ಸಾರಾಂಶ
ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿಯಲ್ಲಿ ದೊಡ್ಡ ಮಟ್ಟದ ಅನ್ಯಾಯವಾಗಿದ್ದು, ಕಾವೇರಿಗೆ ನೀಡುವ ಅರ್ಧದಷ್ಟೂ ಹಣ ಕೃಷ್ಣಾ ಯೋಜನೆಗಳಿಗೆ ನೀಡುತ್ತಿಲ್ಲ. ಗ್ಯಾರಂಟಿಗಳ ಬದಲು ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆಗೆ ಹಣ ನೀಡಿ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಸುವರ್ಣ ವಿಧಾನಸಭೆ : ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿಯಲ್ಲಿ ದೊಡ್ಡ ಮಟ್ಟದ ಅನ್ಯಾಯವಾಗಿದ್ದು, ಕಾವೇರಿಗೆ ನೀಡುವ ಅರ್ಧದಷ್ಟೂ ಹಣ ಕೃಷ್ಣಾ ಯೋಜನೆಗಳಿಗೆ ನೀಡುತ್ತಿಲ್ಲ. ಗ್ಯಾರಂಟಿಗಳ ಬದಲು ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆಗೆ ಹಣ ನೀಡಿ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಬುಧವಾರ ಉತ್ತರ ಕರ್ನಾಟಕ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರಾವರಿ, ಶಿಕ್ಷಣ, ಸಾರಿಗೆ, ಕೈಗಾರಿಕೆ ಸೇರಿ ವಿವಿಧ ಇಲಾಖೆಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದ ಬಗ್ಗೆ ಕಿಡಿ ಕಾರಿದರು. ಇದೇ ವೇಳೆ ಪ್ರತಿ ತಿಂಗಳಿಗೆ ಒಂದು ಬಾರಿ ಸಚಿವ ಸಂಪುಟ ಸಭೆಯನ್ನು ಬೆಳಗಾವಿಯಲ್ಲಿ ನಡೆಸಬೇಕು. ಪ್ರತಿ ವರ್ಷ 15 ದಿನಗಳ ಕಾಲ ಕಡ್ಡಾಯವಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ-3ನೇ ಹಂತಕ್ಕೆ ಜಮೀನು ನೀಡಲು ರೈತರು ಸಿದ್ಧವಾಗಿದ್ದಾರೆ. ಯೋಜನೆ ಅನುಷ್ಠಾನಗೊಳಿಸಿದರೆ 15 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಆಗಲಿದೆ. ಈ ಭಾಗದ ಜನರು ಚಿನ್ನ ಬಿತ್ತಿ ಚಿನ್ನ ಬೆಳೆಯಬಹುದಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಯೋಜನೆಗೆ 1.5 ಲಕ್ಷ ಕೋಟಿ ರು. ಆಗಬಹುದು ಎಂಬ ಅಂದಾಜಿತ್ತು. ಆದರೆ ಸಚಿವ ಎಂ.ಬಿ. ಪಾಟೀಲ್ ಅವರು 70 ಸಾವಿರ ಕೋಟಿ ರು. ಮಾತ್ರ ಸಾಕು ಎಂದಿದ್ದಾರೆ. ಗ್ಯಾರಂಟಿಗಳ ಬದಲು ವರ್ಷಕ್ಕೆ 30-40 ಸಾವಿರ ಕೋಟಿ ರು. ವೆಚ್ಚ ಮಾಡಿ 3-4 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ಎಂದು ಹೇಳಿದರು.
ಎಲ್ಲಾ ನಾಯಕರೂ ಕೃಷ್ಣೆಯ ಮೇಲೆ ಆಣೆ ಮಾಡುವುದು, ಪಾದಯಾತ್ರೆ ಮಾಡುವುದೇ ಆಯಿತು. ಆದರೆ ಚುನಾವಣೆ ಮುಗಿದು ಮುಖ್ಯಮಂತ್ರಿ ಆದ ನಂತರ ಹಣ ಎಲ್ಲಿದೆ ಎನ್ನುತ್ತಾರೆ. ಹಣಕಾಸು ಇಲಾಖೆಯವರು ಹಣಕಾಸಿನ ಲಭ್ಯತೆ ಅನುಸಾರ ಪರಿಶೀಲಿಸುತ್ತೇವೆ ಎಂದು ಕೈ ತೊಳೆದುಕೊಳ್ಳುತ್ತಾರೆ. ಆದರೆ ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆಗೆ 29,000 ಕೋಟಿ ರು. ಹಣ ನೀಡುತ್ತಾರೆ. ಉತ್ತರ ಕರ್ನಾಟಕ ಭಾಗದ ಬಗ್ಗೆ ಯಾಕೆ ಇಷ್ಟು ತಾತ್ಸಾರ? ನೀರಾವರಿ ಯೋಜನೆಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚಿದ್ದು, ಈ ಭಾಗದವರು ಸಚಿವರಾದರೆ ಮಾತ್ರ ನ್ಯಾಯ ಒದಗಿಸಲು ಸಾಧ್ಯ. ಹೀಗಾಗಿ ಉತ್ತರ ಕರ್ನಾಟಕ ಭಾಗದವರನ್ನು ನೀರಾವರಿ ಸಚಿವರನ್ನಾಗಿ ಮಾಡಿ ಎಂದರು. ಈ ವೇಳೆ ಶಿವಲಿಂಗೇಗೌಡ ಸೇರಿದಂತೆ ಕಾಂಗ್ರೆಸ್ ಸದಸ್ಯರು, ರಾಷ್ಟ್ರೀಯ ಯೋಜನೆ ಮಾಡಿ ಹಣ ತನ್ನಿ ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕಕ್ಕೆ ಅನ್ಯಾಯ:
ಉತ್ತರ ಕರ್ನಾಟಕ ಭಾಗಕ್ಕೆ ಎಲ್ಲಾ ರೀತಿಯಲ್ಲೂ ಅನ್ಯಾಯ ಎಸಗಲಾಗಿದೆ. ಜಿಲ್ಲೆ, ತಾಲೂಕು, ಗ್ರಾಮ ಪಂಚಾಯ್ತಿ ಕೇಂದ್ರಗಳು, ಶಾಸಕರು, ಸಂಸದರು, ಕೊನೆಗೆ ರಾಜ್ಯಸಭೆ ಸದಸ್ಯ ಸ್ಥಾನಗಳಲ್ಲೂ ಅನ್ಯಾಯ ಆಗಿದೆ. ರಾಜ್ಯಸಭಾ ಸದಸ್ಯರ ಪೈಕಿ 16 ಮಂದಿ ದಕ್ಷಿಣ ಕರ್ನಾಟಕ ಭಾಗದವರಾಗಿದ್ದರೆ ಉತ್ತರ ಕರ್ನಾಟಕ ಭಾಗದಲ್ಲಿ ಇಬ್ಬರು ಮಾತ್ರ ಇದ್ದಾರೆ. ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜು, ಬಸ್ಸು, ಬಸ್ಸು ನಿಲ್ದಾಣ ಸೇರಿ ಎಲ್ಲಾ ವಿಚಾರದಲ್ಲೂ ಅನ್ಯಾಯವಾಗಿದೆ. ಇನ್ನು ಉತ್ತರ ಕರ್ನಾಟಕದ ಸಚಿವರೂ ಕಡಿಮೆ ಎಂದು ಯತ್ನಾಳ ಹೇಳಿದರು.
ಸುವರ್ಣಸೌಧಕ್ಕೆ ಎರಡು ಸಾವಿರ ಕೋಟಿ ರು. ಖರ್ಚು ಮಾಡಲಾಗಿದೆ. ಆದರೆ, ಯಾವ ಕಚೇರಿಯನ್ನೂ ಇಲ್ಲಿಗೆ ಸ್ಥಳಾಂತರ ಮಾಡಿಲ್ಲ. ಕೃಷ್ಣಾ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರು ಇಲ್ಲಿಗೆ ಪ್ರವಾಸ ಬಂದು ಹೋಗುತ್ತಾರೆ. ನಂಜುಂಡಪ್ಪ ಅವರ ವರದಿ ಪ್ರಕಾರ ಅಭಿವೃದ್ಧಿ ಆಗಿಲ್ಲ. ಶಿಕ್ಷಣ, ಕೈಗಾರಿಕೆ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
‘ಇಮ್ಮಡಿ ಪುಲಕೇಶಿಯನ್ನು ರಾಜ್ಯದ ರಾಯಭಾರಿ ಮಾಡಿ’
ಉತ್ತರ ಕರ್ನಾಟಕ ಭಾಗದ ಬಹುತೇಕ ರಾಜ-ಮಹಾರಾಜರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಇಮ್ಮಡಿ ಪುಲಕೇಶಿ ದಕ್ಷಿಣದ ಪಥೇಶ್ವರ ಬಿರುದು ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರನ್ನು ಗೌರವಿಸುವಂತೆ ಕರ್ನಾಟಕದಲ್ಲೂ ಇಮ್ಮಡಿ ಪುಲಕೇಶಿ ಅವರನ್ನು ಗೌರವಿಸಬೇಕು. ಬಸವಣ್ಣ ಅವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿರುವಂತೆ ಅವರ ಜತೆಗೆ ಇಮ್ಮಡಿ ಪುಲಕೇಶಿ ಅವರನ್ನು ರಾಜ್ಯದ ರಾಯಭಾರಿ ಎಂದು ಘೋಷಿಸಬೇಕು ಎಂದು ಹೇಳಿದರು.
ಇನ್ನು ಬೆಳಗಾವಿ ವಿಧಾನಸಭೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಸಾಲಿಗೆ ಸಮನಾಗಿ ಅಂಬೇಡ್ಕರ್ ಅವರ ಫೋಟೋ ಹಾಕಬೇಕು. ಡಾ.ಬಿ.ಆರ್ .ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದು 100 ವರ್ಷ ಕಳೆಯುತ್ತಿದೆ. ಹೀಗಾಗಿ ಗಾಂಧೀಜಿ ಹೆಸರಿನಲ್ಲಿ ಸಮಾವೇಶ ಮಾಡುತ್ತಿರುವ ರೀತಿಯಲ್ಲೇ ಅಂಬೇಡ್ಕರ್ ಅವರ ಹೆಸರಿನಲ್ಲೂ ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದರು.
ಆಗುವುದಾದರೆ ಸಿಎಂ ಆಗ್ತೇನೆ, ಬೇರೇನೂ ಆಗಲ್ಲ: ಯತ್ನಾಳ್
ಬಿಜೆಪಿಯಲ್ಲಿ ಹುದ್ದೆ ನೀಡದ ಬಗ್ಗೆ ಕಾಂಗ್ರೆಸ್ ಸದಸ್ಯರು ಕಿಚಾಯಿಸಿದ ಬಗ್ಗೆ ತಿರುಗೇಟು ನೀಡಿದ ಯತ್ನಾಳ್, ನಾನು ಆಗುವುದಾದರೆ ಮುಖ್ಯಮಂತ್ರಿ ಆಗುತ್ತೇನೆ. ಬೇರೇನೂ ಆಗುವುದಿಲ್ಲ.ಯಾವ ಹುದ್ದೆ ಇಲ್ಲದಿದ್ದರೂ ಯತ್ನಾಳ್ ಎಂಬ ಶಕ್ತಿ ಈ ರಾಜ್ಯದಲ್ಲಿರುವುದು ಎಲ್ಲರಿಗೂ ಗೊತ್ತಿದೆ ಎಂದರು.
ಯತ್ನಾಳ್ ಅವರು ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿದ ಬಗ್ಗೆ ಶಾಸಕ ಕೋನರೆಡ್ಡಿ ಕಿಚಾಯಿಸಿದಾಗ, ‘ನಾನು ಉ-ಕ ಅಭಿವೃದ್ಧಿ ಬಗ್ಗೆ ಚರ್ಚಿಸಲು ಹೋಗಿದ್ದೆ. ನಿಮ್ಮ ರೀತಿ ಯಾವುದೋ ಫ್ಲಾಟ್ ಮಂಜೂರಿಗೆ ಹೋಗಿರಲಿಲ್ಲ’ ಎಂದು ತಿರುಗೇಟು ನೀಡಿದರು