10 ಹೊಸ ಮುಖಗಳ, 17 ಸ್ಪರ್ಧಿಗಳ ಕೈ ಪಟ್ಟಿ

| Published : Mar 22 2024, 02:15 AM IST / Updated: Mar 22 2024, 07:59 AM IST

Congress

ಸಾರಾಂಶ

ಲೋಕಸಭೆ ಚುನಾವಣೆಯ ಭಾಗವಾಗಿ ಕರ್ನಾಟಕ ಕಾಂಗ್ರೆಸ್‌ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 17 ಸ್ಪರ್ಧಿಗಳ ಹೆಸರನ್ನು ಬಿಡುಗಡೆ ಮಾಡಿದೆ,

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಗುರುವಾರ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಿದ್ದು, ನಿರೀಕ್ಷೆಯಂತೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ಆರು ಮಂದಿ ಸಚಿವರ ಕುಟುಂಬಸ್ಥರು, ದಾಖಲೆಯ ಐವರು ಮಹಿಳೆಯರು (ಮೊದಲ ಪಟ್ಟಿಯ ಗೀತಾ ಶಿವರಾಜಕುಮಾರ್‌ ಸೇರಿ ಒಟ್ಟು ಆರು ಮಂದಿ ಮಹಿಳೆಯರು) ಸೇರಿದಂತೆ 17 ಮಂದಿಗೆ ಟಿಕೆಟ್‌ ಘೋಷಿಸಲಾಗಿದೆ.

ಕಾಂಗ್ರೆಸ್‌ ಪಕ್ಷವು ಈಗಾಗಲೇ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಇದೀಗ 17 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವ ಮೂಲಕ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸಿದಂತಾಗಿದೆ. 

ತೀವ್ರ ಪೈಪೋಟಿಯಿರುವ ನಾಲ್ಕು ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವುದು ಬಾಕಿಯಿದೆ. ಈ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್‌ ಅಂತಿಮಗೊಳಿಸಲು ಶುಕ್ರವಾರ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಬರಲಿದ್ದು, ಈ ಸಭೆಯಲ್ಲಿ ಬಾಕಿ ಇರುವ ಚಿಕ್ಕಬಳ್ಳಾಪುರ, ಬಳ್ಳಾರಿ, ಚಾಮರಾಜನಗರ ಮತ್ತು ಕೋಲಾರ ಕ್ಷೇತ್ರಗಳ ಟಿಕೆಟ್‌ ಕೂಡ ಅಂತಿಮಗೊಂಡು ಒಂದೆರಡು ದಿನಗಳಲ್ಲಿ ಪ್ರಕಟಗೊಳ್ಳಲಿದೆ.

6 ಕ್ಷೇತ್ರಗಳು ಸಚಿವರ ಕುಟುಂಬಕ್ಕೆ: ಗುರುವಾರ ಪ್ರಕಟಗೊಂಡಿರುವ 17 ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳು ಸಚಿವರ ಕುಟುಂಬಸ್ಥರ ಪಾಲಾಗಿದೆ. ಅದರಲ್ಲೂ ಸಚಿವರ ಪುತ್ರಿಯರು ಟಿಕೆಟ್‌ ಗಿಟ್ಟಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ.

ಬೆಂಗಳೂರು ದಕ್ಷಿಣದಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ, ಬಾಗಲಕೋಟೆಯಿಂದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಶಿವಾನಂದ ಪಾಟೀಲ್, ಚಿಕ್ಕೋಡಿಯಿಂದ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಟಿಕೆಟ್‌ ಗಿಟ್ಟಿಸಿದ್ದರೆ, ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್‌ ಹಾಗೂ ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಟಿಕೆಟ್ ಪಡೆದಿದ್ದಾರೆ. ಇನ್ನು ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ದಾವಣಗೆರೆ ಕ್ಷೇತ್ರದ ಟಿಕೆಟ್‌ ನೀಡಿದೆ.

ಮಹಿಳಾ ಟಿಕೆಟ್ ದಾಖಲೆ: ಕುತೂಹಲಕಾರಿ ಸಂಗತಿಯೆಂದರೆ ಗುರುವಾರ ಪ್ರಕಟಗೊಂಡ ಪಟ್ಟಿಯಲ್ಲಿ ಐವರು (ಬೆಂ. ದಕ್ಷಿಣ-ಸೌಮ್ಯರೆಡ್ಡಿ, ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್, ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ, ಬಾಗಲಕೋಟೆ- ಸಂಯುಕ್ತಾ ಶಿವಾನಂದ ಪಾಟೀಲ್, ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ) ಟಿಕೆಟ್‌ ಪಡೆದಿದ್ದಾರೆ. 

ಮೊದಲ ಪಟ್ಟಿಯಲ್ಲಿ (ಶಿವಮೊಗ್ಗಕ್ಕೆ ಗೀತಾ ಶಿವರಾಜಕುಮಾರ್‌) ಸೇರಿ ಒಟ್ಟು ಆರು ಮಂದಿ ಟಿಕೆಟ್‌ ನೀಡಿದಂತಾಗಿದೆ. ತನ್ಮೂಲಕ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ ಇಷ್ಟು ದೊಡ್ಡ ಮಟ್ಟದಲ್ಲಿ ಮಹಿಳೆಯರಿಗೆ ಟಿಕೆಟ್‌ ಕೊಟ್ಟಿದ್ದು ದಾಖಲೆಯಾಗುತ್ತದೆ.

ಯುವಕರು ಹಾಗೂ ಹೊಸ ಮುಖಗಳಿಗೆ ಆದ್ಯತೆ: ಮಹಿಳೆಯರ ಜತೆಗೆ ಯುವಕರಿಗೆ ಈ ಬಾರಿ ಆದ್ಯತೆ ನೀಡಲಾಗಿದೆ. ಎರಡನೇ ಪಟ್ಟಿಯಲ್ಲಿ ಐವರು ಯುವ ರಕ್ತಕ್ಕೆ ಅವಕಾಶ ನೀಡಲಾಗಿದೆ (ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ, ಬಾಗಲಕೋಟೆ- ಸಂಯುಕ್ತಾ ಶಿವಾನಂದ ಪಾಟೀಲ್, ಬೀದರ್- ಸಾಗರ್ ಖಂಡ್ರೆ, ಬೆಂಗಳೂರು ದಕ್ಷಿಣ-ಸೌಮ್ಯರೆಡ್ಡಿ). ಈ ಪೈಕಿ ಸೌಮ್ಯ ರೆಡ್ಡಿ ಅವರನ್ನು ಹೊರತು ಪಡಿಸಿ ಉಳಿದ ನಾಲ್ಕು ಮಂದಿ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಇವರಲ್ಲದೆ ಇನ್ನೂ ಆರು ಮಂದಿ (ಕಲಬುರಗಿ-ರಾಧಾಕೃಷ್ಣ, ರಾಯಚೂರು-ಜಿ.ಕುಮಾರನಾಯ್ಕ್, ದಾವಣಗೆರೆ-ಪ್ರಭಾ ಮಲ್ಲಿಕಾರ್ಜುನ್, ದಕ್ಷಿಣ ಕನ್ನಡ-ಪದ್ಮರಾಜ್, ಮೈಸೂರು- ಲಕ್ಷ್ಮಣ್, ಬೆಂ.ಕೇಂದ್ರ-ಮನ್ಸೂರ್ ಅಲಿಖಾನ್) ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. 

ತನ್ಮೂಲಕ 10 ಮಂದಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ಇದಲ್ಲದೆ, ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ್ದ ಜಯಪ್ರಕಾಶ್‌ ಹೆಗ್ಡೆ ಅವರ ಹೆಸರು ಉಡುಪಿ- ಚಿಕ್ಕಮಗಳೂರಿಗೆ ಅಖೈರುಗೊಂಡಿದೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆರಾಜ್ಯ ನೀತಿ ಹಾಗೂ ಯೋಜನಾ ಆಯೋಗ ಉಪಾಧ್ಯಕ್ಷ ಪ್ರೊ। ರಾಜೀವ್‌ ಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ.

ಜಾತಿ ಲೆಕ್ಕಾಚಾರ: ಕಾಂಗ್ರೆಸ್‌ ತನ್ನ ಎರಡನೇ ಪಟ್ಟಿಯಲ್ಲಿ ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ನೀಡಿದ್ದು, ನಾಲ್ಕು ಮಂದಿ (ಬೀದರ್-ಸಾಗರ ಖಂಡ್ರೆ, ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ, ಬಾಗಲಕೋಟೆ- ಸಂಯುಕ್ತ ಪಾಟೀಲ್, ಬೆಳಗಾವಿ-ಮೃಣಾಲ್ ಹೆಬ್ಬಾಳ್ಕರ್,) ರೆಡ್ಡಿ ಮೂವರು ಒಕ್ಕಲಿಗರು (ಬೆಂ.ಉತ್ತರ-ರಾಜೀವ್ ಗೌಡ, ಮೈಸೂರು- ಎಂ. ಲಕ್ಷ್ಮಣ್, ಬೆಂ. ದಕ್ಷಿಣ- ಸೌಮ್ಯ ರೆಡ್ಡಿ).

ಇಬ್ಬರು ಎಸ್‌ಟಿ (ರಾಯಚೂರು -ಜಿ. ಕುಮಾರನಾಯ್ಕ್, ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ), ಇಬ್ಬರು ದಲಿತರು (ಕಲಬುರಗಿ - ರಾಧಾಕೃಷ್ಣ, ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ), ಒಬ್ಬರು ಅಲ್ಪಸಂಖ್ಯಾತರು (ಬೆಂ. ಕೇಂದ್ರ-ಮನ್ಸೂರ್ ಅಲಿಖಾನ್), ಹಿಂದುಳಿದವರು ಒಟ್ಟು ಐವರು. 

ಇದರಲ್ಲಿ ಕುರುಬರು-2 (ಧಾರವಾಡ-ವಿನೋದ್ ಅಸೂಟಿ, ಕೊಪ್ಪಳ -ರಾಜಶೇಖರ್ ಹಿಟ್ನಾಳ್) ಒಬ್ಬರು ಮರಾಠ (ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್), ಒಬ್ಬರು ಬಿಲ್ಲವ (ದಕ್ಷಿಣ ಕನ್ನಡ- ಪದ್ಮರಾಜ್), ಒಬ್ಬರು ಬಂಟ (ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ).

ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ

 1. ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ 
 2. ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ
 3. ಬೆಂಗಳೂರು ಸೆಂಟ್ರಲ್- ಮನ್ಸೂರ್ ಆಲಿಖಾನ್
 4. ಮೈಸೂರು- ಎಂ. ಲಕ್ಮಣ್
 5. ರಾಯಚೂರು- ಜಿ.ಕುಮಾರ ನಾಯ್ಕ್‌
 6. ಕೊಪ್ಪಳ- ಕೆ.ರಾಜಶೇಖರ ಬಸವರಾಜ ಹಿಟ್ನಾಳ್
 7. ಬೀದರ್- ಸಾಗರ್ ಖಂಡ್ರೆ
 8. ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್ 
 9. ಉತ್ತರ ಕನ್ನಡ- ಡಾ.ಅಂಜಲಿ ನಿಂಬಾಳ್ಕರ್ 
 10. ದಕ್ಷಿಣ ಕನ್ನಡ- ಪದ್ಮರಾಜ್
 11. ಚಿತ್ರದುರ್ಗ- ಬಿ.ಎನ್.ಚಂದ್ರಪ್ಪ
 12. ಬೆಂಗಳೂರು ಉತ್ತರ- ಪ್ರೊ.ಎಂ.ವಿ.ರಾಜೀವ್ ಗೌಡ
 13. ಧಾರವಾಡ- ವಿನೋದ ಅಸೂಟಿ
 14. ಬಾಗಲಕೋಟೆ- ಸಂಯುಕ್ತ ಎಸ್. ಪಾಟೀಲ್
 15. ಉಡುಪಿ/ಚಿಕ್ಕಮಗಳೂರು- ಡಾ.ಜಯಪ್ರಕಾಶ್ ಹೆಗಡೆ
 16. ಬೆಳಗಾವಿ- ಮೃಣಾಲ್ ರವೀಂದ್ರ ಹೆಬ್ಬಾಳ್ಕರ್
 17. ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ

ಬಾಕಿ ಉಳಿದ ಕ್ಷೇತ್ರಗಳು- ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ಚಾಮರಾಜನಗರ