ಸಾರಾಂಶ
ಎರಡು ವರ್ಷದಿಂದ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡದೆ ಜನವಿರೋಧಿ, ಆವೈಜ್ಞಾನಿಕ ಆಡಳಿತ ನೀಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡಿ ಸಾಮಾನ್ಯ ಜನ ಜೀವನ ದುಸ್ತರವಾಗುವಂತೆ ಮಾಡಿದ್ದಾರೆ.
ಕೋಲಾರ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ದಿಗೆ ಮೀಸಲಿಟ್ಟಿದ್ದ ಹಣವನ್ನು ರಾಜ್ಯ ಆಡಳಿತರೂಢ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳಿಗೆ ದುರ್ಬಬಳಕೆ ಮಾಡಿಕೊಂಡಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ಹಣ ಮೀಸಲಿಟ್ಟಿರುವ ಹಣ ಎಲ್ಲಿ ಹೋಗಿದೆ ಎಂಬುವುದಕ್ಕೆ ಶ್ವೇತ ಪತ್ರ ಪ್ರಕಟಿಸಲಿ ಎಂದು ಸಂಸದ ಮಲ್ಲೇಶ್‌ಬಾಬು ಆಗ್ರಹಿಸಿದರು.
ನಗರದ ಕೆ,ಎಸ್.ಆರ್.ಟಿ.ಸಿ. ವೃತ್ತದಲ್ಲಿ ಜೆ.ಡಿ.ಎಸ್ ಮುಖಂಡ ಶ್ರೀನಾಥ್‌ರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ವಿರುದ್ದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಕುಮಾರ ಸ್ವಾಮಿ ಸಿಎಂ ಆಗಿದ್ದಾಗ ಸಾರಾಯಿ ಬಂದ್ ಮಾಡಿದರು, ಲಾಟರಿಗಳನ್ನು ಬಂದ್ ಮಾಡಿಸಿದರು, ರೈತರ ಸಾಲಮನ್ನಾ ಮುಂತಾದ ಜನ ಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಹೇಳಿದರು.
ಜನವಿರೋಧಿ ಆಡಳಿತ
ವಿದ್ಯುತ್ ಫ್ರೀ, ಬಸ್ ಫ್ರೀ ಎಂದು ಅವೈಜ್ಞಾನಿಕವಾಗಿ ಬೆಲೆಗಳನ್ನು ಏರಿಕೆ ಮಾಡಿದ್ದಾರೆ, ಹಾಲಿನ ದರ ಏರಿಕೆ ಮಾಡದೆ ಪಶುಗಳ ಆಹಾರದ ಬೆಲೆ ಏರಿಕೆ ಮಾಡಿದ್ದಾರೆ, ಕಳೆದ ಎರಡು ವರ್ಷದಿಂದ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡದೆ ಜನವಿರೋಧಿ, ಆವೈಜ್ಞಾನಿಕ ಆಡಳಿತ ನೀಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡಿ ಸಾಮಾನ್ಯ ಜನ ಜೀವನ ದುಸ್ತರವಾಗುವಂತೆ ಮಾಡಿದ್ದಾರೆ ಎಂದು ದೂರಿದರು.
ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ
ಜೆ.ಡಿ.ಎಸ್. ಮುಖಂಡ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ರಾಜ್ಯ ಸರ್ಕಾರ ಕೋಲಾರ ಜಿಲ್ಲೆಗೆ ಕಳೆದ ಎರಡು ವರ್ಷದಿಂದ ಯಾವುದೇ ಯೋಜನೆಗಳನ್ನು ನೀಡದೆ ಮಲತಾಯಿ ಧೋರಣೆ ತೋರಿತ್ತಿದೆ. ಸಿಎಂ ಸಿದ್ದರಾಮಯ್ಯ ತೇರಹಳ್ಳಿಯ ಆದಿಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆಗೆ ೫ ಕೋಟಿ ರೂ ಬಿಡುಗಡೆ ಮಾಡಿದ್ದು ಹೊರತುಪಡಿಸಿದರೆ ಯಾವುದೇ ಅಭಿವೃದ್ದಿ ಕಾರ್ಯಗಳು ಆಗಿಲ್ಲ ಎಂದು ಕಿಡಿಕಾರಿದರು.
ಜೆಡಿಎಸ್ ಮುಖಂಡರಾದ ಜಿ.ಇ.ರಾಮೇಗೌಡ, ಡಾ.ಡಿ.ಕೆ.ರಮೇಶ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ವಡಗೂರು ರಾಮು, ಜೆ.ಡಿ.ಎಸ್ ಜಿಲ್ಲಾ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್, ತಾಪಂ ಮಾಜಿ ಸದಸ್ಯ ಮುದುವಾಡಿ ಮಂಜುನಾಥ್, ವಿಕಲ ಚೇತನ ಮುಖಂಡ ಸುಪ್ರೀಂ, ಮಡೇರಹಳ್ಳಿ ಮೀನಾಕ್ಷಿ, ಗೋಪಾಲಗೌಡ, ಚಂಬೆರಾಜೇಶ್, ನರಸಾಪುರ ವಿಜಯಕುಮಾರ್, ಟಮಕ ವೆಂಕಟೇಶಪ್ಪ. ನಗರಸಭೆ ಮಾಜಿ ಸದಸ್ಯ ವೆಂಕಟೇಶ್ ಪತಿ, ಕೃಷ್ಣಪ್ಪ ಮತ್ತಿತರರು ಇದ್ದರು.