಕನಂತೆ ಕಾಣುತ್ತಾನೆ. ಯುವಕನೇನಲ್ಲ. ಮುತ್ಯಾ ಆಗಿದ್ದಾನೆ. ಅವನಿಗೂ ಮೊಮ್ಮಗಳು ಹುಟ್ಟಿದ್ದಾಳೆ ಎಂದು ಹೇಳಿದರು. ಈ ಮಾತು ಕೇಳುತ್ತಿದ್ದಂತೆ ಸಭೆಯಲ್ಲಿದ್ದ ನಾಯಕರು, ಕೆಳಗಿದ್ದ ಸಾವಿರಾರು ಕಾರ್ಯಕರ್ತರ ಮೊಗದಲ್ಲಿ ನಗುವಿನ ಅಲೆ ತೇಲಿ ಬಂತು.

ಪತಿಗೆ ನೋ ಸಿಂಪತಿ ಎಂದ ಜಡ್ಜ್‌!

ಕೌಟುಂಬಿಕ ದೌರ್ಜನ್ಯ, ಪತ್ನಿಗೆ ಪತಿಯ ಸಂಬಂಧಿಕರಿಂದ ಕಿರುಕುಳ, ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಪತಿಯ ಪೋಷಕರು, ಸೋದರ, ಸೋದರಿಯರು, ಸಂಬಂಧಿಕರಿಗೆ ತಡೆಯಾಜ್ಞೆ ನೀಡುತ್ತೇವೆ. ಆದರೆ ‘ಪತಿಗೆ ನೋ ಸಿಂಪತಿ. ನಮ್ಮ ಕೋರ್ಟ್‌ನಲ್ಲಿ ಗಂಡನಿಗೆ ಸ್ಟೇ ಇಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದರೆ ಬಡಪಾಯಿ ಪತಿ ಮಹಾಶಯನ ಸ್ಥಿತಿ ಆಯೋಮಯ ಅಷ್ಟೇ. ಹೀಗೆ ಕಡ್ಡಿ ಮುರಿದಂತೆ ‘ಪತಿಗೆ ನೋ ಸಿಂಪತಿ’ ಎಂದು ಕಡ್ಡಿ ಮುರಿದಂತೆ ಹೇಳಿದವರು ನಮ್ಮ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು.

ಸಾಮಾನ್ಯವಾಗಿ ಕೌಟುಂಬಿಕ ದೌರ್ಜನ್ಯ, ಪತ್ನಿಗೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಪತಿ ಸೇರಿ ಕುಟುಂಬದ ಸದಸ್ಯರು, ಸಂಬಂಧಿಕರು ಆರೋಪಿಗಳಾಗಿರುತ್ತಾರೆ. ತಮ್ಮ ವಿರುದ್ಧದ ಎಫ್ಐಆರ್‌, ತನಿಖೆ, ದೋಷಾರೋಪ ಪಟ್ಟಿ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುತ್ತಾರೆ, ಮಧ್ಯಂತರ ಮನವಿಯಾಗಿ ತನಿಖೆ ಅಥವಾ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ಕೋರುತ್ತಾರೆ. ಇಂತಹ ಸಂದರ್ಭದಲ್ಲಿ ಉಳಿದವರ ವಿಚಾರಣೆಗೆ ತಡೆಯಾಜ್ಞೆ ನೀಡುವ ನ್ಯಾಯಮೂರ್ತಿಗಳು ಮಾತ್ರ ಪತಿಯ ವಿರುದ್ಧದ ತನಿಖೆ ಅಥವಾ ವಿಚಾರಣೆಗೆ ತಡೆಯಾಜ್ಞೆ ನೀಡುವುದಿಲ್ಲ.

ಇಂತಹ ಪ್ರಸಂಗ ಇತ್ತೀಚೆಗೆ ನಡೆಯಿತು. ಮಾಮೂಲಿನಂತೆ ಉಳಿದ ಆರೋಪಿಗಳ ವಿಚಾರಣೆಗೆ ತಡೆ ನೀಡಿದ ನ್ಯಾಯಮೂರ್ತಿಗಳು ಪತಿಗೆ ತಡೆ ನೀಡಲು ಸುತರಾಂ ಒಪ್ಪಲಿಲ್ಲ. ವಕೀಲರು ಹಲವು ಲಾ ಪಾಯಿಂಟ್ ‌ಉಲ್ಲೇಖಿಲಿಸಿದರೂ, ಸಾಕ್ಷ್ಯಧಾರಗಳು ಕೊರತೆ ಇದೆ ಎಂದು ಪ್ರತಿಪಾದಿಸಿದರೂ ಬಿಲ್‌ಕುಲ್‌ ಒಪ್ಪಲಿಲ್ಲ. ಬದಲಾಗಿ ‘ನೋಡಿ ನಮ್ಮ ಕೋರ್ಟ್ ಅಲ್ಲಿ ಗಂಡನಿಗೆ ಸ್ಟೇ ಇಲ್ಲ: ಪತಿಗೆ ನೋ ಸಿಂಪತಿ’ ಎಂದು‌ ನುಡಿಯುತ್ತಿದ್ದಂತೆ ವಕೀಲರು ಕಡತ ಎತ್ತಿಕೊಂಡು ಕೈ ಮುಗಿದು ಹೊರನಡೆದರು.

ನಿಜಕ್ಕೂ ನ್ಯಾಯಮೂರ್ತಿಗಳ ಇಂತಹ ನಿರ್ಧಾರಕ್ಕೆ ಕಾರಣ ಪತ್ನಿ ಹಿತ ಕಾಪಾಡಬೇಕು ಎಂಬ ಕಾಳಜಿ. ಒಂದು ವೇಳೆ ಪತಿಯ ವಿರುದ್ಧದ ತನಿಖೆ/ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದರೆ, ಆ ಆದೇಶವನ್ನು ತೋರಿಸಿ, ವಿಚ್ಛೇದನ ಮತ್ತು ಜೀವನಾಂಶ ಕೋರಿ‌‌ ಪತ್ನಿ ದಾಖಲಿಸಿದ ಪ್ರಕರಣದಲ್ಲೂ ಪತಿ ತಡೆಯಾಜ್ಞೆ ಪಡೆಯುತ್ತಾರೆ. ಇದರ‌ ಪರಿಣಾಮವಾಗಿ ‌ಜೀವನಾಂಶ ಪಡೆಯಲು ಪತ್ನಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ತಡೆಯಾಜ್ಞೆ ನೀಡುತ್ತಿಲ್ಲ.

-ಲಿಂಗರಾಜು ಕೋರಾ

-ವೆಂಕಟೇಶ್‌ ಕಲಿಪಿ