ಇಂದು ಕೇಜ್ರಿ, ಆಪ್‌ ನಾಯಕರ ‘ಬಿಜೆಪಿ ಕಚೇರಿ ಚಲೋ’

| Published : May 19 2024, 01:55 AM IST / Updated: May 19 2024, 04:31 AM IST

kejriwal news 010.jpg

ಸಾರಾಂಶ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, ‘ಮಾರ್ಚ್ 19ರ ಭಾನುವಾರ ಮಧ್ಯಾಹ್ನ 12ಕ್ಕೆ ನಾನು ಮತ್ತು ಇತರ ಎಎಪಿ ನಾಯಕರು ಬಿಜೆಪಿ ಪ್ರಧಾನ ಕಚೇರಿಗೆ ಹೋಗುತ್ತೇವೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು’ ಎಂದು ಗುಡುಗಿದ್ದಾರೆ.

  ನವದೆಹಲಿ ;  ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ತಮ್ಮ ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ ಪ್ರಕರಣದ ಬಗ್ಗೆ ಮೌನ ಮುರಿದು ಮೊದಲ ಪ್ರತಿಕ್ರಿಯೆ ನೀಡಿರುವ ಪಕ್ಷದ ನೇತಾರ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, ‘ಮಾರ್ಚ್ 19ರ ಭಾನುವಾರ ಮಧ್ಯಾಹ್ನ 12ಕ್ಕೆ ನಾನು ಮತ್ತು ಇತರ ಎಎಪಿ ನಾಯಕರು ಬಿಜೆಪಿ ಪ್ರಧಾನ ಕಚೇರಿಗೆ ಹೋಗುತ್ತೇವೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು’ ಎಂದು ಗುಡುಗಿದ್ದಾರೆ.

ಪ್ರಕರಣದಲ್ಲಿ ಬಿಭವ್ ಬಂಧನವಾದ ಬಳಿಕ ಶನಿವಾರ ವಿಡಿಯೋ ಸಂದೇಶ ಹೇಳಿಕೆ ಬಿಡುಗಡೆ ಮಾಡಿದ ಕೇಜ್ರಿವಾಲ್‌, ‘ನಮ್ಮ ಸಂಸದ ರಾಘವ್ ಚಡ್ಢಾ ಮತ್ತು ದೆಹಲಿ ಸಚಿವರಾದ ಆತಿಶಿ ಮತ್ತು ಸೌರಭ್ ಭಾರದ್ವಾಜ್ ಅವರನ್ನೂ ಜೈಲಿಗೆ ಕಳುಹಿಸುವುದಾಗಿ ಬಿಜೆಪಿ ಹೇಳುತ್ತಿದೆ. 

ಆದರೆ ನಮ್ಮ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ತಮ್ಮ ಪಕ್ಷವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಸವಾಲೆಸೆದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರನ್ನು ಜೈಲಿಗೆ ಕಳುಹಿಸುವ ಆಟವಾಡುತ್ತಿದ್ದಾರೆ. ಹೀಗಾಗಿ ನಾನು ನನ್ನ ಶಾಸಕರು ಮತ್ತು ಸಂಸದರೊಂದಿಗೆ ನಾಳೆ ಮಧ್ಯಾಹ್ನ ಬಿಜೆಪಿ ಕಚೇರಿಗೆ ಹೋಗುತ್ತೇವೆ. ಪ್ರಧಾನಿ ಅವರು ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು’ ಎಂದ ಕೇಜ್ರಿವಾಲ್‌, ‘ನೀವು ಎಷ್ಟು ಆಪ್‌ ನಾಯಕರನ್ನು ಜೈಲಿನಲ್ಲಿಟ್ಟರೂ ದೇಶವು ನೂರು ಪಟ್ಟು ಹೆಚ್ಚು ನಾಯಕರನ್ನು ಉತ್ಪಾದಿಸುತ್ತದೆ’ ಎಂದು ತಿರುಗೇಟು ನೀಡಿದರು.