ಬಿವೈವಿಗೆ ಸಂಸದ ಡಾ.ಸುಧಾಕರ್‌ ಬೆಂಬಲಿಸಲಿ : ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು

| N/A | Published : Feb 02 2025, 01:03 AM IST / Updated: Feb 02 2025, 04:15 AM IST

ಸಾರಾಂಶ

ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಬಗ್ಗೆ ಮಾತನಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಸಂಸದ ಡಾ.ಕೆ. ಸುಧಾಕರ್ ಅವರಿಗೆ ಎಚ್ಚರಿಕೆ ನೀಡಿದರು.

  ಚಿಕ್ಕಬಳ್ಳಾಪುರ : ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಬಗ್ಗೆ ಮಾತನಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಸಂಸದ ಡಾ.ಕೆ. ಸುಧಾಕರ್ ಅವರಿಗೆ ಎಚ್ಚರಿಕೆ ನೀಡಿದರು.

ನಗರದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಶುಕ್ರವಾರ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿಯನ್ನು ಅಭಿನಂದಿಸಿ ಶುಭ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ನಮ್ಮ ರಾಜ್ಯಾಧ್ಯಕ್ಷರು. ಪಕ್ಷ ಬೆಳೆಯಲಿ, ಯುವಕರು ಬೆಳೆಯಲಿ. ಸರ್ಕಾರ ಬರಲಿ ಅಂತ ಹಗಳಿರುಳು ದುಡಿಯುತ್ತಿದ್ದಾರೆ. ಅವರ ವಿರುದ್ಧ ಸಂಸದ ಡಾ.ಕೆ. ಸುಧಾಕರ್ ಮಾತನಾಡಿರುವುದು ಸರಿಯಲ್ಲ. ವಿಜಯೇಂದ್ರೆಗೆ ಸುಧಾಕರ್ ಅವರೇ ಸಪೋರ್ಟ್ ಮಾಡಿ ಅವರ ಕೈಬಲಪಡಿಸಬೇಕು ಎಂದರು.

ಸುಬ್ಬಾರೆಡ್ಡಿಗೆ ಬೆಂಬಲಿಸಿದ್ದು...

ಸಂಸದ ಸುಧಾಕರ್ ಅವರೇ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಾಗೇಪಲ್ಲಿಯಲ್ಲಿ ಕಾಂಗ್ರೆಸ್‌ನ ಸುಬ್ಬಾರೆಡ್ಡಿಗೆ ಬೆಂಬಲಿಸಿ ನನ್ನ ಸೋಲಿಸಿದ ಬಗ್ಗೆಯೂ ಹೈಕಮಾಂಡ್ ಗೆ ಗೊತ್ತು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ. ಬೆರಳೆಣಿಕೆ ಮಂದಿ ಮಾತ್ರ ರಾಜ್ಯಾಧ್ಯಕ್ಷರನ್ನು ವಿರೋಧ ಮಾಡ್ತಿದ್ದಾರೆ. ವಿರೋಧ ಮಾಡೋವರು ಅವರ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಿ ಬನ್ನಿ ಎಂದರು.

ಪಕ್ಷ ಕೊಟ್ಟಿದ್ದನ್ನು ನೆನಪಿಸಿಕೊಳ್ಳಿ

ಈಗಲೂ ಕಾಲ ಮಿಂಚಿಲ್ಲ, ಸಂಸದ ಸುಧಾಕರ್ ಅವರೇ ಮನಸ್ಸಿನಲ್ಲಿ ಏನೇ ಇದ್ರೂ ಬಿಡಿ. ರಾಜ್ಯಾಧ್ಯಕ್ಷರಿಗೆ ಗೌರವ ಕೊಡಿ. ನೀವು ನ್ಯಾಷನಲ್ ಲೀಡರ್ ಆದರೂ ಒಂದು ಮಾತು ಹೇಳ್ತೀನಿ ಬಿಜೆಪಿ ನಿಮಗೆ ಮಂತ್ರಿ, ಸಂಸದ ಸ್ಥಾನ ಎಲ್ಲವೂ ಕೊಟ್ಟಿದೆ ಎಂದು ನೆನಪಿಸಿದರು. ಈ ವೇಳೆ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ಮತ್ತಿತರರು ಇದ್ದರು.