'ಸಿದ್ದರಾಮಯ್ಯ ಸಂಡೇ ಲಾಯರಂತೆ, ಹೌದಾ! ಅವರು ದಿನಾ ಕೋರ್ಟ್‌ಗೆ ಹೋಗಿದ್ರೆ ಗೊತ್ತಾಗ್ತಿತ್ತು'

| Published : Nov 04 2024, 12:19 PM IST

Siddaramaiah

ಸಾರಾಂಶ

 ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ, ಮಂಗಳವಾರ, ಬುಧವಾರ ಅಂತ ದಿನಾ ಕೋರ್ಟ್‌ಗೆ ಹೋಗಿದ್ರೆ ಗೊತ್ತಾಗ್ತಿತ್ತು, ಆದರೆ ಏನ್ ಮಾಡೋದು ಅವರೊಬ್ಬ ಸಂಡೆ ಲಾಯರ್ರೀ...

ಪೊಲೀಸರು ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಬೈಲಿಕ್ಕೆ ಒಂದು ವಿಷಯ ಇದೆಯಂತೆ, ಏನದು?

ಸಿದ್ದರಾಮಯ್ಯ ಸಂಡೇ ಲಾಯರಂತೆ, ಹೌದಾ!  

ಸುದ್ದಿ ಸೂರಪ್ಪರೆಲ್ಲಾರೂ ಹೀಂಗ ಸಂಚಾರ ಸಮಸ್ಯೆ ಮುಂದಿಟ್ಕೊಂಡು ಸವಾಲ್‌- ಜವಾಬ್‌ಗೆ ಶುರುವಿಟ್ಟಾಗ ಕಮೀಷನರ್‌ ಸಾಹೇಬರು ಸುಸ್ತೋ ಸುಸ್ತು. ಥೇಟ್‌ ಕಲಬುರಗಿ ಅಡ್ಡಾದಿಡ್ಡಿ ಟ್ರಾಫಿಕ್‌ನಂಗೇ ಪ್ರೆಸ್‌ಮೀಟ್‌ನಲ್ಲೂ ಏಕಾಏಕಿ ವಿಷಯ ಡೈವರ್ಟ್‌ ಆಗಿತ್ತು!

 ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ, ಮಂಗಳವಾರ, ಬುಧವಾರ ಅಂತ ದಿನಾ ಕೋರ್ಟ್‌ಗೆ ಹೋಗಿದ್ರೆ ಗೊತ್ತಾಗ್ತಿತ್ತು, ಆದರೆ ಏನ್ ಮಾಡೋದು ಅವರೊಬ್ಬ ಸಂಡೆ ಲಾಯರ್ರೀ...

ಹೀಗೆಂದು ಇತ್ತೀಚೆಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳುತ್ತಿದ್ದಂತೆ ಕಕ್ಕಾಬಿಕ್ಕಿಯಾಗುವ ಸರದಿ ಕುಳಿತಿದ್ದ ವರದಿಗಾರರದ್ದಾಗಿತ್ತು. ವಕ್ಫ್‌ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪತ್ರಕರ್ತರು, ವಕ್ಫ್‌ ಆಸ್ತಿ ಎಂದು 1974ರಲ್ಲಿ ಗೆಜೆಟ್‌ನಲ್ಲಿ ಪರಿಗಣಿಸಿರುವ ಆಸ್ತಿಗಳಿಗೆ ನೋಟಿಸ್ ಕೊಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಟಿಸ್ ವಾಪಸ್ ಪಡೆದಿದ್ದೇವೆ ಎನ್ನುತ್ತಾರೆ. ಇದಕ್ಕೆ ನೀವೇನು ಎನ್ನುತ್ತೀರಿ ಎಂಬ ಪ್ರಶ್ನೆ ತೂರಿಬಿಟ್ಟರು.

ತಕ್ಷಣ ಛಲವಾದಿ ಸಾಹೇಬರು, ಸಿಎಂ ಅವರೇ ನೀವು ಸಂಡೆ ಲಾಯರ್ರಾ? ಜನರಿಗೆ ಉತ್ತರ ಕೊಡ್ರೀ... ಇಲಾಖೆಗಳಿಂದ ನೋಟಿಸ್ ಬಂದಿದ್ದು, ಅದನ್ನು ವಾಪಸ್ ಪಡೆಯಿರಿ ಎನ್ನುತ್ತೀರಿ? ಹಾಗೆ ಮಾಡಿದರೆ ಗೆಜೆಟ್‌ನಲ್ಲಿ ಇರೋದು ವಾಪಸ್ ಹೋಗುತ್ತಾ? ಅದು ಹಾಗೆಯೇ ಮುಂದುವರೆದಿರುತ್ತದೆ ಎಂಬುದು ಲಾಯರ್ ಆಗಿ ನಿಮಗೆ ಗೊತ್ತಿರಬೇಕಲ್ಲಾ? ನೀವು ಸಂಡೇ ಲಾಯರ್ ಆಗಿರೋದ್ರಿಂದ ನಿಮಗೆ ಇದು ಗೊತ್ತಿರಲಿಕ್ಕಿಲ್ಲ ಬಿಡಿ ಎಂದು ಟಾಂಗ್ ನೀಡಿದರು. ಲಾಯರ್ ಆಗಿರುವ ಸಿದ್ದರಾಮಯ್ಯನವರು ಮುಡಾದಲ್ಲಿ ನಿವೇಶನ ಪಡೆದು, ಅದು ಹಗರಣ ಎಂಬುದು ಗೊತ್ತಾಗುತ್ತಿದ್ದಂತೆ ವಾಪಸ್ ಮಾಡಿದರು. ಹಾಗಾದರೆ ಒಮ್ಮೆ ಕದ್ದ ಮಾಲು ವಾಪಸ್ ಕೊಟ್ಟರೆ ಅದು ತಪ್ಪಲ್ವಾ? ಅದು ಅಪರಾಧವಲ್ವಾ? ಏನ್ರೀ ಸಂಡೇ ಲಾಯರ್ ಎಂದು ಸಿದ್ದರಾಮಯ್ಯ ಅವರಿಗೆ ಹೇಳುತ್ತಿದ್ದಂತೆ ಪತ್ರಕರ್ತರು ಸುಮ್ಮನಾದರು. ಇಷ್ಟಕ್ಕೂ ಸಂಡೇ ಲಾಯರ್ ಅಂದ್ರೆ ಅವರು ಸರಿಯಾಗಿ ಕಾನೂನು ತಿಳಿದುಕೊಂಡಿಲ್ಲ ಎಂದರ್ಥವಂತೆ.

 ಪ್ರೆಸ್‌ಮೀಟಲ್ಲಿ ಕಮಿಷನರ್‌ಗೆ ಟ್ರಾಫಿಕ್‌ ಜಾಂ ಕಾಟ!

ಟ್ರಾಫಿಕ್‌ ಜಾಮ್‌ ಸೇರಿದ್ಹಂಗ ಅದೇನೇ ತೊಂದರೆಗಳು ಕಾಡಿದ್ರು ಅವನ್ನೆಲ್ಲ ಪರಿಹರಿಸೋ ಸಾಮರ್ಥ್ಯ ಪೊಲೀಸರದ್ದು. ಆದರೆ ಪೊಲೀಸರ ಸುದ್ದಿಗೋಷ್ಠಿಯಲ್ಲೇ ಟ್ರಾಫಿಕ್‌ ಜಾಮ್‌ ಆದ್ರೆ ಕ್ಲಿಯರ್‌ ಮಾಡೋರ್ಯಾರು?

ಕಲಬುರಗಿ ಕಮೀಷನ್‌ರೇಟ್‌ ವ್ಯಾಪ್ತಿಯಲ್ಲಿ ಆಗಿದ್ದೇ ಹೀಗೆ. ತಮ್ಮ ವ್ಯಾಪ್ತಿಯಲ್ಲಿನ ಅಪರಾಧ ಪ್ರಕರಣಗಳ ಯಶಸ್ವಿ ತನಿಖೆ ವಿಚಾರಗಳನ್ನ ಹಂಚಿಕೊಳ್ಳಲು ಕಲಬುರಗಿ ಪೊಲೀಸ್‌ ಕಮೀಷನರ್‌ ಡಾ.ಶರಣಪ್ಪ ಢಗೆ ಸಾಹೇಬರು ಮೊನ್ನೆ ಸುದ್ದಿಗೋಷ್ಠಿ ಕರೆದಿದ್ರು. ಅಲ್ಲಿ ಪೊಲೀಸರ ಸಾಧನೆಯ ಬಗ್ಗೆ ಹೇಳಿ ಇನ್ನೇನು ಸುದ್ದಿಗೋಷ್ಠಿ ಮುಗಿಸೋಣ ಎಂದವರಿಗೆ ನಗರ ಸಂಚಾರ ಸಮಸ್ಯೆಗಳು ಸವಾಲು ರೂಪದಲ್ಲಿ ಎದುರಾದವು. ರೆಡಿ.. ಸ್ಟಡಿ.. ಗೋ... ಅಂತ ಹೊರಟ್ಹೋಗೋ ಮೂಡ್‌ನಲ್ಲಿದ್ದ ಕಮೀಷನರ್‌ ಸಾಹೇಬರಿಗೆ ಸುದ್ದಿ ಸೂರಪ್ಪರು ತಮ್ಮ ಪ್ರಶ್ನೆಗಳಿಂದಲೇ ರೆಡ್‌ ಸಿಗ್ನಲ್‌ ಕೊಟ್ಟು ಸುದ್ದಿಗೋಷ್ಠಿಯಲ್ಲೇ ಕೂಡಿ ಹಾಕಿದ್ರನ್ನಿ. ಹೀಂಗ ಮುಂದುವರಿದ ಸುದ್ದಿಗೋಷ್ಠಿಯನ್ನ ನಗರದ ಅಡ್ಡಾದಿಡ್ಡಿ ಟ್ರಾಫಿಕ್‌ ನುಂಗಿ ನೀರು ಕುಡಿದುಬಿಡ್ತು!

ಸಂಚಾರ ಸಮಸ್ಯೆಗಳನ್ನೆಲ್ಲ ಎಳೆಎಳೆಯಾಗಿ ಬಿಡಿಸಿಟ್ಟ ಸುದ್ದಿಸೂರಪ್ಪರು ಇದಕ್ಯಾವಾಗ ಪರಿಹಾರ ಕೊಡ್ತೀರಿ ಸಾಹೇಬ್ರ? ನೀವು ನಮ್ಮವರಂತ (ಕಮೀಷನರ್‌ ಶರಣಪ್ಪ ಆಳಂದದವರು) ಸಲುಗೆಯಿಂದ ನಿಮ್ಗ ಸಂಚಾರ ಸಮಸ್ಯೆ ವಿಶ್ವರೂಪ ದರುಶನ ಮಾಡಸ್ತಿದ್ದೀವಿ. ಲಾಗಾಯ್ತಿನಿಂದಿರೋ ಈ ಸಮಸ್ಯೆಗೆ ಪರಿಹಾರ ಸಿಗ್ತಿಲ್ಲ. ನೀವಾದ್ರೂ ಸಂಚಾರದಲ್ಲಿ ಶಿಸ್ತು ತರಲು ಮುಂದಾಗ್ರಿ ಎಂದು ಆಗ್ರಹಿಸಿದ್ರು. ಸಿಟಿಯೊಳಗ ಟೆರಿಫಿಕ್‌ ಟ್ರಾಫಿಕ್‌, ಅನ್‌ಕಂಟ್ರೋಲೇಬಲ್‌... ಅದಕ್ಕ ಯಾವಾಗ ಮೂಗ್ದಾರ ಹಾಕ್ತೀರಿ? ಎಂದು ಪತ್ರಕರ್ತರು ತಮಗಾದ ಕೆಟ್ಟ ಅನುಭವಗಳನ್ನು ಒಬ್ಬೊಬ್ರೇ ಪಟ್ಟಿ ಮಾಡ್ತಾ ಸಂಚಾರ ಸಮಸ್ಯೆಯ ಪಟಾಕಿಗೆ ಪ್ರಶ್ನೆ ರೂಪದಲ್ಲಿ ಕಡ್ಡಿ ಗೀರಿದ್ದೇ ತಡ ಹಂಗೇ ಪಟಪಟಾಂತ ಸದ್ದು ಮಾಡ್ತಾ ಪ್ರಶ್ನೆಗಳ ಸುರಿಮಳೆನೇ ಆಯ್ತು.

ಸುದ್ದಿ ಸೂರಪ್ಪರೆಲ್ಲಾರೂ ಹೀಂಗ ಸಂಚಾರ ಸಮಸ್ಯೆ ಮುಂದಿಟ್ಕೊಂಡು ಸವಾಲ್‌- ಜವಾಬ್‌ಗೆ ಶುರುವಿಟ್ಟಾಗ ಕಮೀಷನರ್‌ ಸಾಹೇಬರು ಸುಸ್ತೋ ಸುಸ್ತು. ಥೇಟ್‌ ಕಲಬುರಗಿ ಅಡ್ಡಾದಿಡ್ಡಿ ಟ್ರಾಫಿಕ್‌ನಂಗೇ ಪ್ರೆಸ್‌ಮೀಟ್‌ನಲ್ಲೂ ಏಕಾಏಕಿ ವಿಷಯ ಡೈವರ್ಟ್‌ ಆಗಿತ್ತು! ಸಮಸ್ಯೆಯ ಗಂಭೀರತೆ ಅರಿತ ಸಾಹೇಬರು, ಅಪರಾಧಿಗಳ ಪತ್ತೆ, ತನಿಖೆ ಅದೆಷ್ಟೇ ಮಾಡಿದ್ರೂ ಪೋಲೀಸ್ನವ್ರಿಗೆ ಬೈಲಿಕ್ಕೆ ಟ್ರಾಫಿಕ್‌ ವಿಷಯ ಒಂದು ಸಾಕ್‌ ನೋಡ್ರಿ, ಯಾವ ಕಾಲಕ್ಕೂ ಈ ವಿಷಯದಾಗ ಬೈಗುಳದಿಂದ ಪೊಲೀಸ್ರಿಗೆ ತಪ್ಪಿಸ್ಕೊಳ್ಳಲಿಕ್ಕೆ ಆಗೋದಿಲ್ಲ... ಎಂದು ಹೇಳ್ತಾ ಕಮೀಷನರ್‌ ಹಾರಿಸಿದ ನಗೆಚಟಾಕಿಗೆ ಅದುವರೆಗೂ ಟ್ರಾಫಿಕ್‌ ವಿಚಾರದಲ್ಲಿ ರಾಂಗ್‌ ಆಗಿದ್ದ ಪತ್ರಕರ್ತರು ಗೊಳ್ಳೆಂದು ನಕ್ಕುಬಿಟ್ರು.

ಸಂಚಾರ ಸಮಸ್ಯೆ ನೀಗಿಸೋದಕ್ಕ ಕೈಜೋಡಿಸುವಂತೆ ಸುದ್ದಿ ಸೂರಪ್ಪರಿಗೆ ಆಹ್ವಾನಿಸಿದ ಕಮೀಷನರ್‌ ಶರಣಪ್ಪ ಅವರು, ಸಮಸ್ಯೆ ತುಂಬಿರೋ ಪ್ರಶ್ನೆಗಳಿರಲಿ, ಅದಕ್ಕೊಂದು ಸಲ್ಯೂಷನ್‌ ಕೂಡಾ ಅಲ್ಲಿರಲಿ ಅಂತ ಹೇಳ್ತಾ ಪ್ರಶ್ನೆಗಳ ಜಾಲದಲ್ಲಿ ಸಿಲುಕಿದ್ದವರು ನಯವಾಗಿ ಜಾರಿಕೊಂಡರು. -ಶಶಿಕಾಂತ ಮೆಂಡೆಗಾರ -ಶೇಷಮೂರ್ತಿ ಅವಧಾನಿ