ಸಾರಾಂಶ
ಕನ್ನಡಪ್ರಭ ವಾರ್ತೆ ವಿಧಾನಸಭೆ
ಬಳ್ಳಾರಿ ಅಭಿವೃದ್ಧಿಗೆ ಕುರಿತಂತೆ ಬಿಜೆಪಿ ಸದಸ್ಯ ಗಾಲಿ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಸದಸ್ಯ ಭರತ್ ರೆಡ್ಡಿ ಮಧ್ಯೆ ವಿಧಾನಸಭೆಯಲ್ಲಿ ಜಟಾಪಟಿ ನಡೆಯಿತು.‘ನಿನ್ನ ತಲೆ ಸರಿಯಿಲ್ಲ’ ಎಂದು ಭರತ್ ರೆಡ್ಡಿಗೆ ಜನಾರ್ದನ ರೆಡ್ಡಿ ಟೀಕಿಸಿದರೆ, ‘ನಿನ್ನ ಇತಿಹಾಸವನ್ನೇ ಬಿಚ್ಚಿಡುತ್ತೇನೆ ಸುಮ್ಮನೆ ಕುಳಿತುಕೋ’ ಎಂದು ಜನಾರ್ದನ ರೆಡ್ಡಿಗೆ ಭರತ್ ರೆಡ್ಡಿ ತಿರುಗೇಟು ನೀಡಿದರು. ಈ ಮೂಲಕ ಪರಸ್ಪರ ಏಕವಚನದಲ್ಲೇ ಹೀಯಾಳಿಸಿದರು. ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆ ನಡೆದ ವೇಳೆ ಶಾಸಕ ಜನಾರ್ದನ ರೆಡ್ಡಿ, ‘ನಾನು ಸಚಿವನಾಗಿದ್ದ ವೇಳೆ ನಡೆದಿದ್ದ ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿದರೆ ಉಳಿದಂತೆ ಬಳ್ಳಾರಿ ಜಿಲ್ಲೆ ಅಭಿವೃದ್ಧಿಯೇ ಆಗಿಲ್ಲ. ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ವಿಮಾನ ನಿಲ್ದಾಣಕ್ಕೆ ಆಗಲೇ ಭೂಮಿ ಪೂಜೆ ನೆರವೇರಿಸಿದ್ದೆ. ಅದರ ಕೆಲಸವೇ ಈವರೆಗೂ ಪ್ರಾರಂಭವಾಗಿಲ್ಲ’ ಎಂದು ಆರೋಪಿಸಿದರು.ಇದಕ್ಕೆ ಕಾಂಗ್ರೆಸ್ ಶಾಸಕ ಟಿ.ತುಕಾರಾಮ್ ಆಕ್ಷೇಪಿಸಿದರು. ಈ ವೇಳೆ ಸಭಾಧ್ಯಕ್ಷ ಖಾದರ್ ‘ಮತ್ತೊಬ್ಬರು ಮಾತನಾಡುವಾಗ ಮಧ್ಯಪ್ರವೇಶಿಸಬೇಡಿ’ ಎಂದು ಹೇಳಿ ಸಮಾಧಾನಪಡಿಸಿದರು.ಕೆಲಹೊತ್ತಿನ ಬಳಿಕ ಭರತ್ ರೆಡ್ಡಿ ತಮ್ಮ ಸರದಿ ಬಂದಾಗ ಮಾತನಾಡಿ, ‘13 ವರ್ಷಗಳಿಂದ ಅಭಿವೃದ್ಧಿಯೇ ಆಗಿಲ್ಲ ಎಂಬ ಮಾತನ್ನು ಜನಾರ್ದನ ರೆಡ್ಡಿ ಹೇಳುತ್ತಿದ್ದಾರೆ. ಆದರೆ ಅವರೇ ಬ್ರಹ್ಮಣಿ ಕಾರ್ಖಾನೆ ಹೆಸರಲ್ಲಿ ಭೂಸ್ವಾಧೀನ ಪಡಿಸಿಕೊಂಡು ಅದನ್ನು ರಿಯಲ್ ಎಸ್ಟೆಟ್‌ಗೆ ಬಳಸಿಕೊಂಡಿದ್ದಾರೆ. ಬೇರೆಯವರಿಗೆ ಮಾರಾಟ ಮಾಡಿ ರೈತರನ್ನು ಬೀದಿಗೆ ತಳ್ಳಿದ್ದಾರೆ. ಕಾರ್ಖಾನೆಯನ್ನು ತೆರೆಯಲಿಲ್ಲ. ವಿಮಾನ ನಿಲ್ದಾಣಕ್ಕೆಂದು ರೈತರನ್ನು ಹೆದರಿಸಿ ಬೆದರಿಸಿ, ಗೋಲಿಬಾರ್ ನಡೆಸಿ ಭೂಮಿ ಪಡೆದಿದ್ದಾರೆ. ಅದರ ಸುತ್ತಲೂ ಅವರದೇ ಭೂಮಿಯಿದೆ. ತಮ್ಮ ಜಮೀನಿಗೆ ಹೆಚ್ಚಿನ ಬೆಲೆ ಬರಲಿ ಎಂಬ ಕಾರಣ ವಿಮಾನ ನಿಲ್ದಾಣಕ್ಕೆ ಭೂಮಿಪೂಜೆ ನಡೆಸಿದ್ದರು’ ಎಂದು ಆರೋಪಿಸಿದರು. ‘ಕರ್ನಾಟಕದ ಗಡಿಪ್ರದೇಶವನ್ನು ಆಂಧ್ರಕ್ಕೂ ಬಿಟ್ಟುಕೊಟ್ಟಿದ್ದಾರೆ’ ಎಂದೆಲ್ಲ ಟೀಕಿಸಿದರು.
ಅದಕ್ಕೆ ಮಧ್ಯಪ್ರವೇಶಿಸಿದ ಜನಾರ್ದನ ರೆಡ್ಡಿ, ‘ಇವನಿಗೆ ತಲೆ ಸರಿಯಿಲ್ಲ. ಏನೇನೋ ಮಾತನಾಡುತ್ತಾನೆ’ ಎಂದು ಏಕವಚನದಲ್ಲಿ ಟೀಕಿಸಿ, ತಮ್ಮ ಸ್ಪಷ್ಟನೆ ನೀಡಲು ಮುಂದಾದರು. ಆಗ ಭರತ್ ರೆಡ್ಡಿ, ‘ಕರ್ನಾಟಕದ ಗಡಿ ಆಂಧ್ರಪ್ರದೇಶಕ್ಕೆ ಬಿಟ್ಟುಕೊಟ್ಟಿದ್ದು ಗೊತ್ತಿಲ್ಲವಾ? ಸುಮ್ಮನೆ ಕುಳಿತುಕೋ ಇಲ್ಲದಿದ್ದರೆ ನಿನ್ನ ಇತಿಹಾಸವನ್ನೇ ಬಿಚ್ಚಿಡ್ತೇನೆ’ ಎಂದು ಏಕವಚನದಲ್ಲೇ ಪರಸ್ಪರ ಟೀಕಿಸಿದರು. ಈ ವೇಳೆ ಕೆಲಕಾಲ ಜಟಾಪಟಿ ನಡೆಯಿತು.ಕೊನೆಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಮಧ್ಯಪ್ರವೇಶಿಸಿ, ‘ಎಲ್ಲರೂ ಅವರವರ ಕಾಲದಲ್ಲಿ ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಿದವರೇ. ಮುಂದೆಯೂ ಅಭಿವೃದ್ಧಿ ಮಾಡುತ್ತೇವೆ’ ಎಂದು ತಿಳಿಸುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))