ಸಾರಾಂಶ
ಕೆಪಿಸಿಸಿ ಅಧ್ಯಕ್ಷಗಿರಿ ಬದಲಾಗುತ್ತದೆ. ಈ ತಕ್ಷಣವೇ ಆಗಲಿಕ್ಕಿಲ್ಲ. ಆದರೆ, ಆಗೇ ಆಗುತ್ತದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು
ಹುಬ್ಬಳ್ಳಿ : ಕೆಪಿಸಿಸಿ ಅಧ್ಯಕ್ಷಗಿರಿ ಬದಲಾಗುತ್ತದೆ. ಈ ತಕ್ಷಣವೇ ಆಗಲಿಕ್ಕಿಲ್ಲ. ಆದರೆ, ಆಗೇ ಆಗುತ್ತದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸುವ ಅಧಿಕಾರ ನಮಗಿಲ್ಲ. ದೇಶದ ನಾನಾ ರಾಜ್ಯಗಳ ಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಿದೆ. ಕರ್ನಾಟಕದಲ್ಲೂ ಅಧ್ಯಕ್ಷರ ಬದಲಾವಣೆಯಾಗುತ್ತದೆ ಎಂದು ಖರ್ಗೆ ಅವರೇ ಹೇಳಿದ್ದಾರೆ. ಬದಲಾವಣೆ ಈಗ ತಕ್ಷಣವೇ ಆಗದೇ ಇರಬಹುದು. ಆದರೆ, ಆಗೇ ಆಗುತ್ತದೆ. ಅಧ್ಯಕ್ಷರ ನೇಮಕ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾವಾಗ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.
ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪ್ರಬಲ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ. ಚರ್ಚೆ ಕೂಡ ಆಗಿಲ್ಲ. ನಾನಂತೂ ಯಾವುದೇ ರೀತಿಯ ಆಕಾಂಕ್ಷಿ ಅಲ್ಲ. ನಾನು ಅಧ್ಯಕ್ಷನಾಗಬೇಕು ಎಂದು ನನ್ನ ಹಿಂಬಾಲಕರು, ಪ್ರಮುಖರು ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸಹಜ ಕೂಡ. ಸಂದರ್ಭ ಬಂದಾಗ ನೋಡೋಣ ಎಂದು ಹೇಳಿದರು.