ಬಿಜೆಪಿ ಸೋಲಿಗೆ ನಾಯಕರು ಕಾರಣ: ಬಿವೈ ವಿಜಯೇಂದ್ರ

| Published : Jan 07 2024, 01:30 AM IST / Updated: Jan 07 2024, 01:14 PM IST

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆ ಸೋಲಿಗೆ ಬಿಜೆಪಿಯಾಗಲಿ, ಕಾರ್ಯಕರ್ತ ರರಾಗಲಿ ಕಾರಣವಲ್ಲ, ನಾಯಕರು ಕಾರಣ . ಇದರ ಜತೆಗೆ ವಿಧಾನಸಭಾ ಚುನಾವಣೆ ಸೋಲಿಗೆ ಸಾಕಷ್ಟು ಕಾರಣಗಳಿವೆ. ಸಂಪೂರ್ಣ ಶ್ರಮವನ್ನೂ ಹಾಕಬೇಕಿತ್ತು. ಆದರೆ ಅದು ಆಗಲಿಲ್ಲ ಎಂದು ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ

ಚಾಮರಾಜನಗರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷದ ನಾಯಕರೇ ಕಾರಣ. ಹಿರಿಯ ನಾಯಕರು ನಾನು, ನಾನು ಎಂದಿದ್ದು ಸೋಲಿಗೆ ಕಾರಣವಾಯ್ತು. ಪಕ್ಷದ ಹಿರಿಯ ನಾಯಕರು ಪರೋಕ್ಷವಾಗಿ ಸ್ವಾರ್ಥಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಕಾರ್ಯಕರ್ತರ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ನಾಯಕರು ಚುನಾವಣೆಗೆ ಮುನ್ನ ನಾವು, ನಾವು ಎನ್ನುತ್ತಾರೆ, ಚುನಾವಣೆ ಗೆದ್ದ ಬಳಿಕ ನಾನು, ನಾನು ಎನ್ನುತ್ತಾರೆ. ಅದನ್ನು ಬಿಟ್ಟು, ನಾವೆಲ್ಲರೂ ಒಂದೇ ಎಂದು ತಿಳಿದುಕೊಂಡಿದ್ದರೆ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ, ಕಳೆದ ವಿಧಾನಸಭಾ ಚುನಾವಣೆ ಸೋಲಿಗೆ ಬಿಜೆಪಿಯಾಗಲಿ, ಕಾರ್ಯಕರ್ತರರಾಗಲಿ ಕಾರಣವಲ್ಲ, ನಾಯಕರು ಕಾರಣ ಎಂದರು. ಇದರ ಜತೆಗೆ ವಿಧಾನಸಭಾ ಚುನಾವಣೆ ಸೋಲಿಗೆ ಸಾಕಷ್ಟು ಕಾರಣಗಳಿವೆ. ಸಂಪೂರ್ಣ ಶ್ರಮವನ್ನೂ ಹಾಕಬೇಕಿತ್ತು. ಆದರೆ ಅದು ಆಗಲಿಲ್ಲ ಎಂದರು.

ಸೋಮಣ್ಣ ಜತೆ ಮಾತನಾಡ್ತೇನೆ: ಪಕ್ಷದ ಹಿರಿಯ ಮುಖಂಡರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ್ ಅವರ ವಿಚಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಲ್ಲ. ಆದರೆ ಸಾಕಷ್ಟು ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಸೋಮಣ್ಣ ಅವರು ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ನನಗೆ ಗೊತ್ತಿಲ್ಲ. 

ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸೋಮಣ್ಣ ಹಿರಿಯರು, ಅವರ ಕೊಡುಗೆ ಪಕ್ಷಕ್ಕೆ ಸಾಕಷ್ಟು ಇದೆ. ಎರಡೆರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇತ್ತು, ಆದರೂ ಸೋಲಾಗಿದೆ. ಇದಕ್ಕೆ ಬೇರೆ ಬೇರೆ ಕಾರಣ ಇದೆ. ಸೋಮಣ್ಣ ಅವರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚು ಪ್ರಚಾರ ಮಾಡುತ್ತೇನೆ ಎಂದರು.

ಕಾಂಗ್ರೆಸ್‌ಗೆ ಭಯ: ಯಡಿಯೂರಪ್ಪ ಪುತ್ರ ವಿಜಯೇಂದ್ರ ಅಧ್ಯಕ್ಷನಾದ ಬಳಿಕ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ, 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲ್ಲಿದ್ದು, ಮುಂಬುರುವ ವಿಧಾನಸಭಾ ಚುನಾವಣೆಯಲ್ಲೂ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷನಾದ ಬಳಿಕ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಯಡಿಯೂರಪ್ಪ ಅವರು ನನಗೆ ಒಂದು ಮಾತು ಹೇಳಿದ್ದಾರೆ, ರಾಜ್ಯದಲ್ಲಿ ಅನೇಕ ಹಿರಿಯ ನಾಯಕರಿದ್ದರೂ ಪಕ್ಷ ನಿನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದೆ, ಒಂದು ದಿನವೂ ನೀನು ಮನೆಯಲ್ಲಿ ಕೂರಬಾರದು. ಲೋಕಭೆಯಲ್ಲಿ 28 ಕ್ಷೇತ್ರವನ್ನೂ ಗೆಲ್ಲಬೇಕು ಎಂದಿದ್ದಾರೆ, ಮುಂದೆ ಅವರೂ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿದರು.