ಸಾರಾಂಶ
ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಸಂತ್ರಸ್ತ ಕುಟುಂಬಗಳಿಗೆ ನೂರು ಮನೆ ನಿರ್ಮಿಸಿಕೊಡುವುದಾಗಿ ಹಾಗೂ ಅದಕ್ಕೆ ಅಗತ್ಯ ಭೂಮಿ ಖರೀದಿಸಲೂ ನಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಸಂತ್ರಸ್ತ ಕುಟುಂಬಗಳಿಗೆ ನೂರು ಮನೆ ನಿರ್ಮಿಸಿಕೊಡುವುದಾಗಿ ಹಾಗೂ ಅದಕ್ಕೆ ಅಗತ್ಯ ಭೂಮಿ ಖರೀದಿಸಲೂ ನಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.ಹಿಂದೆ ಭೇಟಿ ನೀಡಿದ್ದ ವೇಳೆ ಕೊಟ್ಟ ಭರವಸೆಯಂತೆ ನೂರು ಮನೆ ನಿರ್ಮಿಸಿಕೊಡಲು ಬದ್ಧರಾಗಿದ್ದೇವೆ. ತಮ್ಮ ಮನೆ, ಜೀವನೋಪಾಯ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸುರಕ್ಷಿತ ಮತ್ತು ಸ್ಥಿರ ಬದುಕು ಸಾಧ್ಯವಾಗಿಸುವುದು ನಮ್ಮ ಗುರಿ. ಈ ಸಂಬಂಧ ಸಮನ್ವಯ ಸಾಧಿಸಲು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಆದಾಗ್ಯೂ, ಯೋಜನೆ ಅನುಷ್ಠಾನಗೊಳಿಸಲು ಕೇರಳ ಸರ್ಕಾರದಿಂದ ಅಗತ್ಯ ಮಾರ್ಗಸೂಚಿ, ನಿರ್ದೇಶನಗಳ ಬಗ್ಗೆ ಮಾಹಿತಿ ಬಂದಿಲ್ಲ. ಸಂತ್ರಸ್ತ ಕುಟುಂಬಗಳಿಗೆ ತ್ವರಿತ ಪರಿಹಾರ ಒದಗಿಸಲು, ಮನೆಗಳನ್ನು ನಿರ್ಮಿಸಲು ಅಗತ್ಯವಿರುವ ಭೂಮಿ ಖರೀದಿಸಲೂ ನಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಹೇಳಿದ್ದಾರೆ.