ಗಣೇಶಮೂರ್ತಿ ವಿಸರ್ಜನೆ ವೇಳೆ ಸೌಹಾರ್ದತೆ ಕಾಪಾಡಿ: ಡೀಸಿ ಶಿಲ್ಪಾನಾಗ್

| Published : Oct 14 2023, 01:00 AM IST

ಗಣೇಶಮೂರ್ತಿ ವಿಸರ್ಜನೆ ವೇಳೆ ಸೌಹಾರ್ದತೆ ಕಾಪಾಡಿ: ಡೀಸಿ ಶಿಲ್ಪಾನಾಗ್
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಪಟ್ಟಣದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮವು ಅ.೧೬ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಯಿತು.
ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳ ಸಭೆ । ಮುಖಂಡರು, ಅಧಿಕಾರಿಗಳಿಗೆ ಸೂಚನೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ಚಾಮರಾಜನಗರ ಪಟ್ಟಣದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮವು ಅ.೧೬ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿ ಸಾಹು ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿದ್ಯಾಗಣಪತಿ ಮಂಡಳಿ ಪದಾಧಿಕಾರಿಗಳು ವಿವಿಧ ಕೋಮು ಸಮುದಾಯಗಳ ಮುಖಂಡರು ಪ್ರತಿನಿಧಿಗಳು ಪಾಲ್ಗೊಂಡರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ, ಈ ಹಿಂದಿನಿಂದಲೂ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಬರಲಾಗಿದೆ. ಈ ಬಾರಿಯು ಇದೇ ರೀತಿಯ ಸಾಮರಸ್ಯ ಮುಂದುವರೆಯಲಿ. ಎಲ್ಲರೂ ಸೇರಿ ವಿಸರ್ಜನಾ ಮಹೋತ್ಸವ ಯಶಸ್ವಿಗಳಿಸೋಣ. ವಿಸರ್ಜನಾ ಮಹೋತ್ಸವದಂದು ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಬೇಕು. ವಿದ್ಯುತ್ ಸೇರಿದಂತೆ ಇತರೆ ಸುರಕ್ಷತಾ ಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿ ವಹಿಸಬೇಕು, ಸುಸೂತ್ರವಾಗಿ ಕಾರ್ಯಕ್ರಮ ನಡೆಯಲು ಅವಶ್ಯವಿರುವ ಸಿದ್ದತೆಗಳನ್ನು ಕೈಗೊಂಡಿರಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಮಾತನಾಡಿ, ಈ ಹಿಂದಿನಿಂದಲೂ ಸರ್ವರು ಸೇರಿ ಗಣೇಶ ವಿಸರ್ಜನಾ ಮಹೋತ್ಸವವನ್ನು ಶಾಂತಿಯಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ. ಈ ಪರಂಪರೆ ಆದರ್ಶವಾಗಿದೆ. ನಿಗದಿತ ಅವಧಿಯೊಳಗೆ ನಿಯಮಾನುಸಾರ ಎಲ್ಲವೂ ಪೂರ್ಣಗೊಳ್ಳಲಿ. ಮುಂಜಾಗ್ರತಾ ಕ್ರಮಗಳು ಪಾಲನೆಯಾಗಲಿ. ಎಲ್ಲ ಸಮುದಾಯಗಳು ಗಣಪತಿ ವಿಸರ್ಜನಾ ಮಹೋತ್ಸವ ಸುಗಮವಾಗಿ ನಡೆಯಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದರು. ವಿವಿಧ ಸಮುದಾಯಗಳ ಮುಖಂಡರು ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ, ತಹಶೀಲ್ದಾರ್ ಬಸವರಾಜು, ಮಂಜುಳಾ, ಜಯಪ್ರಕಾಶ್, ಡಿವೈಎಸ್‌ಪಿ ಲಕ್ಷ್ಮಯ್ಯ, ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮದಾಸ್, ಶ್ರೀ ವಿದ್ಯಾ ಗಣಪತಿ ಮಂಡಳಿಯ ಪದಾಧಿಕಾರಿಗಳು, ವಿವಿಧ ಸಮುದಾಯ, ಕೋಮಿನ ಮುಖಂಡರು, ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. --------------------------- 13ಸಿಎಚ್‌ಎನ್‌17 ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿ ಸಾಹು ಅವರ ಸಮ್ಮುಖದಲ್ಲಿ ವಿದ್ಯಾಗಣಪತಿ ಮಂಡಳಿ ಪದಾಧಿಕಾರಿಗಳು ವಿವಿಧ ಕೋಮು ಸಮುದಾಯಗಳ ಮುಖಂಡರು ಪ್ರತಿನಿಧಿಗಳ ಸಭೆ ನಡೆಯಿತು. --------------