ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಜಾರಿ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543ರಿಂದ ಗರಿಷ್ಠ 850ಕ್ಕೇರಿಸಲು ಅನುವು ಮಾಡಿಕೊಡುವ ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ : ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಜಾರಿ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543ರಿಂದ ಗರಿಷ್ಠ 850ಕ್ಕೇರಿಸಲು ಅನುವು ಮಾಡಿಕೊಡುವ ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಏ.16, 17ರಂದು ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಿ, ಅಂಗೀಕಾರ ಪಡೆಯುವ ಉದ್ದೇಶ ಹೊಂದಿರುವ ಈ ವಿಧೇಯಕಗಳ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಸಂಸದರೊಂದಿಗೆ ಹಂಚಿಕೊಂಡಿದೆ.

ಪ್ರಸ್ತಾವಿತ ಕ್ಷೇತ್ರ ಮರುವಿಂಡಣೆಯ ವೇಳೆ, ಹಾಲಿ ಪ್ರತಿ ರಾಜ್ಯಗಳು ಹೊಂದಿರುವ ಲೋಕಸಭಾ ಸ್ಥಾನಗಳಿಗೆ ಶೇ.50ರಷ್ಟು ಸ್ಥಾನಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗುವುದು ಎಂದು ಕೇಂದ್ರದ ಹಲವು ಸಚಿವರು ಪರೋಕ್ಷವಾಗಿ ಸುಳಿವು ನೀಡುತ್ತಾ ಬಂದಿದ್ದರು. ಮತ್ತೊಂದೆಡೆ ಜನಸಂಖ್ಯೆ ನಿಯಂತ್ರಣ ಮಾಡಿದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಮಂಗಳವಾರ ಬಿಡುಗಡೆಯಾದ ಕರಡು ವಿಧೇಯಕದಲ್ಲಿ ಶೇ.50ರಷ್ಟು ಅನುಪಾತದಲ್ಲಿ ಸೀಟುಗಳ ಸಂಖ್ಯೆ ಏರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರ ಸೀಟುಗಳ ಪ್ರಮಾಣ ಏರಿಕೆಗೆ ಯಾವ ಮಾನದಂಡ ಅನುಸರಿಸಲಿದೆ ಎಂಬ ಕುತೂಹಲ ಮೂಡಿದೆ.

2011ರ ಗಣತಿ:

ಕೇಂದ್ರ ಸರ್ಕಾರದ ಪ್ರಸ್ತಾವಿತ ಕರಡು ವರದಿ ಅನ್ವಯ, 2011ರ ಜನಗಣತಿ ಅಂಕಿ ಅಂಶ ಆಧರಿಸಿ ವಿವಿಧ ರಾಜ್ಯಗಳಲ್ಲಿನ ಲೋಕಸಭಾ ಸ್ಥಾನ ಗರಿಷ್ಠ 815 ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಲ ಗರಿಷ್ಠ 35ಕ್ಕೆ ಏರಿಸಲಾಗುವುದು. ಈ ಮೂಲಕ ಒಟ್ಟಾರೆ ಸ್ಥಾನ ಬಲವನ್ನು ಗರಿಷ್ಠ 850 ದಾಟದಂತೆ ನೋಡಿಕೊಳ್ಳಲಾಗುವುದು.

ಸಮಾನುಪಾತದಡಿ ಹಂಚಿಕೆ:

ಕರಡು ವಿಧೇಯಕದಲ್ಲಿ, ಸ್ಥಾನಗಳ ಏರಿಕೆ ಬಳಿಕ ಲೋಕಸಭೆಯ ನಿರ್ದಿಷ್ಟ ಸ್ಥಾನಬಲದ ಬಗ್ಗೆಯಾಗಲೀ ಅಥವಾ ಬಹಳದಿನಗಳಿಂದ ಚರ್ಚೆಯಲ್ಲಿದ್ದ ಹಾಲಿ ಸ್ಥಾನದ ಬಲದ ಶೇ.50ರಷ್ಟು ಏರಿಕೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ. ಕಾರಣ, ಲೋಕಸಭಾ ಸ್ಥಾನಗಳ ಅಂತಿಮ ಬಲವನ್ನು ಕೇಂದ್ರ ಸರ್ಕಾರ ರಚಿಸಲಿರುವ ಕ್ಷೇತ್ರ ಮರುವಿಂಗಡಣಾ ಆಯೋಗ ನಿರ್ಧರಿಸಲಿದೆ. ಈ ಕಾರಣಕ್ಕಾಗಿಯೇ ಲೋಕಸಭೆಯ ಖಚಿತ ಸ್ಥಾನಬಲ ಅಥವಾ ಶೇ.50ರಷ್ಟು ಏರಿಕೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಮೂಲಗಳು ಹೇಳಿವೆ.

ದಕ್ಷಿಣಕ್ಕೆ ಲಾಭ ಆಗುತ್ತಾ?:

ಜನಸಂಖ್ಯೆಯ ಲೆಕ್ಕಾಚಾರದಲ್ಲಿ ಸೀಟು ಹಂಚಿಕೆ ಬದಲಾಗಿ, ಹಾಲಿ ರಾಜ್ಯಗಳು ಹೊಂದಿರುವ ಸ್ಥಾನಗಳಿಗೆ ಶೇ.50ರಷ್ಟು ಪ್ರಮಾಣದಲ್ಲಿ ಸೀಟು ಏರಿಕೆಯನ್ನು ಕೇಂದ್ರ ಸರ್ಕಾರ ಮಾಡಲಿದೆ ಎನ್ನಲಾಗಿದೆ. ಇದೇ ಲೆಕ್ಕಾಚಾರದಲ್ಲಿ ಸ್ಥಾನ ಬಲ ಹೆಚ್ಚಳ ಮಾಡಿದರೆ 1971ಕ್ಕೆ ಹೋಲಿಸಿದರೆ 2011ರ ವೇಳೆಗೆ ಜನಸಂಖ್ಯೆ ಕಡಿತಕ್ಕೆ ಶ್ರಮಿಸಿದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗದು. ಏಕೆಂದರೆ ದಕ್ಷಿಣದ ರಾಜ್ಯಗಳು ಈಗಲೂ 1971ರ ಮಾನದಂಡದ ಅನ್ವಯವೇ ಸೀಟು ಹಂಚಿಕೆ ಮಾಡಬೇಕು ಎಂಬ ನಿಲುವು ಹೊಂದಿವೆ. ಹೀಗಾಗಿ ಶೇ.50ರಷ್ಟು ಪ್ರಮಾಣದಲ್ಲಿ ಏರಿಕೆ ದಕ್ಷಿಣದ ರಾಜ್ಯಗಳ ಬೇಡಿಕೆಯನ್ನು ಈಡೇರಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದ್ದು ಎನ್ನಲಾಗಿದೆ.

ಹೀಗಾಗಿ ಈ ಬದಲಾವಣೆ ಕ್ಷೇತ್ರ ಮರುವಿಂಗಡನೆ ಕುರಿತು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ದೊಡ್ಡಮಟ್ಟದ ಎತ್ತಿದ್ದ ಧ್ವನಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದು ಹೇಳಲಾಗಿದೆ.

ಮಹಿಳಾ ಮೀಸಲು:

ಕ್ಷೇತ್ರ ಮರುವಿಂಗಡನೆ ಬಳಿಕ ವಿವಿಧ ರಾಜ್ಯಗಳಿಂದ ಲೋಕಸಭೆಯನ್ನು ಪ್ರತಿನಿಧಿಸುವ 815 ಜನರ ಪೈಕಿ ಮಹಿಳೆಯರಿಗೆ 273 ಸ್ಥಾನಗಳು ಲಭ್ಯವಾಗಲಿವೆ. ಮಹಿಳಾ ಮೀಸಲು ಸ್ಥಾನಗಳನ್ನು ಪ್ರತಿ 15 ವರ್ಷಕ್ಕೊಮ್ಮೆ ಮರುಹಂಚಿಕೆ (ರೋಸ್ಟರ್‌) ಮಾಡಲಾಗುವುದು. ಸದ್ಯ ಜಾರಿಗೊಳ್ಳಲಿರುವ ಮಹಿಳಾ ಮೀಸಲು ಕ್ಷೇತ್ರಗಳು 2033ರವರೆಗೆ ಅಥವಾ ಈ ಸಂಬಂಧ ಕೇಂದ್ರ ಸರ್ಕಾರ ಮುಂದೆ ಹೊರಡಿಸಲಿಸಲಿರುವ ಆದೇಶಗಳಿಗೆ ಒಳಪಟ್ಟಿರಲಿದೆ ಎಂದು ಕರಡು ವಿಧೇಯಕ ಹೇಳಿದೆ.

ಸಂವಿಧಾನ ತಿದ್ದುಪಡಿ:

ಸ್ಥಾನಬಲ ಏರಿಕೆಗೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ 131ನೇ ತಿದ್ದುಪಡಿ ತರಲು ನಿರ್ಧರಿಸಿದೆ. ಜೊತೆಗೆ ಮುಂದಿನ ಜನಗಣತಿ ಅಂಕಿ ಅಂಶಗಳ ಅನ್ವಯವೇ ಕ್ಷೇತ್ರ ಮರುವಿಂಗಡನೆಗೆ ಆಗಬೇಕು ಎಂದು ಸೂಚಿಸುವ ಸಂವಿಧಾನದ 82ನೇ ವಿಧಿಗೂ ಸರ್ಕಾರ ತಿದ್ದುಪಡಿ ತರಲು ನಿರ್ಧರಿಸಿದೆ. ಈ ಮೂಲಕ 2026ಕ್ಕೆ ಮುನ್ನಾ ಇರುವ ಅಂಕಿ ಅಂಶಗಳನ್ನು ಆಧರಿಸಿ (2011)ಯೇ ಕ್ಷೇತ್ರ ಮರುವಿಂಗಡನೆಯ ಅವಕಾಶ ಪಡೆದುಕೊಳ್ಳಲು ಮುಂದಾಗಿದೆ. ಜೊತೆಗೆ ಈ ತಿದ್ದುಪಡಿ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಇದ್ದು ನಂಟನ್ನೂ ಕಡಿಯಲಿದ್ದು, ಸರ್ಕಾರಕ್ಕೆ ತ್ವರಿತವಾಗಿ ಮಹಿಳಾ ಮೀಸಲು ಜಾರಿಗೆ ಅವಕಾಶ ಮಾಡಿಕೊಡಲಿದೆ.

ಮರುವಿಂಗಡಣೆಗೆ ಆಯೋಗ

ಕರಡು ವಿಧೇಯಕದ ಅನ್ವಯ, ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ಕ್ಷೇತ್ರ ಮರುವಿಂಗಡಣೆ ಆಯೋಗ ರಚನೆಯಾಗಲಿದೆ. ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರು/ ನಾಮನಿರ್ದೇಶಿತ ಚುನಾವಣಾ ಆಯುಕ್ತರು ಮತ್ತು ಸಂಬಂಧಪಟ್ಟ ರಾಜ್ಯದ ಚುನಾವಣಾ ಆಯುಕ್ತರು ಇದರ ಸದಸ್ಯರಾಗಿರುತ್ತಾರೆ.

ರಾಜ್ಯ ಸಮಿತಿಯಲ್ಲಿ ಯಾರ್‍ಯಾರು?

ಅತ್ತ ಪ್ರತಿ ರಾಜ್ಯದಲ್ಲಿ ರಚಿಸಲಾಗುವ ಸಮಿತಿಯಲ್ಲಿ 10 (ಸ್ಪೀಕರ್‌ಗಳಿಂದ ನಾಮನಿರ್ದೇಶನಗೊಂಡ 5 ಸಂಸತ್ ಸದಸ್ಯರು ಮತ್ತು ವಿಧಾನಸಭೆಯ 5 ಸದಸ್ಯರ) ಜನರಿರಲಿದ್ದಾರೆ. ಆದರೆ ಇವರಿಗೆ ಆಯೋಗದ ನಿರ್ಧಾರಗಳಿಗೆ ಸಹಿ ಹಾಕುವ ಅಥವಾ ಮತದಾನದ ಹಕ್ಕು ಇರುವುದಿಲ್ಲ. ಈ ಸಮಿತಿಗಳು ಭೌಗೋಳಿಕ ಸಾಂದ್ರತೆ, ಆಡಳಿತಾತ್ಮಕ ಗಡಿ, ಸಂವಹನ ಸೌಲಭ್ಯ, ಸಾರ್ವಜನಿಕ ಅನುಕೂಲತೆಯ ಆಧಾರದಲ್ಲಿ ಮರುವಿಂಗಡಣೆ ಕೆಲಸ ಮಾಡಲಿದೆ.

ಆಯೋಗದ ಕರ್ತವ್ಯವೇನು?

- 2011ರ ಜನಗಣತಿಯ ಆಧಾರದಲ್ಲಿ ಲೋಕಸಭೆ, ವಿಧಾನಸಭೆಗಳಲ್ಲಿ ಸ್ಥಾನ ಮರುಹಂಚಿಕೆ ಮಾಡುವುದು.

- ಲೋಕಸಭೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಿಗಬೇಕಾದ ಸ್ಥಾನಗಳ ಸಂಖ್ಯೆ ನಿರ್ಧಾರ

- ವಿಧಾನಸಭೆಯಲ್ಲಿ ಒಟ್ಟು ಎಷ್ಟು ಸ್ಥಾನಗಳು ಇರಬೇಕೆಂದು ನಿರ್ದೇಶನ

- ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಎಷ್ಟು ಸೀಟುಗಳು ಸಿಗಬೇಕೆಂಬ ಲೆಕ್ಕಾಚಾರ

- ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಮಿತಿ ವಿಂಗಡಣೆ

- ಉಭಯ ಸದನಗಳಲ್ಲಿ ಮಹಿಳೆಯರಿಗೆ 3ನೇ 1ರಷ್ಟು ಪ್ರಾತಿನಿಧ್ಯ ಖಚಿತಪಡಿಸುವುದು