ಸಾರಾಂಶ
ನೈಸ್ ಕಂಪನಿ ರಸ್ತೆ ನಿರ್ಮಾಣಕ್ಕಾಗಿ ಗುರುತಿಸಿರುವ ರೈತರ ಜಮೀನು ಭೂಸ್ವಾಧೀನ ರದ್ದುಪಡಿಸಬೇಕು ಮತ್ತು ಯೋಜನೆ ಹೆಸರಿನಲ್ಲಿ ಆಗಿರುವ ಹಗರಣಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ರೈತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನೈಸ್ ಕಂಪನಿ ರಸ್ತೆ ನಿರ್ಮಾಣಕ್ಕಾಗಿ ಗುರುತಿಸಿರುವ ರೈತರ ಜಮೀನು ಭೂಸ್ವಾಧೀನ ರದ್ದುಪಡಿಸಬೇಕು ಮತ್ತು ಯೋಜನೆ ಹೆಸರಿನಲ್ಲಿ ಆಗಿರುವ ಹಗರಣಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ರೈತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.ನೈಸ್ ಕಂಪನಿಯ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ ಸಮಿತಿ ನೇಮಿಸಿರುವ ಹಿನ್ನೆಲೆಯಲ್ಲಿ ನೈಸ್ ಸಂಸ್ಥೆಗೆ ಯಾವುದೇ ಕಾಮಗಾರಿ ನಡೆಸದಂತೆ ನಿರ್ಬಂಧ ವಿಧಿಸಬೇಕು. ಬಿಎಂಐಸಿ ಯೋಜನೆ ಮತ್ತು ನೈಸ್ ಕಂಪನಿಯ ಪಾಲುದಾರಿಕೆಯನ್ನು ರದ್ದುಗೊಳಿಸಬೇಕು. ನೈಸ್ ಅಕ್ರಮ ಕುರಿತು ಸದನ ಸಮಿತಿ ಮತ್ತು ಸಂಪುಟ ಉಪಸಮಿತಿಗಳ ಶಿಫಾರಸು ಜಾರಿಗೊಳಿಸಬೇಕು. ಯೋಜನೆ ನೆಪದಲ್ಲಿ ವಶಪಡಿಸಿಕೊಂಡಿರುವ ಹೆಚ್ಚುವರಿ ಜಮೀನು ವಾಪಸ್ ಪಡೆಯಬೇಕು. ಭೂಸ್ವಾಧೀನ ಪ್ರಕಟಣೆ ಮತ್ತು ಕೋರ್ಟ್ ಆದೇಶಗಳ ನೆಪದಲ್ಲಿ ರೈತರ ಮೇಲೆ ದೌರ್ಜನ್ಯ, ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿದರು..
ಈ ವೇಳೆ ಮಾತನಾಡಿದ ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ಬಸವರಾಜ, ಯೋಜನೆಗಳ ನೆಪದಲ್ಲಿ ನೈಸ್ ಸಂಸ್ಥೆ ನಡೆಸುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ಬಂಧಿಸಬೇಕು. ನೈಸ್ ಸಂಸ್ಥೆಗೆ ಗುತ್ತಿಗೆ ನೀಡಿರುವ ಎಲ್ಲ ಸರ್ಕಾರಿ ಭೂಮಿಗಳನ್ನು ವಾಪಸ್ ಪಡೆದು ವಸತಿ ರಹಿತರಿಗೆ ಮನೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಮಂಜಪ್ಪ ಮನವಿ ಸ್ವೀಕರಿಸಿ ಶೀಘ್ರದಲ್ಲೇ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ರೈತರ ಮನವಿಯನ್ನು ಆಲಿಸಲಾಗುತ್ತದೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ, ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎನ್. ವೆಂಕಟಾಚಲಯ್ಯ ಉಪಸ್ಥಿತರಿದ್ದರು.