ಧರ್ಮಸ್ಥಳದ ವಿರುದ್ಧ ಷಡ್ಯಂತ್ರ : ಜೆಡಿಎಸ್‌ ಯಶಸ್ವಿ ಸತ್ಯಯಾತ್ರೆ

| N/A | Published : Sep 01 2025, 01:04 AM IST / Updated: Sep 01 2025, 06:00 AM IST

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ : ಜೆಡಿಎಸ್‌ ಯಶಸ್ವಿ ಸತ್ಯಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಹಾಗೂ ಅತ್ಯಾಚಾರಕ್ಕೆ ಒಳಗಾದ ನೂರಾರು ಶವ ಹೂಳಲಾಗಿದೆ ಎಂಬ ದೂರಿನ ನೆಪದಲ್ಲಿ ಕ್ಷೇತ್ರದ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿ ಜಾತ್ಯತೀತ ಜನತಾ ದಳ (ಜೆಡಿಎಸ್) ಭಾನುವಾರ ಯಶಸ್ವಿಯಾಗಿ ಸತ್ಯಯಾತ್ರೆ ನಡೆಸಿದೆ.

  ಹಾಸನ/ಬೆಳ್ತಂಗಡಿ ":  ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಹಾಗೂ ಅತ್ಯಾಚಾರಕ್ಕೆ ಒಳಗಾದ ನೂರಾರು ಶವ ಹೂಳಲಾಗಿದೆ ಎಂಬ ದೂರಿನ ನೆಪದಲ್ಲಿ ಕ್ಷೇತ್ರದ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿ ಜಾತ್ಯತೀತ ಜನತಾ ದಳ (ಜೆಡಿಎಸ್) ಭಾನುವಾರ ಯಶಸ್ವಿಯಾಗಿ ಸತ್ಯಯಾತ್ರೆ ನಡೆಸಿದೆ. ಈ ವೇಳೆ, ‘ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸಂಘಟಿತ ಷಡ್ಯಂತ್ರ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಧರ್ಮಸ್ಥಳದಲ್ಲಿ ನಿಖಿಲ್‌ ಹಾಗೂ ಜೆಡಿಎಸ್‌ ನಾಯಕರ ಮಂಜುನಾಥನ ದರ್ಶನ ಪಡೆದು ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು. ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ‘ಸತ್ಯಯಾತ್ರೆ’ಯ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸುಳ್ಳು ವದಂತಿಗಳಿಂದ ದೇಶ-ವಿದೇಶಗಳಲ್ಲಿರುವ ಕೋಟ್ಯಂತರ ಭಕ್ತರಿಗೆ ತೀವ್ರ ನೋವಾಗಿದೆ. ಭಯ ಮತ್ತು ಗೊಂದಲದ ವಾತಾವರಣ ಉಂಟಾಗಿದೆ. ಆದ್ದರಿಂದ ಪಾರದರ್ಶಕವಾಗಿ ತನಿಖೆ ನಡೆಸಿ, ನ್ಯಾಯ ಒದಗಿಸಲು ಬುರುಡೆ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು’ ಎಂದು ಒತ್ತಾಯಿಸಿದರು.ಸಮಾವೇಶದಲ್ಲಿ ಉಪಸ್ಥಿತರಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಎಸ್‌ಐಟಿ ತನಿಖೆ ಪೂರ್ತಿಯಾಗಿಲ್ಲ. ಹೀಗಾಗಿ, ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಬಹಳ‌ ಗೌರವವಿದೆ. ದೇವೇಗೌಡರಂತಹ ಮಹಾತ್ಮರನ್ನು ಸ್ಮರಿಸುತ್ತೇವೆ. ನಿಖಿಲ್ ಅವರು, ಕ್ಷೇತ್ರದೊಂದಿಗೆ ನಾವಿದ್ದೇವೆ ಅಂದಿದ್ದಾರೆ. ಇಲ್ಲಿ ಬಂದು ಪ್ರೀತಿ ತೋರಿಸಿದ ನಿಮಗೆ ನಾನು ಅಭಾರಿ. ದೇವಸ್ಥಾನದ ಬಗ್ಗೆ ನಿಮ್ಮ ಪ್ರೀತಿ-ಗೌರವ ಹೀಗೆ ಇರಲಿ’ ಎಂದರು.

ಬಿಜೆಪಿಗಿಂತ 1 ದಿನ ಮೊದಲೇ ಯಾತ್ರೆ:

ಮಿತ್ರ ಪಕ್ಷ ಬಿಜೆಪಿಗಿಂತ 1 ದಿನ ಮೊದಲೇ ಈ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇದರಂಗವಾಗಿ ನಿಖಿಲ್‌ ನೇತೃತ್ವದಲ್ಲಿ ಹಾಸನ ಸಮೀಪ ಕಂದಲಿಯಿಂದ ಧರ್ಮಸ್ಥಳದವರೆಗೆ ಯಾತ್ರೆ ಕೈಗೊಳ್ಳಲಾಯಿತು. ಶಾಸಕ ಎಚ್.ಪಿ.ಸ್ವರೂಪ್, ಸಿಎನ್. ಬಾಲಕೃಷ್ಣ, ಮಾಜಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹಾಗೂ ಸಾವಿರಾರು ಸಂಖ್ಯೆಯ ಜೆಡಿಎಸ್‌ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರು, ನೇತ್ರಾವತಿಯಲ್ಲಿ ಪುಣ್ಯಸ್ನಾನ ಮಾಡಿ, ಮಂಜುನಾಥ ಸ್ವಾಮಿಯ ದರ್ಶನ ಮಾಡಿದರು. ಬಳಿಕ, ಮುಖಮಂಟಪದಿಂದ ಅಮೃತವರ್ಷಿಣಿ ಸಭಾಭವನದವರೆಗೆ ಬೃಹತ್‌ ಮೆರವಣಿಗೆ ನಡೆಸಿ, ಧರ್ಮಸ್ಥಳದ ಪರವಾಗಿ ಬೆಂಬಲ ಘೋಷಿಸಿದರು. ನಂತರ, ಅಮೃತವರ್ಷಿಣಿ ಸಭಾಭವನದಲ್ಲಿ ಬೃಹತ್‌ ಸಮಾವೇಶ ನಡೆಸಲಾಯಿತು.

- ಬಿಜೆಪಿಗಿಂತ 1 ದಿನ ಮೊದಲೇ ಜೆಡಿಎಸ್ ‘ಯಾತ್ರೆ’

- ಹಾಸನದಿಂದ-ಧರ್ಮಸ್ಥಳದವರೆಗೆ ನಡೆದ ‘ಸತ್ಯಯಾತ್ರೆ’- ನಿಖಿಲ್‌ ನೇತೃತ್ವದ ಯಾತ್ರೆ, ಸಾವಿರಾರು ಕಾರ್ಯಕರ್ತರು ಭಾಗಿ

- ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ದರ್ಶನ, ಡಾ। ಹೆಗ್ಗಡೆ ಭೇಟಿ

- ಷಡ್ಯಂತ್ರದ ವಿರುದ್ಧ ನಾವಿದ್ದೇವೆ ಎಂಬ ಸಂದೇಶ ರವಾನೆ

Read more Articles on