ಸ್ವಾಮಿದ್ವಯರಿಂದ ಜನತಾ ದರ್ಶನ ಪಾಲಿಟಿಕ್ಸ್‌..!

| Published : Jul 07 2024, 01:25 AM IST / Updated: Jul 07 2024, 04:42 AM IST

ಸಾರಾಂಶ

ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ನಡೆಸಿದ ಜನತಾದರ್ಶನಕ್ಕೆ ಜಿಲ್ಲಾ ಅಧಿಕಾರಿಗಳು ತೆರಳದಂತೆ ರಾಜ್ಯ   ನಿರ್ಬಂಧ ವಿಧಿಸಿತ್ತು. ಆದರೆ, ಚಲುವರಾಯಸ್ವಾಮಿ  ಕೆರಗೋಡು ಗ್ರಾಮದಲ್ಲಿ ನಡೆಸಿದ ಜನತಾದರ್ಶನದಲ್ಲಿ  53 ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದುದು ವಿಶೇಷವಾಗಿತ್ತು.

 ಮಂಡ್ಯ :  ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜನತಾದರ್ಶನ ನಡೆಸಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಜನತಾದರ್ಶನ ನಡೆಸಿರುವುದು ಜಿಲ್ಲೆಯೊಳಗೆ ಸಂಘರ್ಷದ ರಾಜಕಾರಣಕ್ಕೆ ಪುಷ್ಠಿ ನೀಡಿದೆ. ಇದರೊಂದಿಗೆ ಸ್ವಾಮಿಧ್ವಯರ ಜನತಾದರ್ಶನ ಪಾಲಿಟಿಕ್ಸ್‌ ಆರಂಭಗೊಂಡಿದೆ.

ಶುಕ್ರವಾರ ನಗರದ ಅಂಬೇಡ್ಕರ್‌ ಭವನದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ನಡೆಸಿದ ಜನತಾದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ತೆರಳದಂತೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿತ್ತು. ಆದರೆ, ಶನಿವಾರ ಸಚಿವ ಎನ್‌.ಚಲುವರಾಯಸ್ವಾಮಿ ಅವರು ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆಸಿದ ಜನತಾದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ 53 ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದುದು ವಿಶೇಷವಾಗಿತ್ತು.

ಜಿಲ್ಲೆಯೊಳಗೆ ಕುಮಾರಸ್ವಾಮಿ ಜನಪ್ರಿಯತೆ, ಪ್ರಾಬಲ್ಯ ವೃದ್ಧಿಯಾಗದಂತೆ, ಜೆಡಿಎಸ್‌ ಬಲವರ್ಧನೆಗೊಳ್ಳದಂತೆ ತಡೆಯುವುದನ್ನು ಗುರಿಯಾಗಿಸಿಕೊಂಡು, ಯಾವುದೇ ವಿಚಾರದಲ್ಲೂ ಕ್ರೆಡಿಟ್‌ ಜೆಡಿಎಸ್‌ ಪಾಲಾಗದಂತೆ ಎಚ್ಚರಿಕೆ ಕಾಯ್ದುಕೊಂಡು ಸಂದರ್ಭಕ್ಕೆ ಅನುಗುಣವಾಗಿ ಕಾರ್ಯತಂತ್ರ ರೂಪಿಸಿ ಕೈ ನಾಯಕರು ಜಾರಿಗೊಳಿಸುತ್ತಿದ್ದಾರೆ.

ಜಿಲ್ಲಾ ಮಟ್ಟದ ಅಧಿಕಾರಿಗಳ ಅಸಹಕಾರದ ನಡುವೆಯೂ ಎಚ್‌.ಡಿ.ಕುಮಾರಸ್ವಾಮಿ ಅವರು ಸಂಜೆ 7 ಗಂಟೆಯವರೆಗೂ ಸಾವಿರಾರು ಜನರಿಂದ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಶನಿವಾರ ಕೆರಗೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲೂ ನೂರಾರು ಜನರಿಂದ ಚಲುವರಾಯಸ್ವಾಮಿ ಅರ್ಜಿಗಳನ್ನು ಸ್ವೀಕರಿಸಿ ದಳಪತಿಗಳಿಗೆ ಠಕ್ಕರ್‌ ನೀಡಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಮ್ಮ ಸರ್ಕಾರ ಬಂದ ಮೇಲೆ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ತಲುಪುತ್ತಿದೆ. ವಿರೋಧ ಪಕ್ಷದವರು ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು.

ಸಬ್ಸಿಡಿ ಯೋಜನೆಗಳನ್ನ ನಾವು ನಿಲ್ಲಿಸಿಲ್ಲ. ಬಿತ್ತನೆ ಬೀಜಗಳಿಗೆ ಯಾವುದೇ ತೊಂದರೆ ಮಾಡಿಲ್ಲ. ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನಗಳು ವಿರೋಧ ಪಕ್ಷಗಳಿಂದ ನಡೆಯುತ್ತಿದೆ. ನಾವು ರೈತರ ಪರ ಇದ್ದೇವೆ ಎನ್ನುವುದನ್ನು ಗಟ್ಟಿ ಧ್ವನಿಯಲ್ಲಿ ಹೇಳಿ ಜನರ ಗಮನ ಬೇರೆಡೆ ಹರಿಯವುದನ್ನು ತಡೆಯುವುದಕ್ಕೆ ಮುಂದಾದರು.

ದಳಪತಿಗಳನ್ನು ಗುರಿಯಾಗಿಸಿಕೊಂಡು ಈ ಹಿಂದೆ ಇದ್ದವರು ಯಾಕೆ ಕೃಷಿ ವಿಶ್ವವಿದ್ಯಾಲಯವನ್ನು ಘೋಷಣೆ ಮಾಡಲಿಲ್ಲ. ನಮ್ಮ ಶ್ರಮ ನಿಮಗೆ ಅರ್ಥ ಆಗಲಿಲ್ಲವೆಂದರೆ ಅದು ನಮ್ಮ ದುರದೃಷ್ಟ ಎಂದು ಹೇಳುವ ಮೂಲಕ ಪರೋಕ್ಷವಾಗಿ ಲೋಕಸಭಾ ಚುನಾವಣಾ ಸೋಲಿಗೆ ಸಚಿವ ಬೇಸರ ವ್ಯಕ್ತಪಡಿಸಿದರು.

ನಾವು ಪಕ್ಷ ಎನ್ನದೇ ನಿಮ್ಮ ಸೇವೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ 27 ಸಾವಿರ ಇ-ಸ್ವತ್ತು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಗೌರವಯುತವಾಗಿ ಕೆಲಸ ಮಾಡಿದ್ದೇವೆ. ಇಲ್ಲಿ ಬರುವ ಎಲ್ಲ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಕ್ರೆಡಿಟ್‌ ರಾಜಕಾರಣದ ಸಮರ ಶುರುವಾಗಿದೆ. ಪ್ರತಿಷ್ಠೆಯನ್ನು ಕಾಯ್ದುಕೊಳ್ಳುವುದಕ್ಕೆ ಇಬ್ಬರೂ ತೊಡೆತಟ್ಟಿ ನಿಂತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಂಘರ್ಷದ ಪಾಲಿಟಿಕ್ಸ್‌ ಇನ್ನಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಿದೆ.