ರಾಜ್ಯಸಭೆ ಅಖಾಡಕ್ಕೆ 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪ್ರವೇಶ

| Published : Feb 16 2024, 01:45 AM IST / Updated: Feb 16 2024, 01:16 PM IST

Kuppendra Reddy

ಸಾರಾಂಶ

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜಂಟಿಯಾಗಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಚುನಾವಣಾ ಕಣ ರಂಗೇರಿದಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜಂಟಿಯಾಗಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಚುನಾವಣಾ ಕಣ ರಂಗೇರಿದಂತಾಗಿದೆ.

ಗುರುವಾರ ಕಾಂಗ್ರೆಸ್‍ನಿಂದ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್, ಅಜಯ್ ಮಾಕನ್, ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಮತ್ತು ಜೆಡಿಎಸ್‍ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.

ಕೊನೆ ಕ್ಷಣದ ಬೆಳವಣಿಗೆಯಲ್ಲಿ ಜೆಡಿಎಸ್‌ನ ಕುಪೇಂದ್ರರೆಡ್ಡಿ ಅಖಾಡಕ್ಕಿಳಿದಿರುವ ಹಿನ್ನೆಲೆಯಲ್ಲಿ ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗೆ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಶಾಸಕರ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ದಟ್ಟವಾಗಿದೆ. 

ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಗುರುವಾರ ಆರು ಅಭ್ಯರ್ಥಿಗಳಿಂದ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಡಾ.ಕೆ.ಪದ್ಮರಾಜನ್ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ. 

ಗುರುವಾರ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಕೆಂಗನೂರು ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಒಟ್ಟು ಏಳು ಅಭ್ಯರ್ಥಿಗಳಿಂದ 18 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.

ಬಿಜೆಪಿಯ ನಾರಾಯಣಸಾ ಕೆ. ಭಾಂಡಗೆ ಎರಡು ನಾಮಪತ್ರ, ಕಾಂಗ್ರೆಸ್‌ನ ಅಭ್ಯರ್ಥಿಗಳಾಗಿ ಅಜಯ್ ಮಾಕನ್ ನಾಲ್ಕು ನಾಮಪತ್ರ, ಜಿ.ಸಿ.ಚಂದ್ರಶೇಖರ್ ನಾಲ್ಕು ನಾಮಪತ್ರ ಮತ್ತು ನಾಸೀರ್ ಹುಸೇನ್ ನಾಲ್ಕು ನಾಮಪತ್ರ, ಜೆಡಿಎಸ್‌ನ ಕುಪೇಂದ್ರ ರೆಡ್ಡಿ ನಾಲ್ಕು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಕೆಂಗನೂರು, ಪದ್ಮರಾಜನ್‌ ತಲಾ ಒಂದೊಂದು ನಾಮಪತ್ರವನ್ನು ಸಲ್ಲಿಸಿದ್ದಾರೆ.

ಪ್ರಸ್ತುತ ಚುನಾವಣೆಯ ಬಲಾಬಲದಲ್ಲಿ ಕಾಂಗ್ರೆಸ್ ಮೂರು ಮತ್ತು ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಿತ್ತು. ಆದರೆ, ಕೊನೆ ಕ್ಷಣದಲ್ಲಿ ಜೆಡಿಎಸ್‌ನಿಂದ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿರುವ ಕಾರಣ ಚುನಾವಣೆ ನಡೆಯುವುದು ಖಚಿತವಾಗಿದೆ.

ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಸೂಚಕರ ಸಹಿ ಇಲ್ಲದೆ ಸಲ್ಲಿಸಿರುವ ಕಾರಣ ಅವರ ಉಮೇದುವಾರಿಕೆ ತಿರಸ್ಕೃತವಾಗುವುದು ಬಹುತೇಕ ಖಚಿತವಾಗಿದೆ. ಏಳು ಅಭ್ಯರ್ಥಿಗಳ ಪೈಕಿ ಇಬ್ಬರ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆಯಿದ್ದು, ಅಂತಿಮವಾಗಿ ಐವರು ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆ.

ಗೆಲುವಿಗೆ 45 ಶಾಸಕರ ಮತ ಬೇಕು: ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಓರ್ವ ಅಭ್ಯರ್ಥಿ ತಲಾ 45 ಮತಗಳನ್ನು ಪಡೆಯಬೇಕು. ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19 ಹಾಗೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ.

ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಅವರಿಗೆ ಮೊದಲ ಪ್ರಾಶಸ್ತ್ಯದಲ್ಲಿ 45 ಮತ್ತು ಹೆಚ್ಚುವರಿಯಾಗಿ ಒಂದು ಸೇರಿ ಒಟ್ಟು 46 ಮತಗಳನ್ನು ಹಾಕಿಸಲಿದೆ. 

ಹೆಚ್ಚುವರಿಯಾಗಿ ಉಳಿಯುವ 20 ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ವರ್ಗಾಯಿಸಲಿದೆ. ಜೆಡಿಎಸ್ 19 ಸದಸ್ಯರನ್ನು ಹೊಂದಿದ್ದು, ಬಿಜೆಪಿಯ ಹೆಚ್ಚುವರಿ 20 ಮತಗಳು ಸೇರಿದರೆ 39 ಮತಗಳು ಕುಪೇಂದ್ರ ರೆಡ್ಡಿಗೆ ಬರಲಿವೆ. 

ಇನ್ನುಳಿದ ಆರು ಮತಗಳಿಗಾಗಿ ರಾಜಕೀಯ ತಂತ್ರಗಾರಿಕೆ ಆರಂಭವಾಗಿದೆ.ಪಕ್ಷೇತರ ಶಾಸಕರಾದ ಜನಾರ್ದನ ರೆಡ್ಡಿ ಎನ್‌ಡಿಎ ಅಭ್ಯರ್ಥಿಗೆ ಹಾಕುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. 

ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ ಹಾಗೂ ದರ್ಶನ್ ಪುಟ್ಟಣ್ಣಯ್ಯ ಅವರ ಮತ ಪಡೆಯಲು ಜೆಡಿಎಸ್‌ ಕಸರತ್ತು ಪ್ರಾರಂಭಿಸಿದ್ದರೂ ಅವರು ಕಾಂಗ್ರೆಸ್‌ನತ್ತ ಒಲವು ಹೊಂದಿದ್ದಾರೆ ಎನ್ನಲಾಗಿದೆ. 

ಪಕ್ಷೇತರರು ಸೇರಿ ಕಾಂಗ್ರೆಸ್‌ನಿಂದ ಅಡ್ಡಮತದಾನವಾದರೆ ಮಾತ್ರ ಕುಪೇಂದ್ರ ರೆಡ್ಡಿ ಅವರ ಗೆಲುವು ನಿರೀಕ್ಷಿಸಬಹುದಾಗಿದೆ. 

ಶುಕ್ರವಾರ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಇದೇ ತಿಂಗಳು 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. 

27ರಂದು ಮತದಾನ ನಡೆಯಲಿದೆ. ಅಂದೇ ಮತ ಎಣಿಕೆ ನಡೆಯಲಿದ್ದು, ಚುನಾವಣೆ ಕುತೂಹಲ ಮೂಡಿಸಿದೆ.