ಮಾಜಿ ಸಿಎಂ ಎಚ್‌ಡಿಕೆ ನಿವಾಸಕ್ಕೆ ಜೆಡಿಎಸ್‌ ಕಾರ್ಯಕರ್ತರ ಮುತ್ತಿಗೆ

| Published : Mar 25 2024, 12:54 AM IST / Updated: Mar 25 2024, 03:36 PM IST

ಮಾಜಿ ಸಿಎಂ ಎಚ್‌ಡಿಕೆ ನಿವಾಸಕ್ಕೆ ಜೆಡಿಎಸ್‌ ಕಾರ್ಯಕರ್ತರ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲೆಯ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬೆಂಗಳೂರು ಜೆ.ಪಿ.ನಗರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ 

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲೆಯ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬೆಂಗಳೂರು ಜೆ.ಪಿ.ನಗರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮೂರನೇ ಬಾರಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ಮರಳಿರುವ ಅವರನ್ನು ನೋಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಸಂಖ್ಯಾತ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಗಮಿಸಿದ್ದರು. 

ಇದೇ ವೇಳೆ ಮಂಡ್ಯ ಜಿಲ್ಲೆಯ ನೂರಾರು ಕಾರ್ಯಕರ್ತರು ಎಚ್‌ಡಿಕೆ ನಿವಾಸದ ಎದುರು ಕುಳಿತು ಮಂಡ್ಯ ಕ್ಷೇತ್ರದ ಅಭ್ಯರ್ಥಿ ನೀವೇ ಆಗಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಈಗಷ್ಟೇ ತಂದೆಯವರು ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಬಂದಿದ್ದಾರೆ. 

ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಂಡ್ಯಕ್ಕೆ ಬಂದ ಸಮಯದಲ್ಲೇ ನಿಮ್ಮ ಭಾವನೆಗಳಿಗೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಒಂದು ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.

ನಿಖಿಲ್ ಅವರ ಮಾತಿನ ನಡುವೆಯೇ ಕುಮಾರಸ್ವಾಮಿ ಅವರೇ ನಮ್ಮ ಅಭ್ಯರ್ಥಿ ಎಂದು ಕಾರ್ಯಕರ್ತರು ಘೋಷಣೆ ಕೂಗತೊಡಗಿದರು. ಮುಖಂಡರು-ಕಾರ್ಯಕರ್ತರ ಘೋಷಣೆ, ಒತ್ತಡ ಹೆಚ್ಚಾಗಿದ್ದರಿಂದ ಕೊನೆಗೆ ಕುಮಾರಸ್ವಾಮಿ ಅವರೇ ಮಹಡಿ ಮೇಲೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದರು.

ನಿಮಗೆ ನಿರಾಸೆ ಮಾಡುವುದಿಲ್ಲ: ಮೂರು ದಿನದ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಈ ಸಮಯದಲ್ಲಿ ಹೆಚ್ಚು ಮಾತನಾಡಬಾರದು, ಆಯಾಸ ಮಾಡಿಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. 

ನಿಮ್ಮ ಭಾವನೆಗಳು ಏನೆಂಬುದು ನನಗೆ ಗೊತ್ತಿದೆ. ಅದಕ್ಕೆ ಖಂಡಿತ ನಿರಾಸೆ ಮಾಡುವುದಿಲ್ಲ ಎಂದು ಮಂಡ್ಯದಲ್ಲೇ ಹೇಳಿದ್ದೇನೆ. ಅದರಂತೆ ನಡೆಯುತ್ತೇನೆ. ಎಲ್ಲರೂ ಸಮಾಧಾನದಿಂದ ಇರುವಂತೆ ಹೇಳಿದರು.

ಮಂಡ್ಯ ಜನರ ಪ್ರೀತಿ ಸಿಕ್ಕರೋದು ನನ್ನ ಭಾಗ್ಯ: ಮಂಡ್ಯದಲ್ಲಿ ನಮಗೆ ವಿಶೇಷ ಪ್ರೀತಿ ವಿಶ್ವಾಸ ಸಿಕ್ಕಿದೆ. ಅದು ನನ್ನ ಭಾಗ್ಯ. ನಾನು ಈ ಭೂಮಿಯಲ್ಲಿ ಇರುವವರೆಗೂ ಈ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. 

ನನಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ನನ್ನ ಆರೋಗ್ಯವನ್ನು ನೋಡಿಕೊಂಡು ಪಕ್ಷದ ಕೆಲಸ, ಜನರ ಸೇವೆ ಮಾಡಬೇಕಿದೆ ಎಂದರು.

ನಮ್ಮ ಪಕ್ಷದಲ್ಲಿ ದೊಡ್ಡ ನಾಯಕರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಬೆಳೆದವರು ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸುವ ಜವಾಬ್ದಾರಿ ನನ್ನ ಮೇಲಿದೆ. 

ನಮ್ಮ ಪಕ್ಷಕ್ಕೆ ಮುಖಂಡರು-ಕಾರ್ಯಕರ್ತರೇ ಶಕ್ತಿ. ನೀವು ನನ್ನ ಮೇಲಿಟ್ಟಿರುವ ಅಭಿಮಾನ-ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.

ನಾಳೆ ಅಭ್ಯರ್ಥಿ ಹೆಸರು ಪ್ರಕಟ: ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ನನಗೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ, ಜೀವಕ್ಕೆ ಜೀವವಾಗಿ ನನ್ನನ್ನು ಪೊರೆದು ಸಲಹುತ್ತಿರುವ ಜಿಲ್ಲೆ ಮಂಡ್ಯ. ಈ ನೆಲವನ್ನು, ಈ ಜನರ ಪ್ರೀತಿ ವಿಶ್ವಾಸವನ್ನು ನಾನು ಮರೆಯಲು ಸಾಧ್ಯವೇ ಇಲ್ಲ.

ನಾಳೆ (ಸೋಮವಾರ) ಚನ್ನಪಟ್ಟಣ ಕ್ಷೇತ್ರದ ಮುಖಂಡರನ್ನು ಕರೆಸಿ ಮಾತನಾಡುತ್ತೇನೆ. ನಾಳೆಯ ದಿನ ಯಾವುದೇ ಕಾರಣಕ್ಕೂ ನಿಮಗೆ ನಿರಾಸೆ ಮಾಡುವುದಿಲ್ಲ ಎಂದು ಭರವಸೆ ನೀಡುವುದರೊಂದಿಗೆ ನನಗೆ ಒಂದು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ನಾಳೆ ಸಂಜೆಯೊಳಗೆ ಘೋಷಣೆ: ನಿಖಿಲ್‌

ಇದಕ್ಕೂ ಮೊದಲು ಮಂಡ್ಯ ಕಾರ್ಯಕರ್ತರ ಜತೆ ಮಾತನಾಡಿದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಬೇಕೆಂದು ಕಾರ್ಯಕರ್ತರಾದ ತಾವೆಲ್ಲರೂ ಬಂದು ಒತ್ತಾಯ ಮಾಡುತ್ತಿದ್ದೀರಿ.

 ಮಂಡ್ಯದಲ್ಲಿ ತಂದೆಯವರೇ ಚುನಾವಣೆಗೆ ನಿಲ್ಲಬೇಕೆಂಬ ಒತ್ತಡ ಹೆಚ್ಚಿದೆ. ಈ ಬಾರಿ ನಮ್ಮ ಕುಟುಂಬದಿಂದ ಚುನಾವಣೆ ಸ್ಪರ್ಧೆ ಬೇಡ ಅಂದುಕೊಂಡಿದ್ದೆವು. 

ಆದರೆ, ಮಂಡ್ಯದ ಪರಿಸ್ಥಿತಿಯೇ ಬೇರೆ ಇದೆ. ಹೀಗಾಗಿ ಕುಮಾರಸ್ವಾಮಿ ಅವರ ಮೇಲೆ ನೀವೆಲ್ಲಾ ಒತ್ತಡ ಹಾಕುತ್ತಿದ್ದೀರಿ. ತಂದೆಯವರು ಒಂದು ದಿನದ ಸಮಯಾವಕಾಶ ಕೇಳಿದ್ದಾರೆ. ನಾಳೆ (ಸೋಮವಾರ) ಸಂಜೆಯೊಳಗೆ ಅಭ್ಯರ್ಥಿ ಯಾರೆಂದು ಅಂತಿಮವಾಗಲಿದೆ ಎಂದು ಹೇಳಿದರು.

ಹಲವರ ಚಿತಾವಣೆಯಿಂದ ಸೋಲು: 2019ರ ಲೊಕಸಭೆ ಚುನಾವಣೆಯಲ್ಲಿ ನನಗೆ ಕೆಲವರ ಕುತಂತ್ರದಿಂದ ಸೋಲಾಯಿತು. ಚಿತಾವಣೆಯಿಂದಲೇ ನಾನು ಸೋತೆ. ಹಾಗಾಗಿ ಜಿಲ್ಲೆಯ ಜನರು, ಕಾರ್ಯಕರ್ತರು ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. 

ಕಳೆದ ಬಾರಿ ಸೋತಿದ್ದೀರಿ, ಈ ಬಾರಿ ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಸೋಮವಾರ ಸಂಜೆಯೊಳಗೆ ತಂದೆಯವರ ನಿರ್ಧಾರ ಗೊತ್ತಾಗಲಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ರವಿಕುಮಾರ್, ಮುಖಂಡ ಬಿ.ರಾಮಚಂದ್ರ ಸೇರಿದಂತೆ ನೂರಾರು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ನೆರೆದಿದ್ದರು.