ಸಾರಾಂಶ
‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಹೆಚ್ಚು ಯೋಜನೆ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಮ್ಮ ರಾಜ್ಯಕ್ಕೆ ಏನೂ ಸಿಕ್ಕಿಲ್ಲ’ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಛೇಡಿಸಿದ್ದಾರೆ.
ನವದೆಹಲಿ: ‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಹೆಚ್ಚು ಯೋಜನೆ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಮ್ಮ ರಾಜ್ಯಕ್ಕೆ ಏನೂ ಸಿಕ್ಕಿಲ್ಲ’ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಛೇಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ಕರ್ನಾಟಕದಿಂದಲೇ ಆಯ್ಕೆಯಾಗಿ ಹೋಗಿರುವ ಹಿನ್ನೆಲೆಯಲ್ಲಿ ಖರ್ಗೆ ಬುಧವಾರ ರಾಜ್ಯಸಭೆ ಕಲಾಪದ ಸಂದರ್ಭದಲ್ಲಿ ಈ ರೀತಿ ತರಾಟೆಗೆ ತೆಗೆದುಕೊಂಡರು.ಇದೇ ವೇಳೆ, ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಮಾತ್ರ ಬಜೆಟ್‌ನಲ್ಲಿ ಹೆಚ್ಚು ಕೊಡುಗೆ ನೀಡಿರುವುದನ್ನು ಟೀಕಿಸಿದ ಅವರು, 2 ರಾಜ್ಯಗಳಿಗೆ ಮಾತ್ರ ತಟ್ಟೆ ತುಂಬಾ ಪಕೋಡಾ ಹಾಗೂ ಜಿಲೇಬಿಯನ್ನು ಕೊಡಲಾಗಿದೆ. ಉಳಿದ ರಾಜ್ಯಗಳಿಗೆ ಖಾಲಿ ತಟ್ಟೆ ನೀಡಲಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ಹರ್ಯಾಣ, ರಾಜಸ್ಥಾನ, ಛತ್ತೀಸ್‌ಗಢಕ್ಕೆ ಏನೂ ಸಿಕ್ಕಿಲ್ಲ. ಕೆಲವೇ ವ್ಯಕ್ತಿಗಳನ್ನು ಓಲೈಸಲು ಹಾಗೂ ಕುರ್ಚಿ ಉಳಿಸಿಕೊಳ್ಳಲು ಬಜೆಟ್ ಮಂಡಿಸಲಾಗಿದೆ. ಇದೊಂದು ತಾರತಮ್ಯದ ಬಜೆಟ್. ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದು ಹೇಳಿದರು.
ಈ ವೇಳೆ ನಿರ್ಮಲಾ ಅವರು ಮಾತನಾಡಲು ಬಿಡಿ ಎಂದು ರಾಜ್ಯಸಭೆ ಸಭಾಪತಿಯಾಗಿರುವ ಜಗದೀಪ್ ಧನಕರ್ ಹೇಳಿದ್ದಕ್ಕೆ ಕಟಕಿಯಾಡಿದ ಖರ್ಗೆ ಅವರು, ನಾನು ಮಾತನಾಡಿ ಮುಗಿಸುತ್ತೇನೆ. ಮಾತಾಜಿ ಅವರು ಮಾತನಾಡುವುದರಲ್ಲಿ ನಿಷ್ಣಾತರು. ಅದು ನನಗೆ ಗೊತ್ತಿದೆ ಎಂದು ತಿಳಿಸಿದರು.