ಎಚ್ಡಿಕೆ, ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುವಾದಿತ ವರದಿ ? - ಗವರ್ನರ್‌ಗೆ ಆರೋಪಪಟ್ಟಿ ಸಲ್ಲಿಸಲಿರುವ ಲೋಕಾ

| Published : Jan 17 2025, 11:16 AM IST

HD Kumaraswamy
ಎಚ್ಡಿಕೆ, ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುವಾದಿತ ವರದಿ ? - ಗವರ್ನರ್‌ಗೆ ಆರೋಪಪಟ್ಟಿ ಸಲ್ಲಿಸಲಿರುವ ಲೋಕಾ
Share this Article
  • FB
  • TW
  • Linkdin
  • Email

ಸಾರಾಂಶ

 ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಭಿಯೋಜನೆ ಸಂಬಂಧ ಮತ್ತೆ ರಾಜ್ಯಪಾಲರ ಅನುಮತಿಗೆ ಸಾವಿರಾರು ಪುಟಗಳ ಭಾಷಾಂತರದ ವರದಿ ಮೂಲಕ ಕೋರಿಕೆ ಸಲ್ಲಿಸಲು ಲೋಕಾಯುಕ್ತ ವಿಭಾಗದ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ಜೆಡಿಎಸ್ ವರಿಷ್ಠ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಭಿಯೋಜನೆ (ಪ್ರಾಸಿಕ್ಯೂಷನ್‌) ಸಂಬಂಧ ಮತ್ತೆ ರಾಜ್ಯಪಾಲರ ಅನುಮತಿಗೆ ಸಾವಿರಾರು ಪುಟಗಳ ಭಾಷಾಂತರದ ವರದಿ ಮೂಲಕ ಕೋರಿಕೆ ಸಲ್ಲಿಸಲು ಲೋಕಾಯುಕ್ತ ವಿಭಾಗದ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತದ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್‌ಗೆ ಅನುಮತಿಗೆ ಮನವಿ ಮಾಡಲಿದ್ದಾರೆ.

ಕೆಲವೇ ದಿನಗಳಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್‌ ಅನುಮತಿ ನೀಡಿಕೆ ವಿವಾದದ ಚೆಂಡು ರಾಜಭವನ ಅಂಗಳಕ್ಕೆ ಮತ್ತೆ ಬೀಳಲಿದ್ದು, ಇದು ಕೂಡ ಪುನರಪಿ ಆಡಳಿತ-ವಿಪಕ್ಷಗಳ ಮಧ್ಯೆ ರಾಜಕೀಯ ಸಮರಕ್ಕೂ ಕಾರಣವಾಗಲಿದೆಯೇ ಎಂಬ ಕುತೂಹಲ ಮೂಡಿದೆ.

ಆರು ತಿಂಗಳ ಹಿಂದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಭಾಷಾ ಸಮಸ್ಯೆ ಮುಂದಿಟ್ಟು ಲೋಕಾಯುಕ್ತ ಹಾಗೂ ವಿಶೇಷ ತನಿಖಾ ದಳ (ಎಸ್‌ಐಟಿ)ಗೆ ಕಡತಗಳನ್ನು ರಾಜ್ಯಪಾಲ ಥಾವರ್ ಚಂದ್‌ ಗೆಹಲೊತ್‌ ಮರಳಿಸಿದ್ದರು. ಈಗ ಕುಮಾರಸ್ವಾಮಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣಗಳ ಆರೋಪಪಟ್ಟಿಯನ್ನು ಕನ್ನಡದಿಂದ ಇಂಗ್ಲೀಷ್‌ಗೆ ಪೊಲೀಸರು ಭಾಷಾಂತರಿಸಿದ್ದಾರೆ.

ರೆಡ್ಡಿ ವಿರುದ್ಧ 5,500 ಪುಟಗಳ ವರದಿ: 10 ವರ್ಷಗಳ ಹಿಂದೆ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು, ಆರೋಪಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ 2024ರ ಮೇ 31ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಕೋರಿಕೆ ಸ್ವೀಕರಿಸಿದ್ದ ರಾಜ್ಯಪಾಲರು, ಆನಂತರ ಕಡತಗಳನ್ನು ಕನ್ನಡದಿಂದ ಇಂಗ್ಲೀಷ್‌ಗೆ ತರ್ಜುಮೆ ಮಾಡಿ ಸಲ್ಲಿಸುವಂತೆ ಸೂಚಿಸಿ ಲೋಕಾಯುಕ್ತ ಪೊಲೀಸರಿಗೆ ಮರಳಿಸಿದ್ದರು.

ಕೊನೆಗೆ ಲೋಕಾಯುಕ್ತ ಪೊಲೀಸರು, ರಾಜ್ಯ ಇ-ಆಡಳಿತ ಇಲಾಖೆಯ ಭಾಷಾಂತರ ತಜ್ಞರ ಮೂಲಕ ರೆಡ್ಡಿ ವಿರುದ್ಧ ದೋಷಾರೋಪ ಪಟ್ಟಿಯನ್ನು ತರ್ಜುಮೆ ಮಾಡಿಸಿ 5,500 ಪುಟಗಳ ವರದಿಯನ್ನು ಸಿದ್ದಪಡಿಸಿದ್ದಾರೆ. ಈ ವರದಿಯನ್ನು ಲೋಕಾಯುಕ್ತ ಎಡಿಜಿಪಿ ಮನಿಷ್ ಕರ್ಬೀಕರ್ ಹಾಗೂ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ತನಿಖಾಧಿಕಾರಿಯೂ ಡಿವೈಎಸ್ಪಿ ತಿಪ್ಪೇಸ್ವಾಮಿ ಸಲ್ಲಿಸಿದ್ದಾರೆ.

ಈಗ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಹಸಿರು ನಿಶಾನೆ ತೋರಿದ ಕೂಡಲೇ ರಾಜ್ಯಭವನಕ್ಕೆ ಪ್ರಾಸಿಕ್ಯೂಷನ್‌ಗೆ ಕೋರಿಕೆ ಪತ್ರದೊಂದಿಗೆ ರೆಡ್ಡಿ ವಿರುದ್ಧ ಭಾಷಾಂತರದ ಆರೋಪ ಪಟ್ಟಿ ಸಹ ರವಾನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕರಡು ತಿದ್ದುತ್ತಿರುವ ಭಾಷ ತಜ್ಞರು: ಅದೇ ರೀತಿ 2007ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ 550 ಎಕರೆ ಭೂಮಿಯನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಅಕ್ರಮ ಗಣಿ ಗುತ್ತಿಗೆ ಮಂಜೂರಾತಿ ಅಕ್ರಮ ಪ್ರಕರಣ ಸಂಬಂಧ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ತನಿಖೆ ಮುಕ್ತಾಯಗೊಳಿಸಿದ್ದ ಲೋಕಾಯುಕ್ತ ಅಧೀನದ ಎಸ್‌ಐಟಿ ಪೊಲೀಸರು, 2023ರ ನವೆಂಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಲು ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ ಅನುಮತಿ ಕೋರಿದ್ದರು.

ಆದರೆ, ಈ ಪ್ರಕರಣದಲ್ಲಿ ಸಹ ಎರಡು ಬಾರಿ ಸ್ಪಷ್ಟೀಕರಣ ಕೇಳಿದ ರಾಜ್ಯಪಾಲರು, ರೆಡ್ಡಿ ಬಳಿಕ ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ಭಾಷಾ ತೊಡಕಿನ ತಾಂತ್ರಿಕ ಕಾರಣ ಮುಂದಿಟ್ಟಿದ್ದರು. ಅಂತೆಯೇ ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಕನ್ನಡದಿಂದ ಇಂಗ್ಲೀಷ್‌ಗೆ ಸರ್ಕಾರದ ಅಧಿಕೃತ ಭಾಷಾಂತರ ಪರಿಣಿತರ ಮೂಲಕ ತರ್ಜುಮೆಯನ್ನು ಎಸ್‌ಐಟಿ ಅಧಿಕಾರಿಗಳು ಮಾಡಿಸಿದ್ದರು. ಆದರೆ ಭಾಷಾಂತರದಲ್ಲಿ ಬಹಳ ತಪ್ಪುಗಳು ಕಂಡು ಬಂದ ಕಾರಣಕ್ಕೆ ಆ ವರದಿಯನ್ನು ಮತ್ತೊಮ್ಮೆ ಭಾಷಾಂತರಕಾರರಿಗೆ ಕಳುಹಿಸಿ ಕಾಗುಣಿತ ದೋಷ ನಿವಾರಿಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಅದರನ್ವಯ ಕರಡು ತಿದ್ದುಪಡಿಯಲ್ಲಿ ಭಾಷಾಂತರಕಾರರು ಮಗ್ನರಾಗಿದ್ದು, ಕೆಲವೇ ದಿನಗಳಲ್ಲಿ ವರದಿಗೆ ಅಂತಿಮ ರೂಪ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.