ರಾಜ್ಯದಲ್ಲಿ ಜೆಡಿಎಸ್ ಬಲ ಕುಂದಿಲ್ಲ: ನಿಖಿಲ್ ಕುಮಾರಸ್ವಾಮಿ

| Published : Jul 02 2025, 12:22 AM IST

ರಾಜ್ಯದಲ್ಲಿ ಜೆಡಿಎಸ್ ಬಲ ಕುಂದಿಲ್ಲ: ನಿಖಿಲ್ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ, ಅನುದಾನ ಸಿಗುತ್ತಿಲ್ಲ ಎಂದು ಇಲ್ಲಿನ ಶಾಸಕ ಎಚ್.ಟಿ.ಮಂಜು ಹೇಳುತ್ತಿದ್ದಾರೆ. ಇದು ಕೇವಲ ವಿಪಕ್ಷದ ಶಾಸಕರು ಮಾತ್ರ ಹೇಳುತ್ತಿಲ್ಲ. ಬದಲಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಯಾರೋ ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಲಾಟರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಜನರೊಂದಿಗೆ ಜನತಾದಳ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಅಂಗವಾಗಿ ತಾಲೂಕು ಜೆಡಿಎಸ್‌ನಿಂದ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಸಿದ್ದರಾಮಯ್ಯರನ್ನು ನಂಬಿ ಹೋದ ಹಿರಿಯ ಶಾಸಕ ಬಿ.ಆರ್ ಪಾಟೀಲ್ ಅವರ ಗತಿ ಏನಾಗಿದೆ. ಬೀದಿಯಲ್ಲಿ ಬಂದು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಲಾಟರಿ ಸಿಎಂ ಅಂತ ಅವರ ಪಕ್ಷದಲ್ಲೇ ಮಾತಾಡುತ್ತಿದ್ದಾರೆ. ಇದಕ್ಕೆ ಉತ್ತರಿಸಿ ಎಂದು ಪ್ರಶ್ನಿಸಿದರು.

ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ, ಅನುದಾನ ಸಿಗುತ್ತಿಲ್ಲ ಎಂದು ಇಲ್ಲಿನ ಶಾಸಕ ಎಚ್.ಟಿ.ಮಂಜು ಹೇಳುತ್ತಿದ್ದಾರೆ. ಇದು ಕೇವಲ ವಿಪಕ್ಷದ ಶಾಸಕರು ಮಾತ್ರ ಹೇಳುತ್ತಿಲ್ಲ. ಬದಲಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿ.ಆರ್.ಪಾಟೀಲ್‌ರಂತಹ ಕಾಂಗ್ರೆಸ್ ಶಾಸಕರೇ ಬೀದಿಗಿಳಿದು ಸಿಎಂ, ಪಕ್ಷದ ವಿರುದ್ಧ ಧ್ವನಿಯೆತ್ತಿದ್ದಾರೆ. ರಸ್ತೆ, ಚರಂಡಿ, ಶಿಥಿಲವಾದ ಶಾಲೆಗಳ ಪುನರ್ ನಿರ್ಮಾಣಕ್ಕೂ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಕನಿಷ್ಠ ಸೌಲಭ್ಯ ಕಲ್ಪಿಸಲೂ ನಮ್ಮ ಸರ್ಕಾರದಲ್ಲಿ ಹಣ ಕೊಡ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ದೂರುತ್ತಿದ್ದಾರೆ ಎಂದು ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ಅವರೇ ನೀವು ಜೆಡಿಎಸ್ ಬಗ್ಗೆ ಚರ್ಚಿಸುವುದನ್ನು ಬಿಟ್ಟು ನಿಮ್ಮ ಪಕ್ಷದ ಸಮಸ್ಯೆ ಬಗೆಹರಿಸಿಕೊಳ್ಳಿ. ನಿಮ್ಮ ರಾಜಕೀಯ ಅನುಭವಕ್ಕಾಗಿರುವಷ್ಟು ವಯಸ್ಸು ನನಗಾಗಿಲ್ಲ. ಆದರೆ, ನಮ್ಮ ಪಕ್ಷದ ಇತಿಹಾಸದ ಬಗ್ಗೆ ನನಗೆ ಅರಿವಿದೆ. ಬಿಜೆಪಿ -ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಜೆಡಿಎಸ್ ಬಲ ಕುಂದಿಲ್ಲ ಎಂದರು.

ನಿಮ್ಮನ್ನು ರಾಜಕೀಯವಾಗಿ ಬೆಳೆಸಿದ್ದು ಜೆಡಿಎಸ್. ನಮ್ಮ ಪಕ್ಷದಲ್ಲಿ ಸಾಕಷ್ಟು ಅನುಭವಿ ಶಾಸಕರಿದ್ದರೂ ಪಕ್ಷ ನಾಯಕರು ನಿಮಗೆ ಉನ್ನತ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಿದ್ದರು. ಆದರೆ, ಜೆಡಿಎಸ್‌ಗೆ ಮೋಸ, ದ್ರೋಹ ಮಾಡಿ ಹೋದ ನೀವು ಈಗ ಜೆಡಿಎಸ್‌ಗೆ ಭವಿಷ್ಯವಿಲ್ಲ ಎಂದು ಕೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ನಿಷ್ಟಾವಂತ ಕಾರ್ಯಕರ್ತರ ಹೃದಯದಲ್ಲಿದೆ. ನಾವು ಎಂದಿಗೂ ಹೆದರಿ ಓಡಿ ಹೋಗುವವರಲ್ಲ. 100 ವರ್ಷದ ಇತಿಹಾಸ ಹೊಂದಿರುವ ನಿಮ್ಮ ಕಾಂಗ್ರೆಸ್ ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಗ್ಯಾರಂಟಿ ಮೂಲಕ ಜನರ ಧಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದಿದ್ದೀರಿ. ಯಾರೋ ಕಟ್ಟಿ ಬೆಳೆಸಿದ ಪಕ್ಷಕ್ಕೆ ಸೇರಿಕೊಂಡ ನೀವು ನಾಯಕತ್ವಕ್ಕೆ ಸೆಡ್ಡು ಹೊಡೆಯುತ್ತಾರೆನ್ನುವ ಕಾರಣಕ್ಕೆ ಈ ಹಿಂದೆ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರನ್ನು ಸೋಲುವಂತೆ ಮಾಡಿದೀರಿ ಎಂದು ಆರೋಪಿಸಿದರು.

ವಿಧಾನಸಭೆಗೆ ಮುಂದೆ ಚುನಾವಣೆ ಘೋಷಣೆಯಾದರೆ ರಾಜ್ಯದ ಜನತೆ ಸಂಪೂರ್ಣವಾಗಿ ಕಾಂಗ್ರೆಸ್ ನನ್ನ ತಿರಸ್ಕಾರ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಆಲೋಚನೆ ಮಾಡಿಲ್ಲ. ಚುನಾವಣೆ ಇನ್ನೂ ಬಹಳ ದೂರದ ಮಾತು. ಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿ ನನ್ನ ಗುರಿ ಎಂದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ಅನುಭವಿಸಿದ್ದು ಕಡಿಮೆ. ಆದರೆ, ತಮ್ಮ ಕೆಲಸಗಳ ಮೂಲಕ ಕಡಿಮೆ ಅವಧಿಯಲ್ಲಿಯೇ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ರೈತ ಪರ ಕಾಳಜಿ ಮತ್ತು ಹೋರಟದ ತಳಹದಿಯ ಮೇಲೆ ಜೆಡಿಎಸ್ ನಿಂತಿದೆ. ಕುಮಾರಣ್ಣ ಕೇಂದ್ರ ಸಚಿವರಾಗಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಅಪಾರ ತುಡಿತ ಹೊಂದಿದ್ದಾರೆ. ಆದರೆ, ಅವರಿಗೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿಲ್ಲ ಬೇಸರ ವ್ಯಕ್ತಪಡಿಸಿದರು.

ರಾಜ್ಯದ ತಂಬಾಕು ಬೆಳೆಗಾರರು, ಕೊಬ್ಬರಿ ಬೆಳೆಗಾರರು ಮತ್ತು ಮಾವು ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ಕೇಂದ್ರ ಸರ್ಕಾರದ ಮೂಲಕ ಬೆಂಬಲ ಬೆಲೆ ನಿಗಧಿ ಪಡಿಸಿ ರೈತರ ನೆರವಿಗೆ ನಿಂತವರು ಕುಮಾರಣ್ಣ. ಮುಂದಿನ ದಿನಗಳಲ್ಲಿ ಕುಮಾರಣ್ಣ ಮತ್ತೆ ರಾಜ್ಯ ಮುಖ್ಯಮಂತ್ರಿಯಾಗಬೇಕೆಂದು ಜನತೆ ಬಯಸುತ್ತಿದ್ದಾರೆ. ಜನರ ಕನಸು ನನಸಾಗಬೇಕಾದರೆ ಜೆಡಿಎಸ್ ಕಾರ್ಯಕರ್ತರು ಯಾವುದೇ ಟೀಕೆ ಟಿಪ್ಪಣಿಗಳಿಗೆ ಧೃತಿಗೆಡದೆ ಸ್ಥಳೀಯ ಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ತುಂಬ ಕೆಲಸ ಮಾಡುವಂತೆ ಕರೆ ನೀಡಿದರು.

ಸಮಾರಂಭದಲ್ಲಿ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಅನ್ನದಾನಿ, ಸುರೇಶ್ ಗೌಡ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಜಾನಕೀರಾಂ, ಮೈಸೂರಿನ ಮಾಜಿ ಮೇಯರ್ ರವಿ, ಮುಖಂಡರಾದ ಎಚ್.ಕೆ.ಅಶೋಕ್, ಮಲ್ಲೇನಹಳ್ಳಿ ಮೋಹನ್, ಶೀಳನೆರೆ ಮೋಹನ್, ವಿ.ಎಂ.ಮಹದೇವೇಗೌಡ, ಬಿ.ಎಂ.ಕಿರಣ್, ಅಕ್ಕಿಹೆಬ್ಬಾಳು ರಘು, ಗದ್ದೆಹೊಸೂರು ಅಶ್ವಿನ್ ಕುಮಾರ್, ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಜೆಡಿಎಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಖಾ ಸೇರಿದಂತೆ ಹಲವರಿದ್ದರು.