ಸಾರಾಂಶ
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗಿಶ್ವರ್, ಮಾಜಿ ಶಾಸಕ ಎ. ಮಂಜುನಾಥ್ ಸೇರಿ ಗಣ್ಯರಿಂದ ಅಂತಿಮ ದರ್ಶನ
ಕನ್ನಡಪ್ರಭವಾರ್ತೆ ಚನ್ನಪಟ್ಟಣಸಿ.ಪಿ.ಯೋಗೀಶ್ವರ್ ಅವರ ಭಾವ ಮಹದೇವಯ್ಯ ನವರ ಅಂತ್ಯಸಂಸ್ಕಾರ ಮಂಗಳವಾರ ತಾಲೂಕಿನ ಚಕ್ಕೆರೆಯ ವಡ್ಡರದೊಡ್ಡಿಯ ಅವರ ತೋಟದ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯಿತು.
ಮಹದೇವಯ್ಯ ಪುತ್ರ ಭರತ್ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪತ್ನಿ ಪುಷ್ಪ, ಮತ್ತೊರ್ವ ಮಗ ಪ್ರಶಾಂತ್ ಸೇರಿದಂತೆ ಕುಟುಂಬ ವರ್ಗದವರು ಉಪಸ್ಥಿತರಿದ್ದರು.ಡಿ.೧ರ ಮಧ್ಯರಾತ್ರಿಯಿದ ನಾಪತ್ತೆಯಾಗಿದ್ದ ಮಹದೇವಯ್ಯ ಅವರ ಮೃತದೇಹ ಚಾಮರಾಜನಗರದ ಹನೂರು ತಾಲೂಕಿನ ರಾಮಪುರದಿಂದ ನಾಲ್ ರೋಡ್‌ಗೆ ತೆರಳುವ ಅರಣ್ಯ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿತ್ತು. ಪತ್ತೆಯಾಗಿದ್ದ ಶವವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮಂಗಳವಾರ ೧೨ಗಂಟೆಯ ಹೊತ್ತಿಗೆ ತಾಲೂಕಿನ ಚಕ್ಕೆರೆ ಗ್ರಾಮಕ್ಕೆ ತೆಗೆದುಕೊಂಡು ಬರಲಾಯಿತು.
ಮಹದೇವಯ್ಯ ಅವರ ಮೃತ ದೇಹ ಗ್ರಾಮದಲ್ಲಿನ ತೋಟದ ಮನೆ ಪ್ರವೇಶಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೃತದೇಹವನ್ನು ಕಂಡು ಕುಟಂಬದವರು ಹಾಗೂ ಹಿತೈಷಿಗಳು ಗದ್ಗದಿತರಾದರು. ಮೃತರ ಅಂತಿಮ ದರ್ಶನಕ್ಕೆ ೧೨ಗಂಟೆಯಿಂದ ಅವಕಾಶ ಕಲ್ಪಿಸಲಾಯಿತು. ಈ ವೇಳೆ ಅವರ ಹಿತೈಷಿಗಳು, ಗ್ರಾಮಸ್ಥರು ಅಂತಿಮ ದರ್ಶನ ಪಡೆದರು. ಆ ನಂತರ ಮಧ್ಯಾಹ್ನ ಸುಮಾರು ೨ಗಂಟೆಯ ಸಮಯದಲ್ಲಿ ಮಹದೇವಯ್ಯ ಪುತ್ರ ಭರತ್ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದರು.ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೀಶ್ವರ್, ಮಾಜಿ ಶಾಸಕ ಎ.ಮಂಜುನಾಥ್, ಬಮೂಲ್ ನಿರ್ದೇಶಕ ಪಿ.ನಾಗರಾಜ್, ರಾಮನಗರ ನಗರಸಭಾ ಸದಸ್ಯ ಶೇಷಾದ್ರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜು ಸ್ಥಳೀಯ ಮುಖಂಡರಾದ ಹರೂರು ರಾಜಣ್ಣ, ಮಲವೇಗೌಡ, ಲಿಂಗೇಶ್ ಕುಮಾರ್, ಆನಂದಸ್ವಾಮಿ, ಮುದ್ದುಕೃಷ್ಣ ಸೇರಿದಂತೆ ಹಲವು ಮುಖಂಡರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.
---ಪೊಟೋ೫ಸಿಪಿಟಿ೨,೩,: ಕುಟಂಬವರ್ಗದವರು ಹಾಗೂ ಗ್ರಾಮಸ್ಥರು ಮಹದೇವಯ್ಯ ಅಂತಿಮ ದರ್ಶನ ಪಡೆದರು.