ವಿಧಾನಸಭೆ : ಅಭಿವೃದ್ಧಿ ವಿಚಾರದಲ್ಲಿ ಕೇಂದ್ರಕ್ಕಿಂತ ರಾಜ್ಯವೇ ಉತ್ತಮವಾಗಿದೆ. ಕೇಂದ್ರದ ವಿತ್ತೀಯ ಕೊರತೆ ಶೇ.4.3ರಷ್ಟಾಗಿದ್ದರೆ, ರಾಜ್ಯದ ವಿತ್ತೀಯ ಕೊರತೆ 2026-27ನೇ ಸಾಲಿನಲ್ಲೂ ಶೇ.2.95 ರಷ್ಟೇ ಇರಲಿದೆ. ಇನ್ನು ಕೇಂದ್ರದ ಬಜೆಟ್‌ ಗಾತ್ರ ಶೇ.5.6ರಷ್ಟು ಹೆಚ್ಚಾಗಿದ್ದರೆ, ರಾಜ್ಯದ ಬಜೆಟ್‌ ಗಾತ್ರ ಕಳೆದ ಸಾಲಿಗಿಂತ ಶೇ.9.4ರಷ್ಟು ಹೆಚ್ಚಾಗಿದೆ. ಕೇಂದ್ರದ ಜಿಡಿಪಿಗಿಂತ ಕರ್ನಾಟಕದ ಜಿಎಸ್‌ಡಿಪಿ ಚೆನ್ನಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಬಜೆಟ್‌ ಅಧಿವೇಶನ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಿಧಾನಸಭೆಯಲ್ಲಿ ನಡೆದ ಬಜೆಟ್‌ ಮೇಲಿನ ಚರ್ಚೆ, ಪ್ರತಿಪಕ್ಷದವರ ಟೀಕೆ, ತಜ್ಞರ ವಿಮರ್ಶೆ ಹಾಗೂ ಸಾರ್ವಜನಿಕ ಅಭಿಪ್ರಾಯಗಳಿಗೆ ಬುಧವಾರ ಅವರು ಸುದೀರ್ಘ ಉತ್ತರ ನೀಡಿ ತಮ್ಮ ಸರ್ಕಾರದ ಸಾಧನೆಯನ್ನು ಸಮರ್ಥಿಸಿಕೊಂಡರು.

ಬಜೆಟ್‌ ಗಾತ್ರದ ಶೇಕಡಾವಾರು ಹೆಚ್ಚಳ, ಜಿಎಸ್‌ಡಿಪಿ ಬೆಳವಣಿಗೆ, ಆರ್ಥಿಕ ಶಿಸ್ತು ಪಾಲನೆ ಸೇರಿ ಬಹುತೇಕ ಎಲ್ಲ ವಿಚಾರಗಳಲ್ಲೂ ಕೇಂದ್ರಕ್ಕಿಂತ ರಾಜ್ಯದವೇ ಬೆಸ್ಟ್‌. ಹೀಗಿರುವಾಗ ಪ್ರತಿಪಕ್ಷದವರು ಟೀಕಿಸಿರುವಂತೆ ನಮ್ಮದು ಖಾಲಿ ಬೊಂಬಿನ ಬಜೆಟ್‌ ಆಗಲು ಸಾಧ್ಯವೇ ಇಲ್ಲ. ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ‘ತುಂಬಿದ ಕೊಡದ’ ಬಜೆಟ್‌ ನಮ್ಮದು ಎಂದು ತಿರುಗೇಟು ನೀಡಿದರು.


ಬಜೆಟ್‌ ಗಾತ್ರ 4.48 ಲಕ್ಷ ಕೋಟಿ:

ರಾಜ್ಯದ 2026-27ನೇ ಸಾಲಿನ ಬಜೆಟ್ ಗಾತ್ರ 4,48,004 ಕೋಟಿ ರು.ಗಳಷ್ಟಾಗಿದೆ. ಕಳೆದ ಸಾಲಿಗಿಂತ(2025-26) 38,455 ಕೋಟಿ ರು.ಗಳಷ್ಟು(ಶೇ.9.4) ಹೆಚ್ಚಾಗಿದೆ. ಅದೇ ಕೇಂದ್ರ ಸರ್ಕಾರದ ಬಜೆಟ್‌ ನೋಡಿದರೆ ಕಳೆದ ಬಾರಿಗಿಂತ ಈ ಬಾರಿ ಶೇ.5.6 ರಷ್ಟು ಮಾತ್ರ ಬೆಳವಣಿಯಾಗಿದೆ. 2025ರಲ್ಲಿ 50.65 ಲಕ್ಷ ಕೋಟಿ ರು. ಬಜೆಟ್ ಮಂಡಿಸಿದ್ದ ಪ್ರಧಾನಿ ಮೋದಿ ಸರ್ಕಾರ ಈ ವರ್ಷ 53.47 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಿದೆ. ಇನ್ನು, 2025-26 ರಲ್ಲಿ ಒಟ್ಟು ದೇಶೀಯ ಉತ್ಪಾದನೆ(ಎಸ್‌ಡಿಪಿ) ಸ್ಥಿರ ಬೆಲೆಗಳಲ್ಲಿ ಶೇ.7.4ರಷ್ಟು ಬೆಳವಣಿಗೆ ದಾಖಲಿಸಿದರೆ, ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ(ಜಿಎಸ್‌ಡಿಪಿ) ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್‌ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿದೆ. ಪ್ರತಿಪಕ್ಷದವರು ಹೇಳುತ್ತಿರುವಂತೆ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟು ಇದ್ದಿದ್ದರೆ ಬಜೆಟ್‌ ಗಾತ್ರ ಇಷ್ಟೊಂದು ದರದಲ್ಲಿ ಹೇಗೆ ಹೆಚ್ಚಾಗುತ್ತಿತ್ತು? ಜಿಎಸ್‌ಡಿಪಿ ಹೇಗೆ ಬೆಳವಣಿಗೆ ಆಗುತ್ತಿತ್ತು ಎಂದು ಪ್ರಶ್ನಿಸಿದರು.

ವಿಸ್ತೀಯ ಶಿಸ್ತು ಹಾಳು ಮಾಡಿಲ್ಲ:

ಇದೆಲ್ಲದರ ಮಧ್ಯೆ ನಾವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳಲ್ಲಿ ಎರಡನ್ನು ಪೂರೈಸಿದ್ದೇವೆ. ಮಾನದಂಡಗಳ ಪ್ರಕಾರ ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇ.3 ಒಳಗಿರಬೇಕು. ನಮ್ಮ ರಾಜ್ಯದ ವಿತ್ತೀಯ ಕೊರತೆ 2026-27ನೇ ಸಾಲಿನಲ್ಲೂ ಶೇ.2.95 ರಷ್ಟೇ ಇರಲಿದೆ. ಅದೇ ರೀತಿ ಒಟ್ಟು ಸಾಲದ ಪ್ರಮಾಣ ಕೂಡ ಜಿಎಸ್‌ಡಿಪಿಯ ಶೇ.25ರ ಒಳಗಿರಬೇಕು. ಆ ಪ್ರಕಾರ ಈಗಿನ ಸಾಲದ ಪ್ರಮಾಣವೂ ಶೇ.24.94 ರಷ್ಟಿದೆ. 1994-95ರಲ್ಲಿ ಹಣಕಾಸು ಸಚಿವನಾದಾಗಿನಿಂದ ಈವರೆಗೆ ಮಂಡಿಸಿರುವ 17 ಬಜೆಟ್‌ನಲ್ಲೂ ಸಾಧ್ಯವಾದಷ್ಟು ಮಟ್ಟಿಗೆ ವಿತ್ತೀಯ ಕೊರತೆ ಮಾನದಂಡದ ಒಳಗೇ ಇರುವಂತೆ ನೋಡಿಕೊಂಡಿದ್ದೇನೆ.

ಆದರೆ, ಈ ಬಾರಿಯೂ ಸೇರಿ ಕಳೆದ ನಾಲ್ಕು ಬಜೆಟ್‌ನಲ್ಲಿ ರಾಜಸ್ವ ಉಳಿತಾಯ ಮಾಡಲು ಆಗಿಲ್ಲ. ಇದಕ್ಕೆ ಕಾರಣ ನಮ್ಮ ಸರ್ಕಾರವಲ್ಲ. ಹಿಂದಿನ ಸರ್ಕಾರಗಳಲ್ಲಿ ಆರ್ಥಿಕ ಶಿಸ್ತು ಪಾಲಿಸದಿರುವುದು, ಅನುದಾನ ಇಲ್ಲದಿದ್ದರೂ ಲಕ್ಷಾಂತರ ಕೋಟಿ ರು. ಯೋಜನೆಗಳಿಗೆ ಅನುಮೋದನೆ ನೀಡಿರುವುದು. ಆ ಯೋಜನೆಗಳಿಗೆ ನಾವು ಈಗ ಹಣ ನೀಡುತ್ತಿದ್ದೇವೆ ಎಂದು ಆರೋಪಿಸಿದರು.

ಆದರೆ, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ವಿತ್ತೀಯ ಕೊರತೆ 16,91,769 ಕೋಟಿ ರು.ಗಳಾಗಿದೆ. 16ನೇ ಹಣಕಾಸು ಆಯೋಗದ ಮಾರ್ಗಸೂಚಿ ಪ್ರಕಾರ ದೇಶದ ವಿತ್ತೀಯ ಕೊರತೆ ದೇಶದ ಜಿಡಿಪಿಯ ಶೇ.3 ಮೀರಬಾರದು. ಆದರೆ, ಇದು ಶೇ.4.3ರಷ್ಟಾಗಿದೆ. ಅದೇ ರೀತಿ ಸಾಲದ ಪ್ರಮಾಣ ದೇಶದ ಜಿಡಿಪಿಯ ಶೇ.25ರೊಳಗಿರಬೇಕು. ಸ್ವಾತಂತ್ರ್ಯ ಬಂದಾಗಿನಿಂದ 2014ರ ವರೆಗೆ ದೇಶದ ಸಾಲ ಸುಮಾರು 53 ಲಕ್ಷ ಕೋಟಿ ರು.ಗಳಷ್ಟಿತ್ತು. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲೇ ಇದು 200 ಲಕ್ಷ ಕೋಟಿ ರು. ದಾಟಿದೆ. ಇವರ 11 ವರ್ಷಗಳ ಆಡಳಿತದಲ್ಲೇ 165 ಕೋಟಿ ರು.ನಷ್ಟು ಸಾಲ ಮಾಡಿದ್ದಾರೆ ಎಂದರು.

ಈ ಬಾರಿಯೇ 16.96 ಲಕ್ಷ ಕೋಟಿ ರು. ಸಾಲ ಮಾಡುತ್ತಿರುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹೀಗಾಗಿ ರಾಜ್ಯದ ಬಜೆಟ್‌ ಕೇಂದ್ರದ ಬಜೆಟ್‌ಗೆ ಹೋಲಿಸಿದರೆ ಶೇಕಡಾವಾರು ಗಾತ್ರ, ಆರ್ಥಿಕ ಬೆಳವಣಿಗೆ, ಆರ್ಥಿಕ ಶಿಸ್ತು ಪಾಲನೆ ಎಲ್ಲದರಲ್ಲೂ ಉತ್ತಮವಾಗಿಯೇ ಇದೆ ಎಂದು ಅಂಕಿ-ಅಂಶಗಳ ಸಮೇತ ಸಮರ್ಥಿಸಿಕೊಂಡರು. ಅಲ್ಲದೆ, ನೆರೆಯ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಆಂಧ್ರ, ತೆಲಂಗಾಣ ಸೇರಿ ದಕ್ಷಿಣ ಭಾರತದ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ನಮ್ಮ ವಿತ್ತೀಯ ಕೊರತೆ ಪ್ರಮಾಣ ನಿಗದಿತ ಮಟ್ಟದ ಒಳಗೇ ಇದೆ ಎಂದು ತಿಳಿಸಿದರು.

ಆಯವ್ಯಯ ಅಂದಾಜಿಗೆ ಹೋಲಿಸಿದರೆ ಪಕ್ಕದ ರಾಜ್ಯಗಳ ಸ್ವಂತ ರಾಜಸ್ವ ಸಂಗ್ರಹಣೆ ವಾಸ್ತವ/ಪರಿಷ್ಕೃತ ಸಂಗ್ರಹಣೆಯಲ್ಲಿ ಕಡಿಮೆ ಆಗಿದೆ. ಇದು ಕರ್ನಾಟಕ ರಾಜ್ಯದ್ದೊಂದೇ ಸಮಸ್ಯೆಯಲ್ಲ. ಕೇಂದ್ರ ಸರ್ಕಾರದ ಅಪಕ್ವ ಆರ್ಥಿಕ ನೀತಿಗಳಿಂದ ಉಂಟಾಗುತ್ತಿರುವ ಸಮಸ್ಯೆಯಾಗಿದೆ. ರಾಜಸ್ವ ಕೊರತೆ ಸಮಸ್ಯೆ 3-4 ಕಾರಣಗಳಿಂದ ಉಂಟಾಗಿದೆ. 15ನೇ ಹಣಕಾಸು ಆಯೋಗವು ಕಡಿಮೆ ಹಣ ಹಂಚಿಕೆ ಮಾಡಿತು, ಆಯೋಗವು ಶಿಫಾರಸು ಮಾಡಿದ 11,600 ಕೋಟಿ ರು. ಅನುದಾನಗಳನ್ನು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಡದೆ ವಂಚಿಸಿತು.

ಜಿಎಸ್‌ಟಿ ಪರಿಹಾರ ನಿಲ್ಲಿಸಲಾಯಿತು, ಜಿಎಸ್‌ಟಿ ದರಗಳ ಪರಿಷ್ಕರಣೆ, ಜೆಜೆಎಂ ಮುಂತಾದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಕೊಡದೆ ಅನ್ಯಾಯ ಮಾಡಿದ ಕಾರಣ ರಾಜಸ್ವ ಕೊರತೆ ಸಮಸ್ಯೆ ಉದ್ಭವಿಸಿತು. ಆದರೂ, ನಮ್ಮ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೂ ನಮ್ಮ ಸ್ವಂತ ರಾಜಸ್ವ ಸಂಗ್ರಹ ಉತ್ತಮವಾಗಿದೆ ಎಂದು ಸಿಎಂ ಹೇಳಿದರು.

ವಿತ್ತೀಯ ಕೊರತೆ ಹೊಸತಲ್ಲ:

ನಾನು 2000ನೇ ಇಸವಿಯಿಂದಲೂ ರಾಜ್ಯದ ಎಲ್ಲ ಬಜೆಟ್‌ಗಳನ್ನು ನೋಡಿದ್ದೇನೆ. ಎಲ್ಲ ಬಜೆಟ್‌ಗಳಲ್ಲೂ ವಿತ್ತೀಯ ಕೊರತೆ ಇದ್ದೇ ಇತ್ತು. ನಿಮ್ಮ ಅವಧಿಯ ನಾಲ್ಕು ವರ್ಷಗಳ ಅವಧಿಯಲ್ಲೂ ವಿತ್ತೀಯ ಕೊರತೆ ಇತ್ತು. ಜಿಎಸ್ಟಿ ಪರಿಹಾರ ಒಟ್ಟಿಗೆ ಬಿಡುಗಡೆ ಕಾರಣ ಮಿಗತೆ ಆಯಿತು. ಈ ಯಾವ ವಿಚಾರಗಳೂ ಗೊತ್ತಿಲ್ಲದೆ ವಿರೋಧ ಪಕ್ಷದ ಸದಸ್ಯರು ಮಾತನಾಡುತ್ತಾರೆ ಎಂದರು.

ನಮ್ಮದು ತುಂಬಿದ ಕೊಡದ ಬಜೆಟ್‌ ಎನ್ನುವುದಕ್ಕೆ ರಾಜ್ಯ ಹಾಗೂ ರಾಷ್ಟ್ರದ ಪ್ರಮುಖ ಪತ್ರಿಕೆಗಳ ಸಂಪಾದಕೀಯಗಳಲ್ಲಿ ಹಾಗೂ ಆರ್ಥಿಕ ತಜ್ಞರ ಲೇಖಲಗಳಲ್ಲಿ ಬಜೆಟ್‌ ಕುರಿತು ವ್ಯಕ್ತವಾಗಿರುವ ಅಭಿಪ್ರಾಯಗಳೇ ಸಾಕ್ಷಿ. ಎಲ್ಲ ಸಮುದಾಯಗಳನ್ನೂ ತಲುಪುವ, ರಾಜ್ಯದ ಸುಸ್ಥಿರ ಮತ್ತು ಸಶಕ್ತ 11 ಜಿ.ಮಾದರಿಯ ಬಜೆಟ್‌, ನೀರಾವರಿ ಮತ್ತು ಮೂಲಸೌಕರ್ಯಕ್ಕೆ ಒತ್ತು, ಜನಪ್ರಿಯತೆ ಮತ್ತು ವಾಸ್ತವ ಬಜೆಟ್‌, ರಾಜ್ಯದ ಬೊಕ್ಕಸವನ್ನು ಸುಸ್ಥಿರವಾಗಿಡುವ ದೂರದೃಷ್ಟಿಯ ಬಜೆಟ್‌, ಹೂಡಿಕೆ ಹಾಗೂ ನವೋದ್ಯಮಗಳಿಗೆ ನೆರವಾಗುವ ಯೋಜನೆಗಳ ಬಜೆಟ್‌, ಹೀಗೆ ಅನೇಕ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂದು ಪ್ರಮುಖ ಪತ್ರಿಕೆಗಳ ಸಂಪಾದಕೀಯ, ತಜ್ಞರ ಅಭಿಪ್ರಾಯಗಳನ್ನು ಸದನದಲ್ಲಿ ಓದಿ ಹೇಳಿದರು.

ಕೇಂದ್ರದಲ್ಲಿ ಯಾವ ಸರ್ಕಾರವೇ ಇರಲಿ ರಾಜ್ಯದ ಹಿತ ಮೊದಲು

ರಾಜ್ಯಕ್ಕೆ ಅನ್ಯಾಯವಾದಾಗ ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ, ವಿರೋಧಿಸಲೇಬೇಕು. ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಈ ಅನ್ಯಾಯವನ್ನು ವಿರೋಧಿಸಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಹಿಂದೆ ನಾನು ಶೇ.40 ತೆರಿಗೆ ಪಾಲು ಕೊಡಬೇಕೆಂದು ಒತ್ತಾಯಿಸಿದ್ದೆ. ಆಗ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಮೋದಿ ಅವರು ಕೂಡ ತೆರಿಗೆ ಪಾಲಿನಲ್ಲಿ ಶೇ.50 ರಷ್ಟು ರಾಜ್ಯಗಳಿಗೆ ಕೊಡಬೇಕೆಂದು ಒತ್ತಾಯಿಸಿದ್ದರು. ಕರ್ನಾಟಕದಿಂದ ಈಗ 4.50 ಲಕ್ಷ ಕೋಟಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೂ, ರಾಜ್ಯಕ್ಕೆ ಮರಳಿ ಬರುವುದು ಶೇ.14-15 ರಷ್ಟು ಮಾತ್ರ. ಕರ್ನಾಟಕಕ್ಕೆ 14ನೇ ಆಯೋಗದಲ್ಲಿ 4.713 ರಷ್ಟು ಪಾಲು ದೊರೆಕಿತ್ತು. ಆದರೆ 15ನೇ ಹಣಕಾಸಿನ ಆಯೋಗದಲ್ಲಿ 3.647 ರಷ್ಟಾಗಿ, 1.1 ರಷ್ಟು ಕಡಿಮೆಯಾಗಿ ಅನ್ಯಾಯವಾಗಿತ್ತು. ಇದರಂತೆ 11,495 ಕೋಟಿ ರಾಜ್ಯಕ್ಕೆ ಖೋತಾ ಆಗಿದೆ.

ನಮ್ಮ ತೆರಿಗೆ ನಮ್ಮ ಹಕ್ಕು. ಈ ಅನ್ಯಾಯವನ್ನು ಪ್ರಶ್ನಿಸಿ ಪ್ರತಿಭಟನೆ ಮಾಡಲಾಯಿತು. ಕೇಂದ್ರ ಸರ್ಕಾರ 2023-24ರಲ್ಲಿ ಭದ್ರಾ ಮೇಲ್ದಂಡೆಗೆ ಘೋಷಿಸಿದ 5300 ಕೋಟಿ ರು. ಅನುದಾನವನ್ನು ಈವರೆಗೂ ಬಿಡುಗಡೆ ಮಾಡಲಿಲ್ಲ. ಆಗಿದ್ದ ರಾಜ್ಯದ ಬಿಜೆಪಿ ಸರ್ಕಾರವೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವುದಾಗಿ ತಿಳಿಸಿದರು. ಆದರೆ ಈ ಯಾವ ಘೋಷಣೆಗಳೂ ಫಲ ಕಾಣಲಿಲ್ಲ. ಆದ್ದರಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯ ಬಿಜೆಪಿಯವರೂ ಪ್ರಶ್ನಿಸಬೇಕು. 16ನೇ ಆಯೋಗದಲ್ಲಿ ಸ್ವಲ್ಪ ಸುಧಾರಣೆಯಾಗಿ 4.131ರಷ್ಟು ರಾಜ್ಯಕ್ಕೆ ನಿಗದಿಯಾಗಿದೆ. ಆದರೆ ರಾಜ್ಯ ಕೋರಿದ್ದ 4.7ರಷ್ಟೂ ಬರಲಿಲ್ಲ. ಆದ್ದರಿಂದ ಕೇಂದ್ರದ ವಿರುದ್ಧದ ಹೋರಾಟ ಮುಂದುವರೆಯಲಿದೆ. ಸದ್ಯದಲ್ಲೇ ರಾಜ್ಯದ ಅನುದಾನದ ಬೇಡಿಕೆಯನ್ನಿಟ್ಟು ಪಕ್ಷಾತೀತ ನಿಯೋಗವೊಂದು ಕೇಂದ್ರಕ್ಕೆ ಹೋಗಬೇಕು ಎಂದರು.

ಬಜೆಟ್‌ ಗಾತ್ರ ಏರಿಕೆ

ಕೇಂದ್ರ ಶೇ.5.6

ರಾಜ್ಯ ಶೇ.9.4

ಜಿಡಿಪಿ ಬೆಳವಣಿಗೆ

ಕೇಂದ್ರ ಶೇ.7.4

ರಾಜ್ಯ ಶೇ.8.1