ಭ್ರಷ್ಟಾಚಾರ ಎಲ್ಲ ಸಮಾಜ ಮತ್ತು ದೇಶಕ್ಕೆ ಅಂಟಿದ ರೋಗ - ಸಿಎಂ ವಿರುದ್ಧದ ಹೋರಾಟಕ್ಕೆ ಜಾತಿ ಲೇಪನ ಬೇಡ: ಜೋಶಿ

| Published : Aug 19 2024, 12:52 AM IST / Updated: Aug 19 2024, 04:24 AM IST

Prahlad Joshi

ಸಾರಾಂಶ

ಭ್ರಷ್ಟಾಚಾರ ಎಲ್ಲ ಸಮಾಜ ಮತ್ತು ದೇಶಕ್ಕೆ ಅಂಟಿದ ರೋಗ, ಅದರ ನಿರ್ಮೂಲನೆ ಆಗಬೇಕು ಅಂದರೆ ಯಾರೂ ಅದಕ್ಕೆ ಜಾತಿ ಲೇಪನ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

 ಹುಬ್ಬಳ್ಳಿ : ಭ್ರಷ್ಟಾಚಾರ ಎಲ್ಲ ಸಮಾಜ ಮತ್ತು ದೇಶಕ್ಕೆ ಅಂಟಿದ ರೋಗ, ಅದರ ನಿರ್ಮೂಲನೆ ಆಗಬೇಕು ಅಂದರೆ ಯಾರೂ ಅದಕ್ಕೆ ಜಾತಿ ಲೇಪನ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರಕ್ಕೆ ಯಾವುದೇ ಜಾತಿ ಎಂಬುದಿಲ್ಲ. ಇದು ಎಲ್ಲ ಸಮಾಜ ಮತ್ತು ದೇಶಕ್ಕೆ ಅಂಟಿದ ಪಿಡುಗು. ಹಾಗಾಗಿ ಇದರ ವಿರುದ್ಧ ಹೋರಾಟಕ್ಕಿಳಿದರೆ ಯಾರೂ ಜಾತಿ ನೆಪವನ್ನು ಮುಂದಿಡಬಾರದು ಎಂದು ಕಾಂಗ್ರೆಸಿಗರಿಗೆ ಕಿವಿಮಾತು ಹೇಳಿದರು.

ಮುಡಾ ಹಗರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಹಿಂದ ವರ್ಗದವರು ಜಾತಿ ಲೇಪನ ಹಚ್ಚಿ ಬೀದಿಗಿಳಿದು ಹೋರಾಡುವುದು ಸರಿಯಲ್ಲ. ರಾಜ್ಯಪಾಲರು ಅತ್ಯಂತ ಹಿಂದುಳಿದ, ಎಸ್ಸಿ ಸಮಾಜಕ್ಕೆ ಸೇರಿದವರು. ಅಂಥವರ ವಿರುದ್ಧ ಬೀದಿಗಿಳಿಯುವುದು ಕಾಂಗ್ರೆಸ್ಸಿಗೆ ಶೋಭೆ ತರದು ಎಂದರು.

ಕಾಂಗ್ರೆಸ್ ಭ್ರಷ್ಟಾಚಾರದ ಜನಕ: ದೇಶದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಜನಕ. ನೆಹರು ಕಾಲದಿಂದ ಮನಮೋಹನ್ ಸಿಂಗ್ ಕಾಲದ ವರೆಗೂ ಕಾಂಗ್ರೆಸ್ ಭ್ರಷ್ಟಾಚಾರವನ್ನು ಪೋಷಿಸಿಕೊಂಡು ಬಂದಿದೆ. ಹಾಗಾಗಿ, ಈಗ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ, ಬೆಂಬಲಕ್ಕೆ ನಿಂತಿದ್ದು, ಇದರಲ್ಲಿ ಅಚ್ಚರಿ ಏನಿಲ್ಲ ಎಂದರು.

ರಾಜೀನಾಮೆ ನೀಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ. ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಸ್ವತಃ ನೀವೇ ಮುಖ್ಯಮಂತ್ರಿ ಆಗಿರುವಾಗ ಸ್ಥಳೀಯ ಅಧಿಕಾರಿಗಳು ತನಿಖೆ ಹೇಗೆ ಮಾಡಿಯಾರು ಎಂದು ಪ್ರಶ್ನಿಸಿದ ಜೋಶಿ, ಸಿಎಂ ಆರೋಪ ಮುಕ್ತರಾಗುವ ತನಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಜೋಶಿ ಒತ್ತಾಯಿಸಿದರು.