ಸಾರಾಂಶ
ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿಯನ್ನು ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಕುಮಾರಸ್ವಾಮಿ ಅವರೊಂದಿಗೆ ಪುತ್ರ ಹಾಗೂ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೂಡ ತೆರಳುವ ನಿರೀಕ್ಷೆಯಿದೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರೂ ತೆರಳುವ ಬಗ್ಗೆ ಇನ್ನೂ ಖಚಿತವಾಗಿಲ್ಲ.
ಜೆಡಿಎಸ್ ಈಗ ಎನ್‌ಡಿಎ ಪಾಲುದಾರ ಪಕ್ಷವಾಗಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಿಂದ ಐದು ಕ್ಷೇತ್ರಗಳು ತಮ್ಮ ಪಕ್ಷಕ್ಕೆ ಸಿಗಬಹುದು ಎಂಬ ಲೆಕ್ಕಾಚಾರ ಹೊಂದಿದೆ.
ಈ ಪೈಕಿ ಹಾಸನ, ಮಂಡ್ಯ ಕ್ಷೇತ್ರಗಳು ಲಭಿಸುವುದು ಬಹುತೇಕ ನಿಚ್ಚಳವಾಗಿದೆ. ಇನ್ನುಳಿದಂತೆ ಮೈಸೂರು, ತುಮಕೂರು, ಕೋಲಾರ, ರಾಯಚೂರು ಕ್ಷೇತ್ರಗಳ ಬಗ್ಗೆಯೂ ಜೆಡಿಎಸ್ ಒಲವು ಹೊಂದಿದೆ.
ಈ ಹಿಂದೆ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆದರೆ, ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.
ಬುಧವಾರದ ದೆಹಲಿ ಭೇಟಿ ಬಳಿಕ ಕುಟುಂಬ ಸಮೇತರಾಗಿ ತೆರಳಿ ಅಯೋಧ್ಯ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕುಮಾರಸ್ವಾಮಿ ಕುಟುಂಬಕ್ಕೆ ಈಗಾಗಲೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದೆ.
ಅಂತೆಯೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಹ ಅಯೋಧ್ಯೆಗೆ ತೆರಳಲಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಅಯೋಧ್ಯೆಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.