ಇತಿಹಾಸವನ್ನು ತಿರುಚುವ ಪ್ರಯತ್ನಗಳು ದೇಶದಲ್ಲಿ ಹೆಚ್ಚಾಗಿದ್ದು, ಅಂಬೇಡ್ಕರ್, ಗಾಂಧಿಯವರ ಹೆಸರಿನ ಯೋಜನೆಗಳನ್ನು ಬದಲಾಯಿಸುವ ಮೂಲಕ ಅವರ ಸಾಧನೆಗಳನ್ನು ಇತಿಹಾಸದ ಪುಟದಿಂದ ಅಳಿಸಿ ಹಾಕಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು ಇತಿಹಾಸವನ್ನು ತಿರುಚುವ ಪ್ರಯತ್ನಗಳು ದೇಶದಲ್ಲಿ ಹೆಚ್ಚಾಗಿದ್ದು, ಅಂಬೇಡ್ಕರ್, ಗಾಂಧಿಯವರ ಹೆಸರಿನ ಯೋಜನೆಗಳನ್ನು ಬದಲಾಯಿಸುವ ಮೂಲಕ ಅವರ ಸಾಧನೆಗಳನ್ನು ಇತಿಹಾಸದ ಪುಟದಿಂದ ಅಳಿಸಿ ಹಾಕಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಬೆಂಗಳೂರು ವಿಶ್ವವಿದ್ಯಾಲಯ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ 208ನೇ ಐತಿಹಾಸಿಕ ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಸಂವಿಧಾನ ಇರದಿದ್ದರೆ ಈ ಸಮ ಸಮಾಜ ನಿರ್ಮಾಣವಾಗುತ್ತಿರಲಿಲ್ಲ. ಅನೇಕರು ಸಂವಿಧಾನ ಕೇವಲ ದಲಿತರಿಗೆ ಅಥವಾ ಒಂದು ವರ್ಗಕ್ಕೆ ಸೀಮಿತ ಎಂದು ಭಾವಿಸಿದ್ದಾರೆ.ಸಂವಿಧಾನದಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ದೊರೆತಿದೆ. ಸಂವಿಧಾನ ಎಲ್ಲರಿಗೂ ಅನ್ವಯ. ಭೀಮಾ ಕೋರೆಗಾಂವ್ ರೀತಿಯ ಕಾರ್ಯಕ್ರಮ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದೆ ಎಲ್ಲ ಸಮುದಾಯಗಳು ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಇತಿಹಾಸವನ್ನು ನೆನೆಯಬೇಕು. ಸಂವಿಧಾನದ ಲಾಭ ಪಡೆದು ಉನ್ನತ ಹುದ್ದೆಯಲ್ಲಿರುವ ಎಲ್ಲರನ್ನೂ ಎಚ್ಚರಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.ಜನರು ಧಾರವಾಹಿ, ಸಿನಿಮಾಗಳಲ್ಲಿ ಬರುವ ಪಾತ್ರ, ಸನ್ನೀವೇಶಗಳಿಗೆ ಕಣ್ಣೀರಿಡುತ್ತಾರೆ. ಆದರೆ ದಲಿತರ ಮೇಲೆ ನಡೆಯುವ ಅಸ್ಪೃಶ್ಯ, ಅಸಮಾನತೆ ಘಟನೆಗಳಿಗೆ ಕಣ್ಣೀರಿಡುವುದಿಲ್ಲ. ವಿದ್ಯಾರ್ಥಿಗಳು ಸಾಮಾಜಿಕ ಜಾಗೃತಿ, ಸಂವಿಧಾನದ ಅರಿವನ್ನು ಎಲ್ಲರಲ್ಲೂ ಮೂಡಿಸಬೇಕು. ಶಿಕ್ಷಣದಿಂದ ವಂಚಿತರಾದವನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್, ಬೆಂಗಳೂರು ವಿವಿ ಕುಲಪತಿ ಡಾ.ಜಯಕರ ಎಸ್.ಎಂ, ಕುಲ ಸಚಿವ (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ (ಪ್ರಭಾರ) ನಿರ್ದೇಶಕ ಪ್ರೊ.ಜಿ.ಕೃಷ್ಣಮೂರ್ತಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿರ್ದೇಶಕ ಪ್ರೊ.ಪಿ.ಸಿ.ನಾಗೇಶ್ ಭಾಗಿಯಾಗಿದ್ದರು.