ಸಾರಾಂಶ
ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಜಿಲ್ಲೆಯೊಳಗೆ ಅಸ್ತಿತ್ವ ಕಳೆದುಕೊಂಡಿರುವ ಜೆಡಿಎಸ್‌ಗೆ ಪುನಶ್ಚೇತನ ನೀಡಲು ಜೆಡಿಎಸ್ ವರಿಷ್ಠರೇ ಸ್ಪರ್ಧಿಸುವಂತೆ ಜಿಲ್ಲಾ ನಾಯಕರು ಆಹ್ವಾನ ನೀಡಿದ್ದರಾದರೂ ಅಧಿಕೃತ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲದಿರುವಂತೆ ಕಂಡುಬರುತ್ತಿದೆ.ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಸಿಗುವ ಬಗ್ಗೆ ಆರಂಭದಲ್ಲಿ ಅನುಮಾನವಿತ್ತು. ಈಗ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಆದರೆ, ಜಿಲ್ಲಾ ನಾಯಕರ ಆಹ್ವಾನದ ಮೇರೆಗೆ ಮಂಡ್ಯದಿಂದ ಕಣಕ್ಕಿಳಿಯಲು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಸಕ್ತಿ ತೋರಿಸಿಲ್ಲ. ಇನ್ನು ಮಂಡ್ಯ ಅಖಾಡ ಪ್ರವೇಶಿಸುವ ಕುರಿತಂತೆ ಎಚ್.ಡಿ..ಕುಮಾರಸ್ವಾಮಿ ಇನ್ನೂ ತಮ್ಮ ನಿರ್ಧಾರ ಖಚಿತಪಡಿಸಿಲ್ಲ. ಕೊನೆಯ ಕ್ಷಣದ ಬೆಳವಣಿಗೆ ಏನಾದರೂ ನಡೆದರೆ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ರಂಗ ಪ್ರವೇಶಿಸಬಹುದು. ಇಲ್ಲದಿದ್ದರೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸ್ಪರ್ಧೆ ಖಚಿತವೆಂದು ಹೇಳಲಾಗುತ್ತಿದೆ.
ಮಂತ್ರಿಸ್ಥಾನ ಭರವಸೆ ಸಿಕ್ಕರೆ ಸ್ಪರ್ಧೆ?ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಮಂತ್ರಿಸ್ಥಾನ ಸಿಗುವುದು ಖಚಿತವಾದರೆ ಮಂಡ್ಯ ಅಖಾಡ ಪ್ರವೇಶಿಸುವರೆಂದು ಹೇಳಲಾಗುತ್ತಿದೆ. ಈ ವಿಷಯವಾಗಿ ಪ್ರಧಾನಿ ನರೇಂದ್ರಮೋದಿ, ಅಮಿತ್‌ಶಾ ಜೊತೆ ಚರ್ಚೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದರೆ ಎಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎನ್ನಲಾಗುತ್ತಿದೆ.
ಇನ್ನು ಎರಡು ದಿನದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಅಂತಿಮವಾಗಿ ತಮ್ಮ ನಿರ್ಧಾರ ಪ್ರಕಟಿಸಬಹುದೆಂದು ಹೇಳಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಜೆಡಿಎಸ್ ಪಟ್ಟಿಗೆ ಎದುರುನೋಡುವಂತಾಗಿದೆ.ಚುನಾವಣೆ ನಂತರದ ಮೊದಲ ಸಭೆ:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮಾ.೧೫ರಂದು ಮಂಡ್ಯ ನಗರ ಅಂಬೇಡ್ಕರ್ ಭವನದಲ್ಲಿ ಸಭೆ ಆಯೋಜಿಸಲಾಗಿದೆ. ೨೦೨೩ರ ಚುನಾವಣೆಯ ನಂತರ ಎಚ್‌ಡಿಕೆ ಅಧ್ಯಕ್ಷತೆಯಲ್ಲಿ ಸ್ಥಳೀಯ ನಾಯಕರು, ಮುಖಂಡರು, ಕಾರ್ಯಕರ್ತರ ಜೊತೆ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಗೆದ್ದು ಬೀಗಿದ್ದ ಜೆಡಿಎಸ್, ಕಳೆದ ಚುನಾವಣೆಯಲ್ಲಿ ಜೆಡಿಎಸ್ ೬ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದು ದಳಪತಿಗಳನ್ನು ಕಂಗೆಡಿಸುವಂತೆ ಮಾಡಿತ್ತು. ಫಲಿತಾಂಶದ ನಂತರ ಪಕ್ಷ ಸಂಘಟನೆಗೆ ಆಸಕ್ತಿ ತೋರಲಿಲ್ಲ. ಮುಖಂಡರು,, ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬುವ ಕೆಲಸಕ್ಕೂ ಮುಂದಾಗಲಿಲ್ಲ. ಕಳೆದುಹೋಗಿರುವ ಪಕ್ಷಕ್ಕೆ ಮತ್ತೆ ನೆಲೆ ದೊರಕಿಸಿಕೊಡುವ ಪ್ರಯತ್ನ ವರಿಷ್ಠರಿಂದ ನಡೆಯಲೇ ಇಲ್ಲ. ಜೆಡಿಎಸ್ ಭದ್ರಕೋಟೆ ಛಿದ್ರಗೊಂಡಿದ್ದರಿಂದ ತೀವ್ರ ನಿರಾಸೆಗೊಳಗಾದ ದಳಪತಿಗಳು ಮಂಡ್ಯ ಕಡೆ ಮುಖ ಮಾಡದೆ ರಾಜಧಾನಿ ಸೇರಿಕೊಂಡರು. ಕೆಲವೊಂದು ಶುಭ ಸಮಾರಂಭಗಳಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಂದು ಹೋಗುವುದು ಬಿಟ್ಟರೆ ಪಕ್ಷ ಸಂಘಟನೆಗೆ ಉತ್ಸಾಹ, ಆಸಕ್ತಿ, ಪ್ರಾಮುಖ್ಯತೆಯನ್ನೇ ನೀಡಲಿಲ್ಲ.ಬಿಜೆಪಿ-ಜೆಡಿಎಸ್ ನಡುವೆ ಹೊಂದಾಣಿಕೆಯಾದ ನಂತರವೂ ಜೆಡಿಎಸ್ ವರಿಷ್ಠರು ಎರಡೂ ಪಕ್ಷದವರನ್ನು ಪರಸ್ಪರ ಹೊಂದಾಣಿಕೆಯಿಂದ ಚುನಾವಣಾ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸುವ ಪ್ರಯತ್ನವನ್ನೂ ಮಾಡಲೇ ಇಲ್ಲ. ನೆಲೆ ಕಳೆದುಕೊಂಡಿರುವ ಕ್ಷೇತ್ರಗಳಲ್ಲಿ ಪಕ್ಷವನ್ನು ಪುನಶ್ಚೇತನ ಕಂಡುಕೊಳ್ಳುವಂತೆ ಮಾಡುವುದಕ್ಕೆ ಕಾರ್ಯಯೋಜನೆಯನ್ನಾಗಲೀ, ಕಾರ್ಯಕ್ರಮವನ್ನಾಗಲಿ ರೂಪಿಸಲೇ ಇಲ್ಲ.
ಮುಖಂಡರು-ಕಾರ್ಯಕರ್ತರಲ್ಲಿ ಅಸಮಾಧಾನ:ಕೆರಗೋಡು ಹನುಮ ಧ್ವಜ ವಿಚಾರವಾಗಿ ನಡೆದ ಹೋರಾಟಕ್ಕೆ ಆಗಮಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸುವುದರೊಂದಿಗೆ ಪಕ್ಷದ ಮುಖಂಡರು-ಕಾರ್ಯಕರ್ತರ ಅಸಮಾಧಾನಕ್ಕೆ ಗುರಿಯಾಗಿದ್ದರು. ಬಿಜೆಪಿಯೊಂದಿಗೆ ಮೈತ್ರಿಯಾದ ಬಳಿಕ ಜೆಡಿಎಸ್ ನಾಯಕರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆಯೂ ಬೇಸರ, ಅಸಹಾಯಕತೆ, ಮೌನ, ಅತೃಪ್ತಿಯನ್ನು ಪ್ರದರ್ಶಿಸುತ್ತಲೇ ಬಂದಿದ್ದರು.
ಲೋಕಸಭೆ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಜಿಲ್ಲೆಯೊಳಗೆ ಪ್ರವಾಸ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದರೂ ಇದುವರೆಗೂ ಕಾರ್ಯೋನ್ಮುಖರಾಗಿಲ್ಲ.೨೦೧೮ರ ವಿಧಾನಸಭಾ ಚುನಾವಣಾ ಗೆಲುವಿನ ನಂತರದ ಐದು ವರ್ಷಗಳಲ್ಲಿ ಜೆಡಿಎಸ್ ಒಂದೇ ಒಂದು ಗೆಲುವನ್ನು ಕಾಣಲಾಗಲಿಲ್ಲ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದರೆ, ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರು ವಿಜಯಿಯಾಗಿದ್ದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ದಿನೇಶ್ ಗೂಳಿಗೌಡ, ದಕ್ಷಿಣ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಗೆಲುವಿನ ನಗೆ ಬೀರಿದ್ದರು.
೨೦೨೪ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಘಟಾನುಘಟಿ ನಾಯಕರು ಪರಾಭವಗೊಂಡರು. ಹಾಗಾಗಿ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಗೆಲುವು ಅಗತ್ಯ ಮತ್ತು ಅನಿವಾರ್ಯವಾಗಿದೆ. ಅದಕ್ಕಾಗಿ ಬಿಜೆಪಿ ಬೆಂಬಲವನ್ನೂ ಪಡೆದುಕೊಂಡು ಕಾಂಗ್ರೆಸ್ ಮಣಿಸುವುದಕ್ಕೆ ಮುಂದಾಗಿದೆ. ಜೆಡಿಎಸ್‌ಗೆ ಇದು ಅದೃಷ್ಟಪರೀಕ್ಷೆಯಾಗಿರದೆ ಅಗ್ನಿಪರೀಕ್ಷೆಯಾಗಿದೆ.ನಾಳೆ ಮಂಡ್ಯಕ್ಕೆ ಎಚ್‌ಡಿಕೆ, ನಿಖಿಲ್ಲೋಕಸಭೆ ಚುನಾವಣೆ ಸಂಬಂಧ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ (ಮಾ.೧೫) ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಅಂದು ಬೆಳಗ್ಗೆ ೧೦ ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಸಭೆ ಆಯೋಜಿಸಲಾಗಿದ್ದು ಜಿಲ್ಲೆಯ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ,ನಗರಸಭೆ, ಪುರಸಭೆ ಹಾಗೂ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ತಿಳಿಸಿದ್ದಾರೆ.