ಸರ್ಕಾರಿ ಜಾಗದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಲಿ, ಅದು ಬಿಟ್ಟು ಧರ್ಮ ಧ್ವಜ ಹಾರಿಸುವಂತಿಲ್ಲ: ಪಿ.ರವಿಕುಮಾರ್

| Published : Jan 29 2024, 01:30 AM IST

ಸರ್ಕಾರಿ ಜಾಗದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಲಿ, ಅದು ಬಿಟ್ಟು ಧರ್ಮ ಧ್ವಜ ಹಾರಿಸುವಂತಿಲ್ಲ: ಪಿ.ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ, ಜೆಡಿಎಸ್‌ನಿಂದ ರಾಜಕೀಯ, ಹನುಮಧ್ವಜ ಹಾರಾಟ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್‌ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆರಗೋಡು ಗ್ರಾಮಕ್ಕೆ ಬಂದು ರಾಜಕೀಯ ಮಾಡುವುದನ್ನು ಬಿಡಬೇಕು: ವಿಪಕ್ಷ ನಾಯಕ ಆರ್.ಅಶೋಕ್, ಎಚ್ಡಿಕೆಗೆ ಶಾಸಕ ರವಿಕುಮಾರ್ ಎಚ್ಚರಿಕೆ. ನಾನೂ ಕೂಡ ರಾಮ ಭಕ್ತನೇ. ಕಮಲ ಮಂದಿರ ನಿರ್ಮಾಣಕ್ಕೆ ₹1 ಲಕ್ಷ ದೇಣಿಗೆ ನೀಡಿದ್ದೇನೆ.

ಕನ್ನಡಪ್ರಭ ವಾರ್ತೆ ಮಂಡ್ಯಕೆರಗೋಡು ಗ್ರಾಮದಲ್ಲಿ ಕೇಸರಿ ಧ್ವಜ ಹಾರಿಸಿರುವ ಬಿಜೆಪಿ, ಜೆಡಿಎಸ್ ಮುಖಂಡರು, ಗ್ರಾಮದ ಕೆಲ ಯುವಕರಲ್ಲಿ ಗೊಂದಲ ಉಂಟು ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜವಾದ ರಾಷ್ಟ್ರಭಕ್ತರಾದವರು ಕೇಸರಿ ಧ್ವಜ ತೆಗೆದು ರಾಷ್ಟ್ರ ಧ್ವಜ ಹಾರಿಸಲಿ. ಧ್ವಜ ಹಾರಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನವರು ಗ್ರಾಮದಲ್ಲಿ ಸಂಘರ್ಷ ಉಂಟು ಮಾಡಬಾರದು ಎಂದು ಆಗ್ರಹಿಸಿದರು.

ಕೇಸರಿ ಧ್ವಜದ ಹೆಸರಿನಲ್ಲಿ ಬಿಜೆಪಿಯವರು ಧರ್ಮ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಸಂಘರ್ಷಕ್ಕೆ ಮುನ್ನುಡಿ ಬರೆದು ನಾಟಕ ಶುರು ಮಾಡಿದ್ದಾರೆ. ಇದರಿಂದ ಯಾವುದೇ ಅನಾಹುತ, ಸಂಘರ್ಷ ನಡೆದರೂ ಇದಕ್ಕೆ ಅವರೇ ಕಾರಣ ಎಂದು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ 5 ಮಂದಿ ಗುಂಪು ನನ್ನ ಬಳಿ ಬಂದು ಗರುಡಗಂಭ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಇಲ್ಲಿ ಹೈಟೆಕ್ ಬಸ್ ನಿಲ್ದಾಣ ಮಾಡುವುದಾಗಿ ತಿಳಿಸಿ ಈ ಜಾಗ ಬೇಡ. ಬೇರೆ ಕಡೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದೆ ಎಂದರು.

ಈಗಲೇ ಬಸ್ ನಿಲ್ದಾಣ ಆಗಲ್ಲ. ಐದು ವರ್ಷ ಬೇಕು ಎಂದು ತಿಳಿದ ಯುವಕರು, ಧ್ವಜಸ್ತಂಭ ನಿರ್ಮಾಣ ಮಾಡಿದ್ದಾರೆ. ನಾನು ಭರವಸೆ ಕೊಟ್ಟ ಎರಡು ದಿನಗಳಲ್ಲೇ ಸಾರಿಗೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸಿದ್ದೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಬಸ್ ನಿಲ್ದಾಣ ನಿರ್ಮಾಣಕ್ಕೆ ₹6 ಕೋಟಿಗಾಗಿ ಬೇಡಿಕೆ ಇಟ್ಟಿದೆ ಎಂದರು.

ಸಿಎಂ ಕಚೇರಿಯಿಂದ ಅನುಮತಿ ನೀಡಿ ಲೋಕೋಪಯೋಗಿ ಇಲಾಖೆಗೆ ₹6 ಕೋಟಿ ಬಿಡುಗಡೆ ಮಾಡಿರುವುದಾಗಿ ಪತ್ರ ಬಂದಿದೆ. ಒಟ್ಟಾರೆ ₹25 ಕೋಟಿ ಬಂದಿದ್ದು, ಇದರಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ₹9 ಕೋಟಿ, ನಗರದ ರಸ್ತೆಗೆ ₹9 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.

ಧ್ವಜಸ್ತಂಭ ನಿರ್ಮಾಣ, ಗ್ರಾಪಂನಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸಲು ಅರ್ಜಿ ಸಲ್ಲಿಸಿದ್ದರು. ಪಂಚಾಯ್ತಿಯಲ್ಲಿ ಬಹುಮತದ ಆಧಾರದ ಮೇಲೆ ಅನುಮತಿ ನೀಡಿದೆ. ಆದರೆ, ಇವರು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ದೂರಿದರು.

ಖಾಸಗಿ ಜಾಗದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಿ ಅದಕ್ಕೆ ನಾನೂ ₹2 ಲಕ್ಷ ದೇಣಿಗೆ ನೀಡುತ್ತೇನೆ. ನಮ್ಮ ಸಚಿವರನ್ನೇ ಕರೆತಂದು ಉದ್ಘಾಟನೆ ಮಾಡಿಸುತ್ತೇನೆ. ಅದು ಬಿಟ್ಟು ಸರ್ಕಾರಿ ಜಾಗದಲ್ಲಿ ಕೇಸರಿ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಲಿ. ಅದು ಬಿಟ್ಟು ಕೇಸರಿ ಧ್ವಜ ಹಾರಿಸುವಂತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ನಗರಾಧ್ಯಕ್ಷ ಎಚ್.ಕೆ. ರುದ್ರಪ್ಪ, ನಗರಸಭಾ ಸದಸ್ಯರಾದ ಶ್ರೀಧರ್, ಪೂರ್ಣಿಮಾ, ಗೀತಾ ಇತರರು ಇದ್ದರು.

ಮಾನ ಮರ್ಯಾದೆ ಇದ್ದರೆ ಗ್ರಾಮಕ್ಕೆ ಬಂದು ರಾಜಕೀಯ ಮಾಡಬೇಡಿ

ಹನುಮಧ್ವಜ ಹಾರಾಟ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್‌ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆರಗೋಡು ಗ್ರಾಮಕ್ಕೆ ಬಂದು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಶಾಸಕ ಪಿ.ರವಿಕುಮಾರ್ ಎಚ್ಚರಿಕೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್‌.ಅಶೋಕ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಇಲ್ಲಿಗೇಕೆ ಬರಬೇಕು. ಜನರನ್ನು ರೊಚ್ಚಿಗೇಳಿಸಲು ಬರಬೇಕಾ?. ಮಾನ ಮರ್ಯಾದೆ ಇದ್ದರೆ ನೀವು ಇಲ್ಲಿ ಬಂದು ರಾಜಕೀಯ ಮಾಡುವುದನ್ನು ಬಿಡಿ, ಒಂದು ವೇಳೆ ಏನಾದರೂ ಸಂಘರ್ಷ ನಡೆದಲ್ಲಿ ನೀವು ಜವಾಬ್ದಾರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ನಾನೂ ಕೂಡ ರಾಮ ಭಕ್ತನೇ. ಕಮಲ ಮಂದಿರ ನಿರ್ಮಾಣಕ್ಕೆ ₹1 ಲಕ್ಷ ದೇಣಿಗೆ ನೀಡಿದ್ದೇನೆ. ಮೊನ್ನೆ ಲೇಬರ್ ಕಾಲೋನಿಯಲ್ಲಿ ನಡೆದ ರಾಮಮಂದಿರಕ್ಕೆ ₹1 ಲಕ್ಷ ದೇಣಿಗೆ ನೀಡಿದ್ದೇನೆ. ಹೊಸಬೂದನೂರಿನಲ್ಲಿರುವ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬೂದನೂರು ಉತ್ಸವ ಮಾಡುತ್ತಿದ್ದೇನೆ ಎಂದರು.ಘರ್ಷಣೆಗೆ ರಘುನಂದನ್-ರಾಮಚಂದ್ರ ಕಾರಣ:

ಧ್ವಜ ಸಂಘರ್ಷವನ್ನು ಹುಟ್ಟುಹಾಕಿದ್ದು ಜೆಡಿಎಸ್‌ನ ರಘುನಂದನ್ ಮತ್ತು ರಾಮಚಂದ್ರ ಅವರು. ಇವರು ಯುವಜನರನ್ನು ಎತ್ತಿಕಟ್ಟಿ ತಲೆಕೆಡಿಸಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.ಮುಂದಿನ ವಿಧಾನಸಭಾ ಚುನಾವಣೆಗೆ ರಘುನಂದನ್ ಮತ್ತು ರಾಮಚಂದ್ರ ನಡುವೆ ಪೈಪೋಟಿ ಇದೆ. ರಘುನಂದನ್ ತೆವಲಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳನ್ನು ಮಾಡಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.