ಮೊದಲು ಎಚ್‌ಡಿಕೆ ಭವಿಷ್ಯ ನೆಟ್ಟಗಿದೆಯೋ ನೋಡಿಕೊಳ್ಳಲಿ : ಕೃಷಿ ಸಚಿವ ಚಲುವರಾಯ ಸ್ವಾಮಿ

| N/A | Published : Feb 06 2025, 12:18 AM IST / Updated: Feb 06 2025, 04:25 AM IST

N. Chaluvarayaswamy

ಸಾರಾಂಶ

ಕುಮಾರಸ್ವಾಮಿ ಅವರು ಕಾಂಗ್ರೆಸ್ ಭವಿಷ್ಯ ಹೇಳುವುದಿರಲಿ, ಮೊದಲು ಅವರ ಭವಿಷ್ಯವನ್ನು ಸರಿಯಾಗಿ ಬರೆದುಕೊಳ್ಳಲಿ ಎಂದು 2028ರವರೆಗೆ ಕಾಂಗ್ರೆಸ್ ಸರ್ಕಾರ ಇರೋಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ನೀಡಿದರು.

 ಮಂಡ್ಯ :  ಕುಮಾರಸ್ವಾಮಿ ಅವರು ಕಾಂಗ್ರೆಸ್ ಭವಿಷ್ಯ ಹೇಳುವುದಿರಲಿ, ಮೊದಲು ಅವರ ಭವಿಷ್ಯವನ್ನು ಸರಿಯಾಗಿ ಬರೆದುಕೊಳ್ಳಲಿ ಎಂದು 2028ರವರೆಗೆ ಕಾಂಗ್ರೆಸ್ ಸರ್ಕಾರ ಇರೋಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ನೀಡಿದರು.

ಮೇಲುಕೋಟೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಭವಿಷ್ಯ ಹೇಳಲು ಶುರುಮಾಡಿದ್ದಾರೆ. ಬಹುಶಃ ಭವಿಷ್ಯ ಹೇಳುವ ಬಗ್ಗೆ ತರಬೇತಿ ತೆಗೆದುಕೊಂಡು ಬಂದಿರಬೇಕು. ಬೇರೆಯವರ ಭವಿಷ್ಯದ ಬಗ್ಗೆ ಮಾತನಾಡುವ ಮುನ್ನ ಅವರ ಭವಿಷ್ಯ ಹೇಗಿದೆ ಎಂಬುದನ್ನು ಒಮ್ಮೆ ನೋಡಿಕೊಳ್ಳಲಿ ಎಂದು ಹಾಸ್ಯಮಯವಾಗಿ ಕುಟುಕಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಯಾವಾಗಲೂ ಐದು ವರ್ಷ ಪೂರ್ಣ ಮಾಡಿಲ್ಲ. ಅವರಿಗೇ ಅಧಿಕಾರ ಕೊಟ್ಟರೂ ಸಂಪೂರ್ಣ ಐದು ವರ್ಷ ಮಾಡಲಿಲ್ಲ. ಅದನ್ನೇ ಅವರು ಬೇರೆಯವರಿಗೆ ಹೋಲಿಕೆ ಮಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವನ್ನು ಅಸ್ಥಿರತೆಯ ಆಲೋಚನೆ ಮಾಡುವುದು ಬಿಟ್ಟರೆ ಬೇರೆ ಆಲೋಚನೆಗಳೇ ಅವರ ತಲೆಯಲ್ಲಿ ಇಲ್ಲ. ಎಲ್ಲವೂ ನಮ್ಮ ಕೈಯಲ್ಲಿ ಇರೋಲ್ಲ. ಎಲ್ಲವೂ ಆಕಸ್ಮಿಕ. ಪದೇ ಪದೇ ಸರ್ಕಾರದ ಅಸ್ಥಿರತೆ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದರು.

ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಕೇಳಿದಾಗ, ಯಾರು ಏನು ಮಾತನಾಡಿದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ಇವರ ತೀರ್ಮಾನವೇ ಅಂತಿಮ. ನಮ್ಮ ಸಿಎಂ, ಡಿಸಿಎಂ ಸೌಹಾರ್ದತೆಯಿಂದ ಕೆಲಸ ಮಾಡುತ್ತಿದ್ದಾರೆ. ಕೆಲವರು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರು ಏನೇ ಹೇಳಿದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

ನಾಲೆ ದುರಂತ: ಮೃತರ ಕುಟುಂಬಗಳಿಗೆ ಪರಿಹಾರ ಭರವಸೆ

ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ಸಾವನ್ನಪ್ಪಿದ ಮೂವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಪ್ರಯತ್ನಿಸುತ್ತೇನೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

ಮೇಲುಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಕುಟುಂಬಗಳಿಗೆ ಶಾಸಕ ರವಿಕುಮಾರ್ ಅವರು ವೈಯಕ್ತಿಕವಾಗಿ ಒಂದು ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಹೆಚ್ಚಿನ ಪರಿಹಾರ ಕೊಡಿಸಲು ಸಿಎಂ ಬಳಿ ಮಾತನಾಡಿ ಪ್ರಯತ್ನ ಮಾಡುತ್ತೇನೆ ಎಂದರು.

ಕಾರನ್ನು ಚಾಲನೆ ಮಾಡುವಾಗ ಯುವಕರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಕೆಟ್ಟಿರುವ ರಸ್ತೆಗಳಲ್ಲೂ ಅಪಘಾತಗಳಾಗುತ್ತವೆ. ಚೆನ್ನಾಗಿರುವ ರಸ್ತೆಗಳಲ್ಲೂ ಅಪಘಾತಗಳು ಸಂಭವಿಸುತ್ತವೆ. ಚಾಲನೆ ಮಾಡುವಾಗ ಜಾಗರೂಕತೆಯಿಂದ ಇದ್ದರೆ ಅವಘಡಗಳು ಸಂಭವಿಸುವುದಿಲ್ಲ. ಪ್ರಾಣ ಹಾನಿಯಾದಾಗ ಎಷ್ಟೇ ಪರಿಹಾರ ಕೊಟ್ಟರೂ ಆ ಕುಟುಂಬಕ್ಕೆ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ಯುವಕರೂ ಎಚ್ಚರಿಕೆಯಿಂದ ಓಡಾಡುವಂತೆ ಮನವಿ ಮಾಡುತ್ತೇನೆ ಎಂದರು.

ವಿಸಿ ನಾಲೆಗೆ ತಡೆಗೋಡೆ ನಿರ್ಮಾಣ ಮಾಡದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈಗಾಗಲೇ ಅಂದಾಜು ವೆಚ್ಚದ ವರದಿ ಸಿದ್ದವಾಗಿದೆ. ಆ ಜಾಗದಲ್ಲಿ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಗುತ್ತಿಗೆದಾರ ವಿಳಂಬ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ತಕ್ಷಣವೇ ಮಾಡೋದಕ್ಕೆ ಸೂಚಿಸುವುದಾಗಿ ತಿಳಿಸಿದರು.

ಪಾಂಡವಪುರದ ಬಳಿ ಅಪಘಾತ ಆಗಿತ್ತು, ಅಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಎಲ್ಲಲ್ಲಿ ಮುಖ್ಯವಾಗಿ ಆಗಬೇಕೋ ಅಲ್ಲಿ ಮಾಡುವಂತೆ ಹೇಳಿದ್ದೇನೆ. ಈ ತಿಂಗಳೊಳಗೆ ಮಂಜೂರಾತಿ ಕೊಡಲು ಜಿಲ್ಲಾಧಿಕಾರಿಗೂ ತಿಳಿಸಿದ್ದೇನೆ ಎಂದರು.