ಬರ ಬರಲಿ ಎಂದು ರೈತರೇ ಬಯಸ್ತಾರೆ: ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿವಾದಾತ್ಮಕ ಹೇಳಿಕೆ!

| Published : Dec 26 2023, 01:30 AM IST

ಬರ ಬರಲಿ ಎಂದು ರೈತರೇ ಬಯಸ್ತಾರೆ: ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿವಾದಾತ್ಮಕ ಹೇಳಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಬರ ಬಂದರೆ ಪರಿಹಾರ ದೊರೆಯುತ್ತದೆ. ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷ ರು. ದೊರೆಯುತ್ತದೆ ಎಂಬ ಕಾರಣಕ್ಕೆ ಸಾವನ್ನಪ್ಪುತ್ತಾರೆ. ಹಾಗಾಗಿ ಅವರ ಬರ ಬರಲಿ ಎಂದು ಆಶಿಸುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ/ಬೆಂಗಳೂರು‘ಮೇಲಿಂದ ಮೇಲೆ ಬರ ಬರಲಿ ಎಂದು ರೈತರು ಬಯಸುತ್ತಾರೆ. ಬರಗಾಲ ಬಂದರೆ ಸಾಲ ಮನ್ನಾ ಆಗುವ ನಿರೀಕ್ಷೆಯಲ್ಲಿ ಅವರು ಇರುತ್ತಾರೆ’ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಪ್ರತಿಪಕ್ಷಗಳ ಹಲವು ಮುಖಂಡರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಈ ರೀತಿಯ ಹೇಳಿಕೆಗಾಗಿ ಶಿವಾನಂದ ಪಾಟೀಲ್‌ ಕ್ಷಮೆ ಕೋರಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ. ಈ ನಡುವೆ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಚಿವ ಶಿವಾನಂದ ಪಾಟೀಲ್‌, ನನ್ನ ಭಾಷಣವನ್ನು ತಿರುಚಲಾಗಿದೆ. ನಾನು ರೈತರ ವಿರೋಧಿ ಅಲ್ಲ. ರೈತರ ವಿರೋಧವಾಗಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

ಸಚಿವರು ಹೇಳಿದ್ದೇನು?:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಹಕಾರ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವರು, ಕೃಷ್ಣಾ ನದಿಯಿಂದ ಪುಕ್ಕಟೆ ನೀರು ಸಿಗುತ್ತಿದೆ. ಉಚಿತ ವಿದ್ಯುತ್ ಕೂಡ ದೊರೆಯುತ್ತದೆ. ಈವರೆಗೆ ಮುಖ್ಯಮಂತ್ರಿ ಆದವರೆಲ್ಲ ಬೀಜ, ಗೊಬ್ಬರ ಉಚಿತವಾಗಿ ನೀಡಿದ್ದಾರೆ. ಆದರೂ ರೈತರಿಗೆ ಬರಗಾಲ ಬರಲಿ ಎಂಬ ಒಂದೇ ಆಸೆ ಇರುತ್ತದೆ. ಯಾಕೆಂದರೆ ಬರ ಬಂದರೆ ಸಾಲ ಮನ್ನಾ ಆಗುತ್ತದೆ ಎಂಬುದು ಅವರ ನಿರೀಕ್ಷೆ ಎಂದರು.ರೈತರು ಈ ರೀತಿ ಬಯಸಬಾರದು. ಯಾಕೆಂದರೆ ರೈತರು ಬಯಸಿದರೂ ಬಯಸದಿದ್ದರೂ ಮೂರು ವರ್ಷಕ್ಕೊಮ್ಮೆ ಬರಗಾಲ ಬಂದೇ ಬರುತ್ತದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಡ್ಡಿ ಮನ್ನಾ ಮಾಡುವ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್‌.ಯಡಿಯೂರಪ್ಪ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದ ಶಿವಾನಂದ ಪಾಟೀಲ, ಸಂಕಷ್ಟದಲ್ಲಿದ್ದ ವೇಳೆ ಸರ್ಕಾರ ನೆರವಿಗೆ ಬರಬಹುದು. ಆದರೆ ಸದಾ ನೆರವಿಗೆ ಬರುವುದು ಸರ್ಕಾರಕ್ಕೂ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.ಪ್ರತಿಭಟನೆ:

ಬರಗಾಲಕ್ಕೆ ಸಂಬಂಧಿಸಿದ ಹೇಳಿಕೆ ಖಂಡಿಸಿ ಚಾಮರಾಜನಗರದಲ್ಲಿ ರೈತ ಸಂಘಟನೆಗಳು ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರೆ, ಶಿವಾನಂದ ಪಾಟೀಲರು ಕ್ಷಮೆಯಾಚಿಸಬೇಕೆಂದು ರೈತ ಮುಖಂಡ ಬಸವರಾಜಪ್ಪ ಆಗ್ರಹಿಸಿದ್ದಾರೆ.ಈ ಹಿಂದೆ ಕೂಡ ಸಚಿವರು ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬರ್ಥದಲ್ಲಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ನಂತರ ತಾವು ಆ ರೀತಿ ಹೇಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದರು.