ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಾಧನೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Mar 13 2024, 02:00 AM IST / Updated: Mar 13 2024, 02:01 AM IST

ಸಾರಾಂಶ

ಸೋಲಿನ ಆತಂಕದಿಂದ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ರಾಜಕಾರಣಕ್ಕೆ ಮುಂದಾಗಿದೆ. ಇವರ ಅಧಿಕಾರದ ಲಾಲಸೆಗೆ ಬಲಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಕಪಟ ನಾಟಕವನ್ನು ರಾಜ್ಯದ ಜನ ತಿರಸ್ಕರಿಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಕಂಡಿರುವ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಕಂಡಿರುವ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಲಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಲಿನ ಆತಂಕದಿಂದ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ರಾಜಕಾರಣಕ್ಕೆ ಮುಂದಾಗಿದೆ. ಇವರ ಅಧಿಕಾರದ ಲಾಲಸೆಗೆ ಬಲಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಕಪಟ ನಾಟಕವನ್ನು ರಾಜ್ಯದ ಜನ ತಿರಸ್ಕರಿಸಲಿದ್ದಾರೆ ಎಂದರು.

ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಹರಿಸಿದರೆ ಅಪಪ್ರಚಾರಕ್ಕೆ ಮುಂದಾಗುವ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರಿಗೆ ಬೆಂಗಳೂರು ಜನರ ಮತ ಕೇಳುವ ನೈತಿಕ ಹಕ್ಕಿಲ್ಲ. ದೇಶದಲ್ಲಿ ವಿಜೃಂಭಿಸುತ್ತಿರುವ ಕೋಮು ದಳ್ಳೂರಿ ಶಮನಗೊಳಿಸಿ ಬಿಜೆಪಿ ದುಷ್ಟಕೂಟವನ್ನು ಬಗ್ಗು ಬಡಿಯಲು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದರು.

ನಿಸ್ವಾರ್ಥದಿಂದ ಕಾಂಗ್ರೆಸ್ ಪಕ್ಷದ ಬಲವರ್ಧನೆ ಹಾಗೂ ದೇಶದ ಹಿತಕ್ಕೆ ಶ್ರಮಿಸುತ್ತಿರುವ ರಾಹುಲ್‌ಗಾಂಧಿ ಅವರ ಕೈ ಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಆಲಿಯಾಸ್ ಸ್ಟಾರ್ ಚಂದ್ರು ಅವರನ್ನು 50 ಸಾವಿರ ಮತಗಳ ಅಂತರದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಅಧಿಕಾರಕ್ಕಾಗಿ ಬಿಜೆಪಿಯವರ ಒಡೆದು ಆಳುವ ನೀತಿ ಹಾಗೂ ವ್ಯಾಪಕ ಹಸಿ ಸುಳ್ಳುಗಳನ್ನು ಹೇಳುತ್ತಿದೆ. ಇದನ್ನು ದೇಶದ ಜನರಿಗೆ ಅರ್ಥೈಸಿ ಸತ್ಯವನ್ನು ಮನವರಿಕೆ ಮಾಡಿ ಬಡಿದೆಬ್ಬಿಸಲು ಇಂದಿರಾ ಕುಟುಂಬದ ಕುಡಿ ರಾಹುಲ್ ಗಾಂಧಿ ಅವರು ದೇಶದ್ದುದಕ್ಕೂ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದರು.