ವಿಶ್ವಾಸಮತಕ್ಕೆ ಜೆಜೆಪಿ ಪಟ್ಟು:ಹರ್ಯಾಣ ಸರ್ಕಾರ ಗಡಗಡ

| Published : May 10 2024, 01:37 AM IST / Updated: May 10 2024, 04:30 AM IST

ವಿಶ್ವಾಸಮತಕ್ಕೆ ಜೆಜೆಪಿ ಪಟ್ಟು:ಹರ್ಯಾಣ ಸರ್ಕಾರ ಗಡಗಡ
Share this Article
  • FB
  • TW
  • Linkdin
  • Email

ಸಾರಾಂಶ

ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದು ಕಾಂಗ್ರೆಸ್‌ ಜೊತೆಗೆ ಗುರುತಿಸಿಕೊಂಡ ಬಳಿಕ ಅಲ್ಪಮತಕ್ಕೆ ಕುಸಿದಿರುವ ಹರ್ಯಾಣದ ಬಿಜೆಪಿ ಸರ್ಕಾರಕ್ಕೆ ತಕ್ಷಣ ವಿಶ್ವಾಸಮತ ಯಾಚಿಸುವಂತೆ ಆದೇಶ ನೀಡಿ ಎಂದು ವಿರೋಧ ಪಕ್ಷ ಜೆಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ.

 ಚಂಡೀಗಢ :  ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದು ಕಾಂಗ್ರೆಸ್‌ ಜೊತೆಗೆ ಗುರುತಿಸಿಕೊಂಡ ಬಳಿಕ ಅಲ್ಪಮತಕ್ಕೆ ಕುಸಿದಿರುವ ಹರ್ಯಾಣದ ಬಿಜೆಪಿ ಸರ್ಕಾರಕ್ಕೆ ತಕ್ಷಣ ವಿಶ್ವಾಸಮತ ಯಾಚಿಸುವಂತೆ ಆದೇಶ ನೀಡಿ ಎಂದು ವಿರೋಧ ಪಕ್ಷ ಜೆಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಮನವಿ ಮಾಡಿದ್ದ ಕಾಂಗ್ರೆಸ್‌ ಪಕ್ಷ ಕೂಡ ಇದೇ ವಿಷಯ ಚರ್ಚೆಗೆ ರಾಜ್ಯಪಾಲರ ಸಮಯ ಕೇಳಿದೆ. ಅದರೊಂದಿಗೆ ಹರ್ಯಾಣ ಸರ್ಕಾರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದೆ.

ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಪತ್ರ ಬರೆದಿರುವ ಜೆಜೆಪಿ ನಾಯಕ ದುಷ್ಯಂತ್‌ ಚೌಟಾಲಾ, ‘ಹರ್ಯಾಣದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಬಹುಮತ ಕಳೆದುಕೊಂಡಿರುವುದು ನಿಶ್ಚಿತವಾಗಿದೆ. ಕೂಡಲೇ ಅವರಿಗೆ ಸದನದಲ್ಲಿ ವಿಶ್ವಾಸಮತ ಯಾಚನೆಗೆ ಸೂಚನೆ ನೀಡಬೇಕು’ ಎಂದು ಕೋರಿದ್ದಾರೆ.

ಜೆಜೆಪಿ ಈ ಹಿಂದೆ ಸೈನಿ ಸರ್ಕಾರದ ಪಾಲುದಾರನಾಗಿತ್ತು ಮತ್ತು ದುಷ್ಯಂತ್‌ ಸಿಂಗ್‌ ಇದೇ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ನಂತರ ಲೋಕಸಭೆ ಚುನಾವಣೆ ಆರಂಭದ ವೇಳೆ ಅವರು ಸರ್ಕಾರದಿಂದ ಹೊರಬಂದಿದ್ದರು. ಹೀಗಾಗಿ ಬಿಜೆಪಿ ಸರ್ಕಾರ ಮೂವರು ಸ್ವತಂತ್ರ ಶಾಸಕರ ಬೆಂಬಲ ಪಡೆದಿತ್ತು. ಅವರೂ ಈಗ ಬೆಂಬಲ ಹಿಂಪಡೆದಿದ್ದಾರೆ. ಹೀಗಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

ಆದರೆ, ತಮ್ಮ ಸರ್ಕಾರ ಭದ್ರವಾಗಿದೆ ಎಂದು ಮುಖ್ಯಮಂತ್ರಿ ಸೈನಿ ಗುರುವಾರ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಕೂಡ ಸಾಕಷ್ಟು ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದು, ಏನೂ ಆತಂಕವಿಲ್ಲ ಎಂದಿದ್ದಾರೆ.