ಸಾರಾಂಶ
ಬೆಂಗಳೂರು : ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಖರ್ಗೆ ಅವರ ಜತೆಗೆ ಸುಮಾರು ಮುಕ್ಕಾಲು ಗಂಟೆ ಚರ್ಚೆ ನಡೆಸಿದರು. ಪರಮೇಶ್ವರ್ ಅವರ ಈ ಹಠಾತ್ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಬೆಳಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಜತೆ ಒಂದೇ ಕಾರಿನಲ್ಲಿ ಆಗಮಿಸಿದ ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷರ ಜತೆಗೆ ಮಾತುಕತೆ ನಡೆಸಿದರು. ದಲಿತರ ಪ್ರತ್ಯೇಕ ಸಭೆಗೆ ಹೈಕಮಾಂಡ್ ಅನುಮತಿ ನಿರಾಕರಿಸಿರುವ ವಿಚಾರವಾಗಿ ದಲಿತ ಸಚಿವರೆಲ್ಲ ದೆಹಲಿಯಲ್ಲಿ ವರಿಷ್ಠರ ಭೇಟಿಗೆ ತೀರ್ಮಾನಿಸಿರುವ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಪರಮೇಶ್ವರ್ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಖರ್ಗೆ ನಿವಾಸದಿಂದ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಇದೊಂದು ಸೌಜನ್ಯದ ಭೇಟಿ ಅಷ್ಟೇ. ನಾವು ಒಂದೇ ಕುಟುಂಬ, ಹೀಗಾಗಿ ಸಹಜವಾಗಿ ಭೇಟಿ ಮಾಡಿದ್ದೇನೆ. ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ, ರಾಜಕೀಯ ಚರ್ಚೆಯೂ ಇಲ್ಲ ಎಂದು ಹೇಳಿದರು.