ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟ: ಡಿಕೆ ಶಿವಕುಮಾರ್‌

| Published : Nov 01 2024, 12:02 AM IST / Updated: Nov 01 2024, 04:50 AM IST

ಸಾರಾಂಶ

ಬಿಜೆಪಿಯಲ್ಲಿ ಕುಮಾರಸ್ವಾಮಿ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಅಷ್ಟು ಕುಮಾರಸ್ವಾಮಿ ಯಾರು?, ಕುಮಾರಸ್ವಾಮಿಗೆ ಏನು ಗೊತ್ತು? ನಮ್ಮಲ್ಲಿ 136 ಶಾಸಕರಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

 ರಾಮನಗರ : ಕುಮಾರಸ್ವಾಮಿ ತನ್ನ ಕೇಂದ್ರ ಸಚಿವ ಸ್ಥಾನವನ್ನೇ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಈ ವಿಚಾರವಾಗಿ ಬಿಜೆಪಿ ನಾಯಕರೇ ಅವರಿಗೆ ಉತ್ತರ ನೀಡುತ್ತಾರೆ. ಇನ್ನು ಜೆಡಿಎಸ್ ಪಕ್ಷ ಗಟ್ಟಿಯಾಗಿ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ಸಮಯ ಬಂದಾಗ ಉತ್ತರ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚನ್ನಪಟ್ಟಣದ ಜೆಡಿಎಸ್ - ಬಿಜೆಪಿ ಮುಖಂಡರು, ಕಾರ್ಯಕರ್ತರು ಗುರುವಾರ ಪಕ್ಷಕ್ಕೆ ಸೇರಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ಬಿ, ಬಿಜೆಪಿಯಲ್ಲಿ ಕುಮಾರಸ್ವಾಮಿ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ ಎಂದರು.

ಸಿದ್ದರಾಮಯ್ಯನವರ ಆಡಳಿತ ಸಹಿಸಲು ಅ‍ವರಿಂದ ಆಗುತ್ತಿಲ್ಲ. ಅಷ್ಟು ಕುಮಾರಸ್ವಾಮಿ ಯಾರು?, ಕುಮಾರಸ್ವಾಮಿಗೆ ಏನು ಗೊತ್ತು? ನಮ್ಮಲ್ಲಿ 136 ಶಾಸಕರಿದ್ದಾರೆ. ಡಿ.ಕೆ. ಸುರೇಶ್ ಹೇಳಿದಂತೆ ಅವರ ಸ್ಥಾನವೇ ಉಳಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಬಿಜೆಪಿಯವರೇ ಅವರಿಗೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.ಜೆಡಿಎಸ್- ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಅಂತ ಆ ಪಕ್ಷದ ಮುಖಂಡರು, ಕಾರ್ಯಕರ್ತರು ಗುಂಪು ಗುಂಪಾಗಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಯೋಗೇಶ್ವರ್ ದಡ್ಡಾನಾ, ಬಿಜೆಪಿ - ಜೆಡಿಎಸ್ ಭವಿಷ್ಯ ಇಲ್ಲ ಅಂತಲೇ ಕಾಂಗ್ರೆಸ್ ಸೇರಿದ್ದಾರೆ. ಎಲ್ಲೋ ಹಳ್ಳಿಗಳಲ್ಲಿ ಭಿನ್ನಾಭಿಪ್ರಾಯದಿಂದ ಒಂದಿಬ್ಬರು ಮಾತ್ರ ನಮ್ಮ ಪಕ್ಷ ಬಿಟ್ಟಿರಬಹುದು ಎಂದರು.ಮೂರು ತಿಂಗಳ ಹಿಂದೆಯೇ ಕೆ.ಜೆ ಜಾರ್ಜ್ ಅವರು ಯೋಗೇಶ್ವರ್ ಅವರನ್ನು ಡೀಲ್ ಮಾಡಿದ್ದರು ಎಂಬ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಅದೆಲ್ಲವೂ ಸುಳ್ಳು. ಯಾವ ಡೀಲು ಇಲ್ಲ. ಇದಕ್ಕೆಲ್ಲ ಯೋಗೇಶ್ವರ್ ಉತ್ತರ ನೀಡುತ್ತಾರೆ. ಕುಮಾರಸ್ವಾಮಿಗೆ ಯಾವ ಉತ್ತರವನ್ನೂ ಕೊಡುವುದಿಲ್ಲ ಎಂದರು.

ನೋಟಿಸ್ ಕೊಟ್ಟಿದ್ದ ಬಿಜೆಪಿ :

"ವಕ್ಫ್ ಮೂಲಕ ಮೊದಲು ನೋಟೀಸ್ ಕೊಟ್ಟಿದ್ದು ಬಿಜೆಪಿ. ಸಮುದಾಯಗಳ ನಡುವೆ ಕಲಹ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

 "ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಕನ್ನಡ ಪರ ಸಂಘಟನೆಗಳು ತಮ್ಮ ಕಚೇರಿಯಲ್ಲಿ ಕನ್ನಡ ಧ್ವಜ ಹಾರಿಸಲಿ. ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಭಾಗವಹಿಸುವಂತಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಯವರೂ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ.

 ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

ಜೆಡಿಎಸ್ - ಬಿಜೆಪಿ ಮೈತ್ರಿಕೂಟಕ್ಕೆ ಡಿಕೆಶಿ ಟಕ್ಕರ್ ರಾಮನಗರ:

ಚನ್ನಪಟ್ಟಣ ಭಾಗದ ಹಲವು ಮುಖಂಡರು ಬಿಜೆಪಿ-ಜೆಡಿಎಸ್ ಪಕ್ಷ ತೊರೆದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ರವರು ಸ್ವತಃ ಪಕ್ಷದ ಶಾಲು ಹಾಕಿ ಬಿಜೆಪಿ - ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿಕೊಂಡರು. ಈ ಮೂಲಕ ಎನ್‌ಡಿಎ ನಾಯಕರಿಗೆ ಟಕ್ಕರ್ ನೀಡಿದರು. 

ಶಕ್ತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ - ಡಿಕೆಶಿ ರಾಮನಗರ:

ಶಕ್ತಿ ಯೋಜನೆ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ತಿರುಚಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಆರ್ಥಿಕವಾಗಿ ಸದೃಢವಾಗಿರುವವರು, ಐಟಿ ಬಿಟಿ ಸಂಸ್ಥೆಗಳವರು, ಎಂಎನ್‌ಸಿ ಕಂಪನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ತಾವು ಕೆಲಸ ಮಾಡುವ ಕಂಪನಿಗಳಲ್ಲಿ ಸಂಚಾರಕ್ಕಾಗಿ ಪ್ರತ್ಯೇಕ ಭತ್ಯೆ ನೀಡಲಾಗುತ್ತಿದೆ. ಹೀಗಾಗಿ ನಮಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಾನು ಸಚಿವರ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದೇನೆ ಅಷ್ಟೇ. ಯೋಜನೆ ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.