ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಂದಾಪುರ ಕನ್ನಡ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸುವ ಮೂಲಕ ''''''''ಕುಂದಾಪ್ರ ಕನ್ನಡ ಅಧ್ಯಯನ ಪೀಠ''''''''ವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ನಡೆಯಬೇಕಿದೆ ಎಂದು ಮಾಜಿ ಸಂಸದ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಆಯೋಜಿಸಿರುವ ಎರಡು ದಿನಗಳ ‘ಕುಂದಾಪ್ರ ಕನ್ನಡ ಹಬ್ಬ-2025’ ಕಾರ್ಯಕ್ರಮದ ಮೊದಲ ದಿನವಾದ ಶನಿವಾರ ''''''''ಕುಂದಾಪ್ರ ಕನ್ನಡ ಅಧ್ಯಯನ ಪೀಠ'''''''' ಲೋಕಾರ್ಪಣೆ ಮಾಡಿ ಮಾತನಾಡಿದರು. ನಾಲ್ಕು ವರ್ಷಗಳ ಹಿಂದೆ ಕುಂದಾಪ್ರ ಕನ್ನಡ ಹಬ್ಬದಲ್ಲಿ ಈ ಅಧ್ಯಯನ ಪೀಠಕ್ಕೆ ಬೇಡಿಕೆ ಇಟ್ಟಿದ್ದರು. ಪೀಠಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾತ್ರವಲ್ಲದೆ ಸರ್ಕಾರ ಕೂಡ ಒಪ್ಪಿಗೆ ನೀಡಿತು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 1.5 ಕೋಟಿ ರು. ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಕುಂದಾಪ್ರ ಕನ್ನಡ ಬಗ್ಗೆ ಹಳ್ಳಿಯ ಮಹಿಳೆಯರು ಹಾಗೂ ಹಿರಿಯರು ಮಾತನಾಡುತ್ತಿರುವ ಪದಗಳನ್ನು ಸಂಗ್ರಹಿಸಿ ಅಧ್ಯಯನ ಮುಂದುವರಿಸಿದರೆ ಪೀಠ ಇನ್ನಷ್ಟು ಬಲಗೊಳ್ಳುತ್ತದೆ. ಕುಂದಾಪ್ರ ಕನ್ನಡ ಬಗ್ಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಒಂದು ಆ್ಯಪ್ ಮಾಡಿದ್ದು, ಪಂಜು ಗಂಗೊಳ್ಳಿ ಅವರು ಕುಂದಗನ್ನಡ ನಿಘಂಟು ಮಾಡಿದ್ದಾರೆ. ಅದೇ ರೀತಿ ಕುಂದಾಪುರ ಕನ್ನಡ ಕುರಿತು ಯಾವುದೇ ಮಹತ್ವದ ವಸ್ತು, ವಿಷಯ ಇದ್ದರೆ ಪೀಠಕ್ಕೆ ನೀಡಿ ಎಂದು ಹೇಳಿದರು.ಕುಂದಾಪುರದಲ್ಲೂ ಪೀಠದ ಉದ್ಘಾಟನೆ ಮಾಡಲಾಗುವುದು. ಅಲ್ಲದೆ, ಹಿರಿಯರು ತಮ್ಮ ಮಕ್ಕಳು-ಮೊಮ್ಮಕ್ಕಳು ಕುಂದಾಪ್ರ ಕನ್ನಡ ಮಾತನಾಡುವಂತೆ, ಭಾಷೆ ಬಳಕೆ ಮುಂದುವರಿಯುವಂತೆ ಮಾಡಬೇಕಿದೆ ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಕುಂದಗನ್ನಡವನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಲು ಪೀಠ ನೆರವಾಗಲಿದೆ. ಕುಂದಾಪ್ರ ಕನ್ನಡ ಹಬ್ಬದಿಂದ ಕುಂದಾಪುರ ಮಾತ್ರವಲ್ಲದೆ ಬೆಂಗಳೂರು, ದುಬೈ ಸೇರಿ ವಿಶ್ವದೆಲ್ಲೆಡೆ ಕುಂದಾಪ್ರ ಹೆಸರು ಅನುರಣಿಸುತ್ತಿದೆ. ಬರೀ ಭಾಷೆ ಮೂಲಕವೇ ದೊಡ್ಡ ಸಂಘಟನೆ ನಡೆಯುತ್ತಿದೆ ಎಂದು ಹೇಳಿದರು.ಕುಂದಗನ್ನಡ ಆ್ಯಪ್ ಬಿಡುಗಡೆ:
ರವಿ ಬಸ್ರೂರು ರೂಪಿಸಿರುವ ಕುಂದಗನ್ನಡದ ಸುಮಾರು 9 ಸಾವಿರ ಪದಗಳನ್ನು ಒಳಗೊಂಡ ‘ಡಿಜಿಟಲ್ ಶಬ್ದಕೋಶ’ ಎಂಬ ಆ್ಯಪ್ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಮಣಿಪಾಲ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಎಚ್.ಸುದರ್ಶನ ಬಲ್ಲಾಳ್ ಅವರಿಗೆ ‘ಊರ ಗೌರವ’ ಎಂಬ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ರಾಜು ಮೊಗವೀರ, ಲೈಫ್‌ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ಮೊದಲಾದವರಿದ್ದರು.
ಇಂದು ವಿವಿಧ ಸಮಾರಂಭ:ಇನ್ನು ಭಾನುವಾರ ಬೆಳಗ್ಗೆ 9.30 ರಿಂದ ಡಾ.ವಿದ್ಯಾಭೂಷಣರ ಗಾನಯಾನದ ಸುವರ್ಣ ಸಂಭ್ರಮ, ಮಕ್ಕಳ ಮಹಾಸಂಗಮದ ಯಕ್ಷನೃತ್ಯ, ಕುಂದಾಪ್ರ ಕನ್ನಡದ ರಸಪ್ರಶ್ನೆ, ಕುಂದಾಪ್ರದ ಸುಂದರ-ಸುಂದರಿಯರ ಫ್ಯಾಷನ್ ಶೋ, ರಘು ದೀಕ್ಷಿತ್ ಲೈವ್ ಕನ್ಸರ್ಟ್, ಕ್ಲೀನ್ ಕುಂದಾಪುರ, ಸೇವ್ ಅವರ್ ಓಷನ್ ವಿಶೇಷ ಅಭಿನಂದನೆ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿವೆ.
ಸಮಾರೋಪದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಂಆರ್‌ಜಿ ಗ್ರೂಪ್ ಸಿಎಂಡಿ ಪ್ರಕಾಶ್ ಶೆಟ್ಟಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ, ಪತ್ರಕರ್ತ ಜೋಗಿ (ಗಿರೀಶ್ ರಾವ್), ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಉಪೇಂದ್ರ ಶೆಟ್ಟಿ, ಚಿತ್ರನಟರಾದ ಪ್ರಮೋದ್ ಶೆಟ್ಟಿ, ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಈ ವೇಳೆ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಡಿ.ಕೆ.ಶಿವಕುಮಾರ್ ‘ಊರ ಗೌರವʼ ವಿಶೇಷ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.ಹಕ್ಕೊತ್ತಾಯಗಳು:
ಕುಂದಾಪುರ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಕುಂದಾಪ್ರ ಕನ್ನಡ ಭವನ ಸ್ಥಾಪನೆ, ವೈದ್ಯಕೀಯ ಕಾಲೇಜು, ಬೈಂದೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ, ಬೆಂಗಳೂರಿನಲ್ಲಿರುವ ಕುಂದಾಪುರ ಮೂಲದ ಹೋಟೆಲ್ ಮತ್ತಿತರ ಸಣ್ಣ ಉದ್ಯಮಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಕುಂದಾಪ್ರ ಕನ್ನಡ ಪ್ರತಿಷ್ಠಾನದಿಂದ ಹಕ್ಕೊತ್ತಾಯ ಮಂಡಿಸುವುದಕ್ಕೆ ನಿರ್ಧರಿಸಲಾಗಿದೆ.