ಸಚಿವ ಸಂಪುಟ ಪುನಾರಚನೆ ನಡೆಯುವ ವೇಳೆಯೇ ಸ್ಪೀಕರ್‌ ಸ್ಥಾನಕ್ಕೂ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು : ಸಚಿವ ಸಂಪುಟ ಪುನಾರಚನೆ ನಡೆಯುವ ವೇಳೆಯೇ ಸ್ಪೀಕರ್‌ ಸ್ಥಾನಕ್ಕೂ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ.

ಸಚಿವ ಸಂಪುಟ ಪುನಾರಚನೆ ಯಾವಾಗ ನಡೆದರೂ ಆಗ ಹೊಸ ಸ್ಪೀಕರ್‌ ಆಯ್ಕೆಯೂ ಆಗುವ ಸಾಧ್ಯತೆಯಿದೆ. ಏಕೆಂದರೆ, ಹಾಲಿ ಸ್ಪೀಕರ್‌ ಯು.ಟಿ. ಖಾದರ್‌ ಅವರು ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ಹೊಸ ಸ್ಪೀಕರ್‌ ಆಗಿ ಹಾಲಿ ಸಚಿವರಾಗಿರುವ ದಿನೇಶ್‌ ಗುಂಡೂರಾವ್‌ ಅವರು ಹುದ್ದೆ ಅಲಂಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಏಕೆಂದರೆ, ಸಂಪುಟ ಪುನಾರಚನೆ ನಡೆದರೇ ಬ್ರಾಹ್ಮಣ ಸಮುದಾಯದ ಪ್ರಾತಿನಿಧ್ಯ ಅಡಿಯಲ್ಲಿ ಆರ್‌.ವಿ. ದೇಶಪಾಂಡೆ ಅವರು ಸಂಪುಟಕ್ಕೆ ಸೇರ್ಪಡೆಯಾಗಬಹುದು. ಇದೇ ವೇಳೆ ಖಾದರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇರಾದೆ ನಾಯಕತ್ವಕ್ಕೆ ಇದೆ. ಹೀಗಾಗಿ, ದೇಶಪಾಂಡೆ, ಖಾದರ್‌ ಸಂಪುಟಕ್ಕೆ ಬಂದರೆ ಆಗ ಬ್ರಾಹ್ಮಣ ಸಮುದಾಯದ ದಿನೇಶ್‌ ಗುಂಡೂರಾವ್‌ ಅವರನ್ನು ಸ್ಪೀಕರ್‌ ಹುದ್ದೆಗೆ ಪರಿಗಣಿಸಬಹುದು ಎನ್ನುತ್ತವೆ ಮೂಲಗಳು.

ಹೀಗೆ ಆರ್‌.ವಿ. ದೇಶಪಾಂಡೆ ಸಂಪುಟಕ್ಕೆ ಬಂದರೆ ಆಗ ಕಾರವಾರ ಜಿಲ್ಲಾ ಪ್ರಾತಿನಿಧ್ಯವೂ ಈಡೇರಿಕೆಯಾಗುವುದರಿಂದ ಹಾಲಿ ಸಚಿವರಾಗಿರುವ ಅದೇ ಜಿಲ್ಲೆಯ ಮಂಕಾಳು ವೈದ್ಯ ಅವರಿಗೆ ಕೊಕ್ ದೊರೆಯುವ ಸಂಭವ ಹೆಚ್ಚು ಎನ್ನುತ್ತವೆ ಮೂಲಗಳು.

ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಸದ್ಯಕ್ಕಿಲ್ಲ

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಹಲವು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರೂ ಸದ್ಯಕ್ಕೆ ಹುದ್ದೆ ಬದಲಾವಣೆ ತಕ್ಷಣಕ್ಕೆ ನಡೆಯುವ ಸಾಧ್ಯತೆ ಕಂಡು ಬರುತ್ತಿಲ್ಲ.

ಒಬ್ಬರಿಗೆ ಒಂದು ಹುದ್ದೆ ಇರಬೇಕು ಎಂಬ ಕಾರಣಕ್ಕೆ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಎರಡು ಹುದ್ದೆ ಹೊಂದಿರುವ ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಬಿಟ್ಟುಕೊಡಬೇಕು ಎಂಬ ವಾದವಿದೆ.

ಈ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಗೆ ಬಂದಾಗ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆವರೆಗೂ ಇದೇ ಹುದ್ದೆಯಲ್ಲಿ ಮುಂದುವರೆಯಲು ತಮಗೆ ಆಸಕ್ತಿಯಿದೆ ಎಂದು ತಿಳಿಸಿದ್ದರು ಎನ್ನಲಾಗಿದೆ.

ಆದರೆ, ಕಾಂಗ್ರೆಸ್‌ನ ಒಂದು ಬಣ ಅಧ್ಯಕ್ಷರ ಹುದ್ದೆ ಬದಲಾವಣೆಗೆ ಒತ್ತಡ ನಿರ್ಮಾಣ ಮಾಡಿದೆ. ಹೀಗಾಗಿ ಅಧ್ಯಕ್ಷ ಬದಲಾವಣೆ ವಿಚಾರ ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಎಐಸಿಸಿ ಪುನರಚನೆ (ಈ ಪ್ರಕ್ರಿಯೆ ಜನವರಿ ಮಾಸದಲ್ಲಿ ನಡೆಯಲಿದೆ) ನಂತರ ಹೈಕಮಾಂಡ್‌ ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಹೈಕಮಾಂಡ್‌ ಮೊದಲು ಎಐಸಿಸಿ ಪುನಾರಚನೆ ಪ್ರಕ್ರಿಯೆ ಮುಗಿಸಿ ನಂತರ ಪಿಸಿಸಿ (ಪ್ರದೇಶ ಕಾಂಗ್ರೆಸ್ ಅಧ್ಯಕ್ಷ) ಬದಲಾವಣೆ ಪ್ರಕ್ರಿಯೆ ಆರಂಭಿಸಲಿದ್ದು, ಆಕ ಕೆಪಿಸಿಸಿ ವಿಚಾರವನ್ನು ಪರಿಗಣಿಸಬಹುದು ಎನ್ನಲಾಗಿದೆ. ಹೀಗಾಗಿ ಈ ಪ್ರಕ್ರಿಯೆ ಏನಿದ್ದರೂ ಜನವರಿ ಅಥವಾ ಫೆಬ್ರವರಿ ನಂತರವೇ ನಡೆಯಬಹುದು.

ಲಿಂಗಾಯತ ಸಮುದಾಯಕ್ಕೆ?:

ಇನ್ನುಕೆಪಿಸಿಸಿ ಅಧ್ಯಕ್ಷರು ಬದಲಾದರೆ ತಮಗೆ ಅವಕಾಶ ಸಿಗಬೇಕು ಎಂದು ನಾಯಕ ಸಮುದಾಯಕ್ಕೆ ಸೇರಿದ ಕೆ.ಎನ್. ರಾಜಣ್ಣ ಹಾಗೂ ಸತೀಶ್‌ ಜಾರಕಿಹೊಳಿ ಇಂಗಿತ ವ್ಯಕ್ತಪಡಿಸುತ್ತಿದ್ದರೂ ಆ ಹುದ್ದೆ ದೊರೆಯುವುದು ಲಿಂಗಾಯತ ಸಮುದಾಯಕ್ಕೆ ಎಂದು ಪಕ್ಷದ ಉನ್ನತ ಮೂಲಗಳು ಹೇಳುತ್ತವೆ.

ಈ ಮೂಲಗಳ ಪ್ರಕಾರ ಅಧ್ಯಕ್ಷರೇನಾದರೂ ಬದಲಾದರೆ ಹುದ್ದೆಯು ಲಿಂಗಾಯತ ಸಮುದಾಯದ ಈಶ್ವರ್‌ ಖಂಡ್ರೆಗೆ ಸಿಗುವ ಸಾಧ್ಯತೆ ಹೆಚ್ಚು.