ಸಂಪುಟದಿಂದ‌ ಜಮೀರ್‌ರನ್ನು ಕಿತ್ತೊಗೆಯಿರಿ: ಸಿಎಂಗೆ ಜೋಶಿ ಆಗ್ರಹ

| Published : Oct 31 2024, 01:00 AM IST

ಸಾರಾಂಶ

ವಕ್ಫ್ ಮೂಲಕ ರಾಜ್ಯದಲ್ಲಿ ಕೋಮು-ದ್ವೇಷ ಹರಡುತ್ತಿರುವ, ಇಸ್ಲಾಮಿಕರಣಕ್ಕೆ ಮುಂದಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಮುಖ್ಯಮಂತ್ರಿಯವರು ಸಚಿವ ಸಂಪುಟದಿಂದ ಕಿತ್ತೊಗೆಯಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವಕ್ಫ್ ಮೂಲಕ ರಾಜ್ಯದಲ್ಲಿ ಕೋಮು-ದ್ವೇಷ ಹರಡುತ್ತಿರುವ, ಇಸ್ಲಾಮಿಕರಣಕ್ಕೆ ಮುಂದಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಮುಖ್ಯಮಂತ್ರಿಯವರು ಸಚಿವ ಸಂಪುಟದಿಂದ ಕಿತ್ತೊಗೆಯಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.

ನಗರದಲ್ಲಿ‌ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಡೋಂಗಿ ಜಾತ್ಯತೀತತೆ ಮತ್ತು ಮುಸ್ಲಿಮರ ತುಷ್ಟೀಕರಣದ ನೀತಿಯಿಂದಾಗಿ ದೇವಸ್ಥಾನಗಳ‌ ಒಂದು ಇಂಚು ಜಾಗವೂ ಹೆಚ್ಚಾಗಿಲ್ಲ. ಆದರೆ, ಎಲ್ಲ ಪ್ರಮುಖ ಮತ್ತು ಹೆಚ್ಚು ಆದಾಯ ಇರುವ ದೇವಸ್ಥಾನಗಳನ್ನು ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ಆರೋಪಿಸಿದರು‌.

ಬಿಜೆಪಿ ಸರ್ಕಾರ ಇದ್ದಾಗಲೂ ರೈತರಿಗೆ ನೋಟಿಸ್ ನೀಡಲಾಗಿತ್ತು ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಿದ್ದಾರೆ. ಆ ಸಮಯದಲ್ಲಿ ರೈತರಿಗೆ ನೋಟಿಸ್ ನೀಡಿದ್ದರೆ ಅದು ತಪ್ಪು. ಆಗ ಯಾರೂ ನಮ್ಮ ಗಮನಕ್ಕೆ ತಂದಿರಲಿಲ್ಲ. ನಮ್ಮ ಸರ್ಕಾರ ಇದ್ದುದರಿಂದ ವಕ್ಫ್ ಮಂಡಳಿಯವರು ಗೌಪ್ಯವಾಗಿ ನೋಟಿಸ್ ನೀಡಿದ್ದರು. ಆಗ ನಮ್ಮ‌ ಗಮನಕ್ಕೆ ಬಂದಿದ್ದರೆ ಮಂಡಳಿಯವರಿಗೆ ಆಗಲೇ ಎಚ್ಚರಿಕೆ ನೀಡಿ, ನೋಟಿಸ್ ಹಿಂಪಡೆಯಲು ಸೂಚನೆ ನೀಡುತ್ತಿದ್ದೆವು. ಈಗ ರೈತರು ನಮ್ಮ ಗಮನಕ್ಕೆ ತಂದಿದ್ದರಿಂದ ಹೋರಾಟ ಮಾಡಲಾಗುತ್ತಿದೆ. ವಕ್ಫ್ ಆಸ್ತಿ ವಿವಾದ ಈಗಲೂ ಬೆಳಕಿಗೆ ಬರುತ್ತಿರಲಿಲ್ಲ. ಕೆಲವು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬಂದಿದ್ದರಿಂದ, ಉಳಿದವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ತಮ್ಮ ದಾಖಲೆಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ ಎಂದರು.

ವಕ್ಫ್‌ ಅದಾಲತ್‌ ನಿಲ್ಲಿಸಿ: ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ರೈತರ ಪಹಣಿಯಲ್ಲಿ ಈಗಲೂ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ರೈತರು ಜಮೀನು ಹೊಂದಿದ್ದಾರೆ. ಇತ್ತೀಚಿನ ವರ್ಷಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ಕೂಡಲೇ ತೆಗೆದು ಹಾಕಬೇಕು. ಪ್ರತಿ ಜಿಲ್ಲೆಗಳಿಗೆ ಹೋಗಿ ವಕ್ಫ್ ಮಂಡಳಿಯವರು ವಕ್ಫ್ ಅದಾಲತ್ ನಡೆಸುತ್ತಿದ್ದು ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಹಲವು ರೈತರಿಗೆ ವಕ್ಫ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ವಿಜಯಪುರದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುತ್ತಿದ್ದಾರೆ. ಈಗ ನಾನು ಈ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದರು.