ಮಂಡ್ಯ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರುಗೆ ಒಲಿಯದ ‘ಸ್ಟಾರ್’..!

| Published : Jun 05 2024, 12:30 AM IST / Updated: Jun 05 2024, 04:38 AM IST

Star Chandru
ಮಂಡ್ಯ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರುಗೆ ಒಲಿಯದ ‘ಸ್ಟಾರ್’..!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿದ್ದ ಸ್ಟಾರ್ ಚಂದ್ರು ಅವರಿಗೆ ಹೆಸರಿನಲ್ಲಿದ್ದ ಸ್ಟಾರ್ ಚುನಾವಣೆಯಲ್ಲಿ ಅವರ ಕೈಹಿಡಿಯಲೇ ಇಲ್ಲ.  

ಮಂಡ್ಯ ಮಂಜುನಾಥ

 ಮಂಡ್ಯ :  ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿದ್ದ ಸ್ಟಾರ್ ಚಂದ್ರು ಅವರಿಗೆ ಹೆಸರಿನಲ್ಲಿದ್ದ ಸ್ಟಾರ್ ಚುನಾವಣೆಯಲ್ಲಿ ಅವರ ಕೈಹಿಡಿಯಲೇ ಇಲ್ಲ. ಹೊಸ ಮುಖವಾಗಿ ಪಾದಾರ್ಪಣೆ ಮಾಡಿದ ವೆಂಕಟರಮಣೇಗೌಡ ಅವರನ್ನು ಜಿಲ್ಲೆಯ ಜನರು ಸಾರಾಸಗಟಾಗಿ ತಿರಸ್ಕರಿಸುವುದರೊಂದಿಗೆ ಕಾಂಗ್ರೆಸ್ ನಡೆಸಿದ ಹೊಸ ಪ್ರಯೋಗ ವಿಫಲಗೊಳ್ಳುವಂತೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗೆ ಸಮರ್ಥ ಅಭ್ಯರ್ಥಿಗಳಿದ್ದರೂ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಅವರ ಮನವೊಲಿಸಿ ಕ್ಷೇತ್ರಕ್ಕೆ ಕರೆತಂದು ನಿಲ್ಲಿಸುವ ಪ್ರಯತ್ನಗಳು ಕೈ ಪಾಳಯದಲ್ಲಿ ನಡೆಯಲೇ ಇಲ್ಲ. ಹಲವು ಚುನಾವಣೆಗಳ ಗೆಲುವಿನಿಂದ ಕಾಂಗ್ರೆಸ್ಸಿಗರು ಉಬ್ಬಿಹೋಗಿದ್ದರು. ಜಿಲ್ಲೆಯಲ್ಲಿ ಜೆಡಿಎಸ್ ಕತೆ ಮುಗಿದೇ ಹೋಯಿತೆಂದು ಭಾವಿಸಿದ್ದರು. ಜಿಲ್ಲೆಯಲ್ಲಿ ಮುಂದೆ ನಮ್ಮದೇ ಅಧಿಪತ್ಯ ಎಂದು ಭಾವನೆಯೊಂದಿಗೆ ತೇಲಾಡುತ್ತಾ ಕುರುಡಾದ ಕಾಂಗ್ರೆಸ್ಸಿಗರು ವಿರೋಧಿ ಪಾಳಯದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಅಭ್ಯರ್ಥಿಯನ್ನು ಸಜ್ಜುಗೊಳಿಸುವಲ್ಲಿ ವಿಫಲರಾದರು.

ಆರಂಭದಲ್ಲೇ ಎಡವಿದ ಕಾಂಗ್ರೆಸ್:

ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲ. ಜೆಡಿಎಸ್‌ನಿಂದ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅಭ್ಯರ್ಥಿಯಾಗುವರೆಂದು ಕಾಂಗ್ರೆಸ್ಸಿಗರು ಬಲವಾಗಿ ನಂಬಿದ್ದರು. ಎದುರಾಳಿ ಅಭ್ಯರ್ಥಿ ಯಾರಾಗುತ್ತಾರೆಂಬುದನ್ನು ಗುರುತಿಸುವಲ್ಲಿ ಎಡವಿದ ಕಾಂಗ್ರೆಸ್ ನಾಯಕರು ಅತಿಯಾದ ಆತ್ಮ ವಿಶ್ವಾಸದಿಂದ ಜಿಲ್ಲೆಯ ಜನರಿಗೆ ಪರಿಚಿತರಲ್ಲದ, ರಾಜಕೀಯದ ಗಂಧ-ಗಾಳಿದ ಗೊತ್ತಿಲ್ಲದ ವೆಂಕಟರಮಣೇಗೌಡ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದರು. ಆರಂಭದಲ್ಲೇ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಕಾಂಗ್ರೆಸ್ ಪಕ್ಷ ಎಡವಿತ್ತು.

ಸೂಕ್ಷ್ಮತೆ ಪ್ರದರ್ಶಿಸಿದ ಜೆಡಿಎಸ್:

ಜೆಡಿಎಸ್-ಬಿಜೆಪಿ ಮೈತ್ರಿ ನಡುವೆಯೂ ನಿಧಾನವಾಗಿ ಆಲೋಚಿಸಿ ಸಮರ್ಥರನ್ನು ಕಣಕ್ಕಿಳಿಸದೆ ಅಭ್ಯರ್ಥಿಯ ಆಯ್ಕೆಯನ್ನು ಆತುರಾತುರವಾಗಿ ಘೋಷಿಸಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ದಳಪತಿಗಳು ಅಭ್ಯರ್ಥಿಯ ಘೋಷಿಸುವ ವಿಚಾರದಲ್ಲಿ ದುಡುಕಿನ ನಿರ್ಧಾರ ಮಾಡಲೇ ಇಲ್ಲ. ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರನ್ನು ಮುಂದೆ ತೋರಿಸಿಕೊಂಡೇ ಕಾಂಗ್ರೆಸ್‌ನವರನ್ನು ಗೊಂದಲಕ್ಕೆ ಸಿಲುಕಿಸಿದರು. ಚುನಾವಣೆ ಸಂಬಂಧ ಕಾಂಗ್ರೆಸ್‌ನೊಳಗೆ ನಡೆಯುತ್ತಿದ್ದ ಬೆಳವಣಿಗೆ, ಪಕ್ಷೇತರ ಸಂಸದೆ ಸುಮಲತಾ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ದಳಪತಿಗಳು ಕೊನೇ ಘಳಿಗೆಯವರೆಗೆ ಅಭ್ಯರ್ಥಿ ಸುಳಿವನ್ನು ಬಿಟ್ಟುಕೊಡಲಿಲ್ಲ. ಅಂತಿಮವಾಗಿ ಎಚ್‌ಡಿಕೆ ರಂಗಪ್ರವೇಶದೊಂದಿಗೆ ಶಾಕ್ ನೀಡಿದರು.

ಚಂದ್ರುಗೆ ರಾಜಕೀಯದ ಅರಿವಿಲ್ಲ:

ರಾಜಕೀಯದ ಅರಿವೇ ಇಲ್ಲದ ಸ್ಟಾರ್ ಚಂದ್ರು ಅವರು ಜಿಲ್ಲೆಯೊಳಗೆ ಸಚಿವ ಎನ್.ಚಲುವರಾಯಸ್ವಾಮಿ ನಾಯಕತ್ವ, ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿಯುತ್ತಾರೆಂಬ ವಿಚಾರ ಮೊದಲೇ ಗೊತ್ತಿದ್ದರೆ ಬಹುಶಃ ಅವರು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲವೆಂದು ಮೂಲಗಳಿಂದ ತಿಳಿದುಬಂದಿದೆ.

ಕಾರ್ಯತಂತ್ರಗಳು ವಿಫಲ:

ವೆಂಕಟರಮಣೇಗೌಡರು ಅಭ್ಯರ್ಥಿಯಾಗಿ ಘೋಷಣೆಯಾದ ೨೫ ದಿನಗಳ ಬಳಿಕ ಕುಮಾರಸ್ವಾಮಿ ಹೆಸರು ಚಾಲ್ತಿಗೆ ಬಂದಿತು. ಆ ವೇಳೆಗೆ ಮಂಡ್ಯ ಲೋಕಸಭಾ ಕ್ಷೇತ್ರದೊಳಗೆ ವೆಂಕಟರಮಣೇಗೌಡ ಒಂದು ಸುತ್ತಿನ ಪ್ರಚಾರವನ್ನೇ ಮುಗಿಸಿದ್ದರು. ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಯಾದ ನಂತರದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಚುನಾವಣೆಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದರು. ಪ್ರಚಾರಕ್ಕೆ ಇನ್ನಷ್ಟು ಬಿರುಸು ನೀಡಿದರು. ಎಲ್ಲಾ ಜಾತಿ, ಜನಾಂಗ, ಸಮುದಾಯದವರ ಸಭೆಗಳನ್ನು ನಡೆಸಿ ಓಟುಗಳು ಕಾಂಗ್ರೆಸ್ ಕಡೆಗೆ ಹರಿದುಬರುವಂತೆ ಪ್ರಯತ್ನ ನಡೆಸಿದರು. ತಮ್ಮದೇ ಆದ ಚುನಾವಣಾ ತಂತ್ರಗಾರಿಕೆಯನ್ನು ಪ್ರಯೋಗಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ನಾನಾ ರೀತಿಯ ಕಾರ್ಯತಂತ್ರ ರೂಪಿಸಿದರು. ಅದಕ್ಕೆ ಕಾಂಗ್ರೆಸ್ ಶಾಸಕರೆಲ್ಲರೂ ಕೈಜೋಡಿಸಿದರು. ವಿಪರ್ಯಾಸವೆಂಬಂತೆ ಅದ್ಯಾವುದೂ ಕನಿಷ್ಠ ಮಟ್ಟದ ಫಲವನ್ನು ಕಾಂಗ್ರೆಸ್‌ಗೆ ನೀಡದಿರುವುದನ್ನು ಫಲಿತಾಂಶ ಎತ್ತಿ ತೋರಿಸುತ್ತಿದೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಕಾಂಗ್ರೆಸ್ಸಿಗರಿಗೆ ಅದು ನಿರಾಸೆ ಮೂಡಿಸಿದೆ. ಅದರಿಂದಲೂ ನಿರೀಕ್ಷೆಯಷ್ಟು ಮತಗಳು ಕಾಂಗ್ರೆಸ್ ಕಡೆಗೆ ಹರಿದುಬಂದಿಲ್ಲ. ನಟ ದರ್ಶನ್ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆತಂದರೂ ಯುವ ಮತದಾರರು ಆಕರ್ಷಿತರಾಗಿಲ್ಲ. ಎಲ್ಲಾ ಕಡೆಯಿಂದಲೂ ಚಂದ್ರುಗೆ ಅದೃಷ್ಟ ಕೈಕೊಟ್ಟ ಪರಿಣಾಮ ಗೆಲುವಿನ ಗುರಿ ಮುಟ್ಟಲಾಗದೆ ಮಧ್ಯಂತರದಲ್ಲೇ ಮುಗ್ಗರಿಸಿದರು.

ಮಾತುಗಾರಿಕೆ, ನಾಯಕತ್ವ ಕೊರತೆ:

ವೆಂಕಟರಮಣೇಗೌಡರ ಉರುಫ್ ಸ್ಟಾರ್ ಚಂದ್ರು ಅವರ ದೌರ್ಬಲ್ಯವೆಂದರೆ ಮಾತುಗಾರಿಕೆ, ನಾಯಕತ್ವ ಗುಣವಿಲ್ಲದಿರುವುದು. ಅವರು ಚುನಾವಣಾ ಪ್ರಚಾರದಲ್ಲೆಲ್ಲೂ ಜನರ ಗಮನಸೆಳೆಯುವ, ಆಕರ್ಷಿಸುವಂತಹ ಒಂದು ಮಾತೂ ಕೇಳಿಬರಲೇ ಇಲ್ಲ. ಅದನ್ನು ಕಾಂಗ್ರೆಸ್ ನಾಯಕರೂ ಅವರಿಗೆ ಮನದಟ್ಟು ಮಾಡಿಕೊಡಲಿಲ್ಲ. ಜನರೆದುರೇ ಮಾತನಾಡಲಾಗದ ಅಭ್ಯರ್ಥಿಯನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳುವುದಕ್ಕೆ ಜಿಲ್ಲೆಯ ಮತದಾರರೂ ಹಿಂಜರಿದಂತೆ ಕಂಡುಬರುತ್ತಿದೆ. ಉದ್ಯಮಿಯಾಗಿ ಆ ಕ್ಷೇತ್ರದಲ್ಲಿ ಅದ್ಭುತವಾದ ಬೆಳವಣಿಗೆಯನ್ನು ಕಂಡು ಅದರಲ್ಲಿ ಸ್ಟಾರ್ ಆಗಿದ್ದವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತಂದು ಹರಕೆಯ ಕುರಿಯನ್ನಾಗಿ ಮಾಡಿದರು ಎಂಬ ಮಾತುಗಳು ಜನಮಾನಸದಲ್ಲಿ ಕೇಳಿಬರಲಾರಂಭಿಸಿವೆ.