ಮಲಿವಾಲ್‌ ಎಡಗಾಲು, ಬಲಗೆನ್ನೆ ಮೇಲೆ ಗಾಯದ ಗುರುತು ಪತ್ತೆ

| Published : May 19 2024, 01:53 AM IST / Updated: May 19 2024, 04:33 AM IST

ಸಾರಾಂಶ

ಬಿಭವ್‌ ಕುಮಾರ್‌ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಅವರ ಎಡಗಾಲು ಹಾಗೂ ಬಲಗೆನ್ನೆ ಮೇಲೆ ತರಚಿದ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ವೈದ್ಯಕೀಯ ವರದಿ ತಿಳಿಸಿದೆ.

 ನವದೆಹಲಿ :  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಪ್ತ ಬಿಭವ್‌ ಕುಮಾರ್‌ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಅವರ ಎಡಗಾಲು ಹಾಗೂ ಬಲಗೆನ್ನೆ ಮೇಲೆ ತರಚಿದ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ವೈದ್ಯಕೀಯ ವರದಿ ತಿಳಿಸಿದೆ.

ಮಲಿವಾಲ್‌ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿ ಬಿಭವ್‌ಕುಮಾರ್‌ ಅವರನ್ನು ಬಂಧಿಸಿದ್ದಾರೆ. ‘ಬಿಭವ್‌ ಕುಮಾರ್‌ ಬಲಯುತವಾಗಿ ಪದೇ ಪದೇ ಹೊಡೆದರು. ಏಳರಿಂದ ಎಂಟು ಬಾರಿ ಕೆನ್ನೆಗೆ ಬಾರಿಸಿದರು, ಒದ್ದರು’ ಎಂದು ಎಫ್‌ಐಆರ್‌ನಲ್ಲಿ ನಮೂದಾಗಿದೆ. ಈ ಎಫ್‌ಐಆರ್‌ ದಾಖಲು ಬೆನ್ನಲ್ಲೇ ಮಲಿವಾಲ್‌ ಅವರನ್ನು ದೆಹಲಿಯ ಏಮ್ಸ್‌ನಲ್ಲಿ ಶುಕ್ರವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆ ವರದಿ ಇದೀಗ ಬಂದಿದ್ದು, ಅದರಲ್ಲಿ ‘ಎಡಗಾಲಿನಲ್ಲಿ 3*2 ಹಾಗೂ ಬಲಗೆನ್ನೆಯಲ್ಲಿ ಕಣ್ಣಿನ ಕೆಳಭಾಗದಲ್ಲಿ 2*2ರ ಜಾಗದಲ್ಲಿ ತರಚಿದ ಗಾಯಗಳಾಗಿವೆ’ ಎಂಬ ಮಾಹಿತಿ ಇದೆ.