ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂತರಾಜು ಆಯೋಗವು ಹಲವು ಮಾನದಂಡಗಳನ್ನಿಟ್ಟುಕೊಂಡು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿದೆಯೇ ಹೊರತು, ಯಾವುದೇ ರೀತಿಯ ಜಾತಿಗಣತಿ ಮಾಡಿಲ್ಲ. ಹೀಗಾಗಿ ಕಾಂತರಾಜು ವರದಿಯಲ್ಲಿರುವ ಗೊಂದಲಗಳನ್ನು ಸರ್ಕಾರ ನಿವಾರಿಸುವ ಕೆಲಸ ಮೊದಲು ಮಾಡಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕೋರಿದರು.ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಸುರೇಶ್, ಕಾಂತರಾಜು ಆಯೋಗದ ವರದಿ ಸಿದ್ಧವಾಗಿ 10 ವರ್ಷಗಳಾಗಿರುವುದರಿಂದ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದೆ. ಅದರಲ್ಲೂ ನಗರ ಪ್ರದೇಶದ ಜನರ ಮಾಹಿತಿ ವರದಿಯಲ್ಲಿ ಸಮರ್ಪಕವಾಗಿ ಸೆರಿಸಲಾಗಿದೆಯೇ? ಇಲ್ಲವೇ ಎಂಬ ಗೊಂದಲಗಳಿವೆ. ರಾಜ್ಯದಲ್ಲಿ 1.34 ಕೋಟಿ ಕುಟುಂಬಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ಕಾಂತರಾಜು ಆಯೋಗ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಿತ್ತು. ಆದರೆ, ವರದಿಗೆ ಸಂಬಂಧಿಸಿದಂತೆ ಜಾತಿ ವಿಚಾರ ಚರ್ಚೆಯಾಗುತ್ತಿದೆ. ಜಾತಿಗಳ ಸಂಖ್ಯೆಗಿಂತ ಪ್ರಮುಖವಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆಯಾಗಬೇಕು ಎಂದರು.
ಜಾತಿಗಣತಿ ವಿಚಾರವಾಗಿ ಎದ್ದಿರುವ ಅನುಮಾನಗಳನ್ನು ರಾಜ್ಯ ಸರ್ಕಾರ ಪರಿಹರಿಸಬೇಕು. ಕಾಂತರಾಜು ಆಯೋಗವು ಜಾತಿಗಣತಿಯನ್ನು ಮಾಡಿಲ್ಲ. ಬದಲಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿದೆ. ಅದನ್ನೇ ಜಯಪ್ರಕಾಶ್ ಹೆಗ್ಡೆ ಸರ್ಕಾರದ ಮುಂದಿಟ್ಟಿದ್ದಾರೆ ಎಂದು ಹೇಳಿದರು.ವರದಿ ಕುರಿತು ಚರ್ಚಿಸಲು ವಿಧಾನಮಂಡಲ ಅಧಿವೇಶನ ಕರೆಯಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್, ಅದೂ ಕೂಡ ಒಂದು ಭಾಗವೇ. ನಾನು ಅದನ್ನು ಅಲ್ಲಗಳೆಯುವುದಿಲ್ಲ. ಈ ರೀತಿಯ ದೊಡ್ಡ ತೀರ್ಮಾನ ತೆಗೆದುಕೊಳ್ಳುವಾಗ ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ತೆಲಂಗಾಣದಲ್ಲೂ ಗಣತಿ ಮಾಡಿದಾಗ ಅದನ್ನು ಅಧಿವೇಶನದಲ್ಲಿ ಮಂಡನೆ ಮಾಡಿ ಚರ್ಚಿಸಲಾಗಿತ್ತು. ಹೀಗಾಗಿ ರಾಜ್ಯದಲ್ಲೂ ವಿಶೇಷ ಅಧಿವೇಶ ಕರೆದು ಚರ್ಚೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಸಲಹೆ ನೀಡಿದರು.